ಶಿರ್ವ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ–ತೊರೆಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಕಾಪು ತಾಲ್ಲೂಕಿನ ಉದ್ಯಾವರ, ಬೆಳ್ಳೆ, ಪಾಂಗಾಳ, ಮಣಿಪುರ ನದಿಗಳಲ್ಲಿ ಪಶ್ಚಿಮ ಘಟ್ಟದ ತಪ್ಪಲಿನಿಂದ ನೀರು ಹರಿದು ಬರುತ್ತಿರುವುದರಿಂದ ನದಿ ತೀರ ಪ್ರದೇಶಗಳಲ್ಲಿನ ಹಲವು ಮನೆಗಳು ಜಲಾವೃತಗೊಂಡಿವೆ. ದೋಣಿ ಬಳಸಿ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯ ನಡೆದಿದೆ.
ಅಪಾಯದಲ್ಲಿ ಸಿಲುಕಿಕೊಂಡಿರುವ ಮನೆಮಂದಿ ಯಾರೂ ಕಾಳಜಿ ಕೇಂದ್ರಕ್ಕೆ ಬರಲು ಒಪ್ಪಲಿಲ್ಲ. ಹೆಚ್ಚಿನವರು ಸಂಬಂಧಿಕರ ಮನೆಗೆ ಹೋಗುತ್ತಿದ್ದಾರೆ ಎಂದು ಕಾಪು ತಹಶೀಲ್ದಾರ್ ಪ್ರತಿಭಾ ತಿಳಿಸಿದರು.
ಕಟಪಾಡಿ ಏಣಗುಡ್ಡೆ ಗ್ರಾಮದ ನಾಗಿ ಮುಕ್ಕಾರ್ತಿ ಅವರ ಮನೆ ಜಲಾವೃತಗೊಂಡಿದ್ದು, ಐವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಲಾಗಿದೆ. ಈ ಭಾಗದಲ್ಲಿ 8 ಮನೆಗಳು ಜಲಾವೃತವಾಗಿವೆ. ಕಾಪು ತಹಶೀಲ್ದಾರ್ ಗುರುವಾರ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಜಲದಿಗ್ಭಂಧನಕ್ಕೊಳಗಾಗಿದ್ದ ಶಿರ್ವ ಗ್ರಾಮದ ಪಂಜಿಮಾರು ಪ್ರದೇಶದ ಹಿಲ್ಡಾ ರೋಡ್ರಿಗಸ್ ಅವರ ಕುಟುಂಬದ ಇಬ್ಬರು ಸದಸ್ಯರು, ಶಿರ್ವದ ಮಾರಿಗುಡಿ ಸೇತುವೆ ಬಳಿಯ ಜಯಶ್ರೀ ಅವರ ಕುಟುಂಬದ ಮೂವರನ್ನು ಹಾಗೂ ಪಲಿಮಾರು ಗ್ರಾಮದ ಕೊಪ್ಪಳ ಎಂಬಲ್ಲಿ ಗೋಪಾಲ ಅವರ ಮನೆಯ ಐವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಯಿತು.
ಬೆಳ್ಳೆ ಗ್ರಾಮದ ಪಡುಬೆಳ್ಳೆಯ ಭಟ್ಟ ಸಾಲಿನಲ್ಲಿ ಜಲಾವೃತಗೊಂಡಿದ್ದ ತುಕ್ರ ಮುಖಾರಿ ಅವರ ಮನೆಯ 9 ಮಂದಿಯನ್ನು ದೋಣಿಗಳ ಮೂಲಕ ರಕ್ಷಣೆ ಮಾಡಲಾಯಿತು.
