ADVERTISEMENT

ಉಡುಪಿ ಜಿಲ್ಲೆಯಲ್ಲಿ ತಗ್ಗದ ನೆರೆ: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 12:26 IST
Last Updated 8 ಜುಲೈ 2022, 12:26 IST
ಬೈಂದೂರು ತಾಲ್ಲೂಕಿನ ನಾವುಂದ ಗ್ರಾಮ ನೆರೆಯಿಂದ ಜಲಾವೃತಗೊಂಡಿರುವುದು.
ಬೈಂದೂರು ತಾಲ್ಲೂಕಿನ ನಾವುಂದ ಗ್ರಾಮ ನೆರೆಯಿಂದ ಜಲಾವೃತಗೊಂಡಿರುವುದು.   

ಉಡುಪಿ: ಸೌಪರ್ಣಿಕ ನದಿ ಉಕ್ಕಿ ಹರಿದು ಜಲಾವೃತಗೊಂಡಿರುವ ಬೈಂದೂರು ತಾಲ್ಲೂಕಿನ ನಾವುಂದದಲ್ಲಿ ನೆರೆ ತಗ್ಗಿಲ್ಲ. ಮಲೆನಾಡಿನ ತಪ್ಪಲಿನಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನಾವುಂದದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. 100ಕ್ಕೂಹೆಚ್ಚುಮನೆಗಳು ಭಾಗಶಃ ಮುಳುಗಡೆಯಾಗಿವೆ.

ಜಿಲ್ಲಾಡಳಿತ ನೆರೆ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಮುಂದುವರಿಸಿದೆ. ಆದರೆ, ಬಹುತೇಕರು ಕಾಳಜಿ ಕೇಂದ್ರಗಳಿಗೆ ತೆರಳಲು ಒಪ್ಪುತ್ತಿಲ್ಲ. ಪ್ರತಿ ವರ್ಷ ನೆರೆ ಬಂದು ಗ್ರಾಮ ನಲುಗುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬದಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಮರವಂತೆಯ ತೀರ ಪ್ರದೇಶದಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ತೀರದಲ್ಲಿರುವ ತೆಂಗಿನ ಮರಗಳು ಸಮುದ್ರಕ್ಕೆ ಆಹುತಿಯಾಗುತ್ತಿವೆ. ಕಡಲ್ಕೊರೆತ ತಡೆಗೆ ಸ್ಥಳೀಯರು ಮರಳಿನ ಚೀಲಗಳ ದಿಬ್ಬಗಳನ್ನು ಹಾಕಿದ್ದು, ಅಲೆಗಳ ಹೊಡೆತಕ್ಕೆ ಸಮುದ್ರ ಪಾಲಾಗುತ್ತಿವೆ.

ADVERTISEMENT

ಬ್ರಹ್ಮಾವರ ತಾಲ್ಲೂಕಿನಲ್ಲಿ ಮಡಿಸಾಲು ಹೊಳೆ ಉಕ್ಕಿ ಹರಿದು ಆರೂರು ಉಪ್ಪೂರು ಬೆಳ್ಮಾರು ಗ್ರಾಮಗಳಲ್ಲಿ ನೆರೆ ಬಂದಿತ್ತು. ಬಳಿಕ ನೆರೆ ತಗ್ಗಿದೆ. ನೀಲಾವರ, ಬಾವಲಿಕುದ್ರು, ಕೂರಾಡಿ, ಬಾರ್ಕೂರು ಪ್ರದೇಶದಲ್ಲಿ‌ ಸೀತಾ‌ನದಿ ಉಕ್ಕಿ ಮನೆಗಳು, ಕೃಷಿ ಭೂಮಿ ಜಲಾವೃತ ಗೊಂಡಿದೆ. ಜುಲೈ 9ರಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಮುನ್ಸೂಚನೆ ನೀಡಿದೆ. ಶಿರೂರಿನಲ್ಲಿ 25.6 ಸೆಂ.ಮೀ, ಗೋಳಿಹೊಳೆಯಲ್ಲಿ 25.4 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.