ಪಡುಬಿದ್ರಿ: ‘ನಮ್ಮ ಹಿರಿಯರ ಆಹಾರ ಪದ್ಧತಿಗಳಿಂದ ಆರೋಗ್ಯವಂತರಾಗಿ ಬದುಕು ನಡೆಸುತ್ತಿದ್ದರು. ಇಂದಿನ ಆಧುನಿಕ ಶೈಲಿಯ ಆಹಾರ ಪದ್ದತಿಯಿಂದಾಗಿ ಎಳೆ ವಯಸ್ಸಿನಲ್ಲೇ ಮಕ್ಕಳು ಹೃದಯಘಾತಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಲೇಖಕಿ ವಿಜಯಲಕ್ಷ್ಮೀ ಕಟೀಲು ಹೇಳಿದರು.
ಅವರು ಪಡುಬಿದ್ರಿ ಸಹಕಾರಿ ಸಂಗಮದಲ್ಲಿ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಆಯೋಜಿಸಿದ್ದ, ತುಳುವ ಸಂಸ್ಕೃತಿಯ ಗತ ವೈಭವ ಸಾರುವ ‘ಆಟಿದ ಗಮ್ಮತ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೋಟರಿ ಕ್ಲಬ್ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿ, ಆಟಿ ಸಂಭ್ರಮಿಸುವ ಕಾಲವಲ್ಲ ಕಷ್ಟದ ದಿನಗಳವು. ಆಟಿಯಲ್ಲಿ ನಮ್ಮನ್ನು ಕಾಯುವ ದೈವಗಳು ಘಟ್ಟ ಸೇರುತ್ತವೆ ಎಂಬುದು ಶುದ್ಧ ಸುಳ್ಳು. ತಿನ್ನಲು ಆಹಾರವಿಲ್ಲದಿರುವಾಗ, ದೈವಕ್ಕೆ ಆರಾಧನೆ ಮಾಡಲು ಸಾಧ್ಯವಿಲ್ಲ ಎಂದಾಗ ಅನಿವಾರ್ಯ ಸ್ಥಿತಿಯಲ್ಲಿ ಈ ಕತೆಯನ್ನು ಕಟ್ಟಲಾಗಿದೆ. ತುಳುನಾಡಿನ ಸಂಸ್ಕೃತಿಯನ್ನು ಎಳೆಯ ಪ್ರಾಯದಲ್ಲಿಯೇ ಬೆಳೆಸಬೇಕಾಗಿದೆ. ಈ ಬಗ್ಗೆ ಶಾಲಾ– ಕಾಲೇಜುಗಳಲ್ಲಿ ಇಂಹತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಕೃಷಿಕ ಶ್ರೀಕಾಂತ್ ಆಚಾರ್ಯ, ನಾಟಿ ವೈದ್ಯೆ ಸುನಂದ ಡಿ. ಸಾಲ್ಯಾನ್, ಗ್ರಾಮ ದೇಗುಲದಲ್ಲಿ ಸೇ ಮಾಡುತ್ತಿರುವ ಸುಶೀಲಾ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಮೊದಲು ಇನ್ನರ್‌ವೀಲ್ ಸಂಸ್ಥೆಯ ನಮೃತಾ ಮಹೇಶ್ ಮುಂದಾಳತ್ವದಲ್ಲಿ ಸಂಸ್ಥೆಯ ಮಹಿಳೆಯರಿಗೆ ‘ತುಳುವ ಸಿಂಗಾರಿ’, ಪುರುಷರಿಗೆ ‘ಪೆರ್ಮೆದ ತುಳುವೆ’ ಎಂಬ ಸ್ಪರ್ಧೆ ನಡೆಸಲಾಯಿತು. ಮಹಿಳಾ ವಿಭಾಗದಲ್ಲಿ ಸುನೀತಾ ಭಕ್ತವತ್ಸಲಾ, ಗೀತಾ ಅರುಣ್ ಮತ್ತು ಪುರುಷರ ವಿಭಾಗದಲ್ಲಿ ಬಿ.ಎಸ್. ಆಚಾರ್ಯ ಪ್ರಶಸ್ತಿ ಗಳಿಸಿದರು.
ರೋಟರಿ ಅಧ್ಯಕ್ಷ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇನ್ನರ್‌ವೀಲ್ ಅಧ್ಯಕ್ಷೆ ಸ್ನೇಹಾ ಪ್ರವೀಣ್, ಉದ್ಯಮಿ ವೈ. ದೀಪಕ್ ಕುಮಾರ್, ರೋಟರಿ ಕ್ಲಬ್ ಕಾರ್ಯದರ್ಶಿ ಪವನ್ ಸಾಲ್ಯಾನ್, ಇನ್ನರ್‌ವೀಲ್ ಕಾರ್ಯದರ್ಶಿ ಸುನಂದ ಸಾಲ್ಯಾನ್, ಕಾರ್ಯಕ್ರಮ ನಿರ್ದೇಶಕರಾದ ಸುಚರಿತ ಅಂಚನ್, ಬಿ.ಎಸ್.ಆಚಾರ್ಯ, ಕಾರ್ತಿಕ್ ಕರ್ಕೇರ ಭಾಗವಹಿಸಿದ್ದರು. ಸಂತೋಷ್ ನಂಬಿಯಾರ್ ನಿರ್ವಹಿಸಿದರು. ಸುನಿಲ್ ಕುಮಾರ್ ಸ್ವಾಗತಿಸಿದರು. ಸುನಂದಾ ವಂದಿಸಿದರು. ಸಂಸ್ಥೆಯ ಸದಸ್ಯರು ತಯಾರಿಸಿ ತಂದಿದ್ದ ವಿವಿಧ ಬಗೆಯ ಆಟಿ ಖಾದ್ಯಗಳನ್ನು ನೂರಾರು ಮಂದಿ ಸವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.