ತಹಶೀಲ್ದಾರ್ ಪ್ರತಿಭಾ ಆರ್., ಕಂದಾಯ ಪರಿವೀಕ್ಷಕ ಶಾಬೀರ್, ಅಧಿಕಾರಿ ಪ್ರದೀಪ್ ಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಶಿಧರ ವಾಗ್ಳೆ, ಕಂದಾಯ ಪರಿವೀಕ್ಷಕ ಇಜ್ಜಾರ್ ಸಾಬಿರ್, ಗ್ರಾಮ ಆಡಳಿತ ಅಧಿಕಾರಿ ಡೇನಿಯಲ್, ಗೃಹರಕ್ಷಕ ದಳದ ಸಿಬ್ಬಂದಿ ಕುಮಾರ್ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಕಟಪಾಡಿ ಏಣಗುಡ್ಡೆ ಫಾರೆಸ್ಟ್ ಗೇಟ್ ಬಳಿ ನಾಗಿ ಮುಕ್ಕಾರ್ತಿ ಮನೆಯೊಳಗೆ ನೆರೆ ನೀರು ನುಗ್ಗಿರುವುದು
ಕಟಪಾಡಿ ಏಣಗುಡ್ಡೆ ಫಾರೆಸ್ಟ್ ಗೇಟ್ ಬಳಿ ನಾಗಿ ಮುಕ್ಕಾರ್ತಿ ಮನೆ ಹೊರಭಾಗದಲ್ಲಿ ನೆರೆ ನೀರು ನುಗ್ಗಿರುವುದು
ಬೆಳ್ಳೆ ಪರಿಸರದಲ್ಲಿ ಕಾಪು ತಹಶೀಲ್ದಾರ್‌ರಿಂದ ದೋಣಿಯ ಮೂಲಕ ರಕ್ಷಣಾ ಕಾರ್ಯಾಚರಣೆ
ಸಂತ್ರಸ್ತರ ರಕ್ಷಣೆಯೊಂದೇ ನಮ್ಮ ಗುರಿ
ಕಾಪು ತಾಲ್ಲೂಕಿನಲ್ಲಿ ಭಾರಿ ಮಳೆಯಿಂದಾಗಿ ಹಲವೆಡೆ ನೆರೆ ಪರಿಸ್ಥಿತಿ ಉಂಟಾಗಿದ್ದು ಅಪಾಯದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಧಾರಾಕಾರವಾಗಿ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ತಹಶೀಲ್ದಾರ್ ಪ್ರತಿಭಾ ಅವರು ಇಲಾಖಾಧಿಕಾರಿಗಳೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು. ಸಂತ್ರಸ್ತರ ರಕ್ಷಣೆಯೊಂದೇ ನಮ್ಮ ಗುರಿಯಾಗಿದೆ. ಕಾಪು ತಾಲ್ಲೂಕು ಆಡಳಿತ ನೆರೆ ಸಂರಕ್ಷಣೆಗೆ ಸದಾ ಸನ್ನದ್ಧವಾಗಿದೆ ಎಂದು ತಹಶೀಲ್ದಾರ್ ಪ್ರತಿಭಾ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಕ್ಕಿ ಹರಿಯುತ್ತಿರುವ ಪಾಪನಾಶಿನಿ ನದಿ
ಶಿರ್ವ ಪಂಜಿಮಾರು ಪಡುಬೆಳ್ಳೆಯಾಗಿ ಉದ್ಯಾವರ ಸೇರುವ ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು ತಗ್ಗು ಪ್ರದೇಶದ ಮನೆಗಳು ಪಂಪುಸೆಡ್‌ಗಳು ಭಾಗಶಃ ಮುಳುಗಡೆಯಾಗಿವೆ. ಶಿರ್ವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ರೊಟ್ಟು ನಡಿಬೆಟ್ಟು ಅಟ್ಟಿಂಜ ಬಡಗು ಪಂಜಿಮಾರು ಹಾಗೂ ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಬೆಳ್ಳೆ ನದಿ ತೀರ ಪ್ರದೇಶಗಳಲ್ಲಿ ನೆರೆ ನೀರು ಆವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.