ADVERTISEMENT

ಗೋವಿಂದ ಪೈಗಳ ಸಾಹಿತ್ಯ ಅಧ್ಯಯನಶೀಲರಿಗೆ ಪ್ರೇರಣೆ: ಸಾಹಿತಿ ಹಂಪಂ ನಾಗರಾಜಯ್ಯ

ಗೋವಿಂದ ಪೈ ಸಂಶೋಧನ ಸಂಪುಟದ ಪರಿಷ್ಕೃತ ದ್ವಿತೀಯ ಮುದ್ರಣ ಭಾಗ–2 ಅನಾವರಣ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 0:30 IST
Last Updated 24 ಮಾರ್ಚ್ 2025, 0:30 IST
ಸಾಹಿತಿ ಹಂಪಂ ನಾಗರಾಜಯ್ಯ ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ ಮಾಡಲಾಯಿತು
ಸಾಹಿತಿ ಹಂಪಂ ನಾಗರಾಜಯ್ಯ ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಉಡುಪಿ: ‘ರಾಷ್ಟ್ರಕವಿ ಗೋವಿಂದ ಪೈ ಅವರ ಸಂಶೋಧನಾ ಬರಹಗಳು ಮತ್ತು ಸೃಜನಾತ್ಮಕ ಸಾಹಿತ್ಯ ಭಂಡಾರವು ಅಧ್ಯಯನಶೀಲರಿಗೆ ಪ್ರೇರಣೆಯಾಗಿದೆ’ ಎಂದು ಸಾಹಿತಿ ಹಂಪಂ ನಾಗರಾಜಯ್ಯ ಹೇಳಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್‌ ಹೈಯರ್ ಎಜುಕೇಶನ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗೋವಿಂದ ಪೈ ಸಂಶೋಧನ ಸಂಪುಟ ಪರಿಷ್ಕೃತ ದ್ವಿತೀಯ ಮುದ್ರಣ ಭಾಗ–2ರ ಅನಾವರಣ ಕಾರ್ಯಕ್ರಮದಲ್ಲಿ 2024ನೇ ಸಾಲಿನ ‘ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

‘ಗೋವಿಂದ ಪೈ ಬರೆದ ದ್ರಾವಿಡ ಲಯದ ಹಾಡುಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೈಲುಗಲ್ಲು. ಸಂಶೋಧನೆಯ ಜೊತೆಗೆ ಕಾವ್ಯದ ಸರ್ವ ಸ್ವಾರಸ್ಯವನ್ನು ಕಟ್ಟಿಕೊಟ್ಟಿರುವ ಅವರು ತಪಸ್ವಿಯಂತೆ ಬದುಕಿದವರು. ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಿರುವುದು ಧನ್ಯತಾ ಭಾವ ಮೂಡಿಸಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸಂಶೋಧಕ ಬಿ.ಎ. ವಿವೇಕ ರೈ ಮಾತನಾಡಿ, ‘ಹಣದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಹಣದ ವ್ಯಾಮೋಹ ತ್ಯಜಿಸಿದಾಗ ವಿದ್ವತ್ತು ಒಲಿಯುತ್ತದೆ. ವಿದ್ವತ್ತು ಹಣಕ್ಕಿಂತ ಮಿಗಿಲಾದುದು’ ಎಂದರು.

ಕರಾವಳಿಯ ಜನರಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಯಬೇಕು. ನಿಷೇಧಾತ್ಮಕ ಚರ್ಚೆಗಳ ಮೂಲಕ ಸಮಯ ವ್ಯರ್ಥ ಮಾಡುವ ಬದಲು ಸಂಶೋಧನ ಕೃತಿಗಳನ್ನು ಓದುವ ಮೂಲಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.

ಗೋವಿಂದ ಪೈ ಸಂಶೋಧನಾ ಸಂಪುಟದ ಒಂದೊಂದು ಲೇಖನಗಳನ್ನು ಇಟ್ಟುಕೊಂಡು ಸಂಶೋಧನೆ ಮಾಡಬಹುದು. ಮೊಬೈಲ್‌ನಲ್ಲಿ ಅನಗತ್ಯ ವಿಡಿಯೊಗಳನ್ನು ಹಂಚಿಕೊಳ್ಳುವುದಕ್ಕಿಂತ ಯುವ ಪೀಳಿಗೆ ಇಂತಹ ಕೃತಿಗಳನ್ನು ಓದಿ ಸಂಶೋಧನೆಯತ್ತ ಚಿತ್ತ ಹರಿಸಬೇಕು ಎಂದು ಪ್ರತಿಪಾದಿಸಿದರು.

ಮಣಿಪಾಲದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್‌.ಎಸ್‌. ಬಲ್ಲಾಳ್‌ ಕೃತಿ ಅನಾವರಣಗೊಳಿಸಿದರು. ನಿವೃತ್ತ ಪ್ರಾಧ್ಯಾಪಕ ತಾಳ್ತಜೆ ವಸಂತ ಕುಮಾರ್‌ ಅಭಿನಂದನಾ ಭಾಷಣ ಮಾಡಿದರು. ಮಾಹೆ ಕುಲಪತಿ ಲೆಫ್ಟಿನೆಂಟ್‌ ಜನರಲ್‌ ಎಂ.ಡಿ. ವೆಂಕಟೇಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಂಶೋಧಕ ಪಾದೆಕಲ್ಲು ವಿಷ್ಣುಭಟ್‌, ಸಾಹಿತಿ ಮುರಳೀಧರ ಉಪಾಧ್ಯ ಹಿರಿಯಡ್ಕ, ಎಂಜಿಎಂ ಕಾಲೇಜು ಪ್ರಾಂಶುಪಾಲ ಲಕ್ಷ್ಮಿನಾರಾಯಣ ಕಾರಂತ ಭಾಗವಹಿಸಿದ್ದರು.

ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಆರ್‌ಆರ್‌ಸಿಯ ಸಹ ಸಂಶೋಧಕ ಅರುಣ್ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.