ADVERTISEMENT

ಉಡುಪಿ | ಅಕಾಲಿಕ ಮಳೆ: ಸಂಚಾರ ದಟ್ಟಣೆ ಕಿರಿಕಿರಿ

ತಾಸುಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿದ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 16:26 IST
Last Updated 22 ಅಕ್ಟೋಬರ್ 2022, 16:26 IST
ಉಡುಪಿ ನಗರದಲ್ಲಿ ಶನಿವಾರ ರಾತ್ರಿ ಏಕಾಏಕಿ ಸುರಿದ ಮಳೆ ಹಾಗೂ ವಾಹನ ದಟ್ಟಣೆಯಿಂದ ಸವಾರರು ಕಿರಿಕಿರಿ ಅನುಭವಿಸಿದರು
ಉಡುಪಿ ನಗರದಲ್ಲಿ ಶನಿವಾರ ರಾತ್ರಿ ಏಕಾಏಕಿ ಸುರಿದ ಮಳೆ ಹಾಗೂ ವಾಹನ ದಟ್ಟಣೆಯಿಂದ ಸವಾರರು ಕಿರಿಕಿರಿ ಅನುಭವಿಸಿದರು   

ಉಡುಪಿ: ನಗರದಲ್ಲಿ ಶನಿವಾರ ರಾತ್ರಿ ಏಕಾಏಕಿ ಸುರಿದ ಮಳೆ ಅವಾಂತರವನ್ನು ಸೃಷ್ಟಿಸಿತು. ಗುಡುಗು ಸಿಡಿಲು ಸಹಿತ ಒಂದು ತಾಸು ಸುರಿದ ಬಿರುಸಿನ ಮಳೆಗೆ ರಸ್ತೆಗಳು ಜಲಾವೃತಗೊಂಡವು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು.

ಏಕಾಏಕಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಕೆಳ ಪರ್ಕಳದಲ್ಲಿರುವ ನಗರಸಭೆಯ ನೀರಿನ ರೇಚಕದ ಬಳಿ ಮಳೆಯ ನೀರಿನ ಜತೆಗೆ ಚರಂಡಿಯ ನೀರು ಸೇರಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಯಿತು.

ಇಂದ್ರಾಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣ ಉಡುಪಿಯಿಂದ ಮಣಿಪಾಲಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮುಖ್ಯ ರಸ್ತೆಯ ಸಂಚಾರ ನಿರ್ಬಂಧಿಸಲಾಗಿತ್ತು. ಪರಿಣಾಮ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿ ಕಿ.ಮೀ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ADVERTISEMENT

ಉಡುಪಿಯಿಂದ ಮಣಿಪಾಲಕ್ಕೆ ತೆರಳಲು ಬರೋಬ್ಬರಿ 1 ತಾಸಿಗೂ ಹೆಚ್ಚು ಕಾಲ ಸವಾರರು ಟ್ರಾಫಿಕ್‌ನಲ್ಲಿ ಸಿಲುಕಿದ್ದರು. ಉಡುಪಿಯಿಂದ ಮಣಿಪಾಲಕ್ಕೆ ಸಂಪರ್ಕಿಸುವ ಪರ್ಯಾಯ ಮಾರ್ಗ ತೀರಾ ಕಿರಿದಾಗಿದ್ದ ಕಾರಣ ವಿಪರೀತ ದಟ್ಟಣೆ ಇತ್ತು.

ವಾರಾಂತ್ಯವಾಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಬಂದಿರುವುದು ಸಂಚಾರ ದಟ್ಟಣೆ ಹೆಚ್ಚಾಗಲು ಪ್ರಮುಖ ಕಾರಣ. ಕೃಷ್ಣಮಠಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಸ್ಥಳವಾದ ಕಲ್ಸಂಕ ವೃತ್ತದಲ್ಲಿ ದಟ್ಟಣೆ ವಿಪರೀತವಾಗಿತ್ತು. ಏಕಾಏಕಿ ಮಳೆಯೂ ಸುರಿದ ಪರಿಣಾಮ ಸವಾರರು ಹೈರಾಣಾಗಬೇಕಾಯಿತು.

ಕೃಷ್ಣಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ವಾಹನಗಳಿಂದ ತುಂಬಿ ಹೋಗಿದ್ದವು. ಮಲ್ಪೆ ರಸ್ತೆಯೂ ಗಿಜಿಗಿಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.