
ಉಡುಪಿ: ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಾಗೂ ತೂಫಾನ್‌ನಿಂದಾಗಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ದೋಣಿಗಳು ಮಲ್ಪೆ ಬಂದರಿನಲ್ಲಿ ಮತ್ತೆ ಲಂಗರು ಹಾಕಿವೆ.
ಮಲ್ಪೆ ಬಂದರು ಮಾತ್ರವಲ್ಲದೆ ಬಾಪುತೋಟದ ಬಳಿ ಹೊಳೆಯಲ್ಲಿ ಮೀನುಗಾರಿಕಾ ದೋಣಿಗಳನ್ನು ನಿಲ್ಲಿಸಲಾಗಿದೆ. ಈ ಬಾರಿ ಋತು ಆರಂಭದಲ್ಲೇ ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರರಿಗೆ ನಷ್ಟ ಉಂಟಾಗಿತ್ತು. ಪದೇ ಪದೇ ತೂಫಾನ್‌ನಿಂದಾಗಿ ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದೆ ಮೀನುಗಾರರು ಸಂಕಷ್ಟದಲ್ಲಿದ್ದಾರೆ.
ಟ್ರಾಲಿಂಗ್ ನಿಷೇಧ ತೆರವಾಗಿ ಇನ್ನೇನು ದೋಣಿಗಳು ಸಮುದ್ರಕ್ಕಿಳಿಯಲು ಸಿದ್ಧವಾಗಿದ್ದಾಗ ಚಂಡಮಾರುತದ ಪರಿಣಾಮವಾಗಿ ಗಾಳಿ, ಮಳೆಯಿಂದಾಗಿ ದೋಣಿಗಳು ಬಂದರಿನಲ್ಲೇ ಉಳಿದುಕೊಂಡಿದ್ದವು.
ಆಗಸ್ಟ್ ತಿಂಗಳಲ್ಲಿ ಕೆಲ ದಿನಗಳಲ್ಲಷ್ಟೇ ಮೀನುಗಾರಿಕೆ ನಡೆದಿತ್ತು. ಸೆಪ್ಟೆಂಬರ್‌ನಲ್ಲೂ ಆಗಾಗ ತೂಫಾನ್‌ನಿಂದಾಗಿ ಮೀನುಗಾರಿಕೆ ಸ್ಥಗಿತವಾಗಿತ್ತು. ಈ ತಿಂಗಳಲ್ಲಿ ಮತ್ತೆ ಮಳೆ, ಗಾಳಿ ಆರಂಭವಾಗಿರುವುದರಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತಾಗಿದೆ ಎಂದು ಮೀನುಗಾರರು ತಿಳಿಸಿದರು.
ಕಳೆದ ವರ್ಷದ ಮೀನುಗಾರಿಕಾ ಋತುವಿಗೆ ಹೋಲಿಸಿದರೆ ಈ ಬಾರಿ ಆರಂಭದಲ್ಲಿ ಸಿಗಡಿ, ಬೂತಾಯಿ ಮೀನುಗಳು ಕೆಲ ದೋಣಿಯವರಿಗೆ ಸಾಕಷ್ಟು ಸಿಕ್ಕಿದ್ದವು. ಕಡಲಿನಲ್ಲಿ ಮೀನು ಇದ್ದರೂ ಹಿಡಿಯಲು ಸಾಧ್ಯವಾಗದ ಸ್ಥಿತಿ ಇದೆ ಎಂದೂ ಹೇಳಿದರು.
ಸಾಮಾನ್ಯವಾಗಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಉತ್ತಮವಾಗಿ ಮೀನುಗಾರಿಕೆ ನಡೆಯುತ್ತದೆ ಆದರೆ ಹವಾಮಾನ ವೈಪರೀತ್ಯದಿಂದಾಗಿ ಈ ಸಲ ಸಮರ್ಪಕವಾಗಿ ಮೀನುಗಾರಿಕೆ ನಡೆದಿಲ್ಲ ಎನ್ನುತ್ತಾರೆ ಮೀನುಗಾರರು.
‘ನಿರೀಕ್ಷಿತ ಪ್ರಮಾಣದಲ್ಲಿ ಸಿಗದ ಮೀನು’
‘ಈ ಬಾರಿ ಆರಂಭದಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಬಹುತೇಕ ದೋಣಿಗಳು ಸಮುದ್ರಕ್ಕಿಳಿದಿರಲಿಲ್ಲ. ಈಗ ಹೊರ ರಾಜ್ಯದ ಕಾರ್ಮಿಕರು ಮರಳಿ ಬಂದಿದ್ದಾರೆ. ಆದರೆ ತೂಫಾನ್‌ನಿಂದಾಗಿ ಮೀನುಗಾರಿಕೆಗೆ ತೆರಳಲಾರದ ಪರಿಸ್ಥಿತಿ ಇದೆ’ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ ತಿಳಿಸಿದರು.
‘ಮೀನುಗಾರಿಕೆಗೆ ತೆರಳುವ ದೋಣಿಗಳಿಗೂ ಬಂಗುಡೆ ಮೀನು ಈ ಬಾರಿ ಕಡಿಮೆ ಪ್ರಮಾಣದಲ್ಲಿ ಸಿಕ್ಕಿದೆ. ಕೆಲವು ದೋಣಿಯವರಿಗೆ ಉತ್ತಮ ಮೀನುಗಾರಿಕೆಯಾದರೆ ಇನ್ನು ಕೆಲವರಿಗೆ ಮೀನುಗಳು ಸಿಗದೆ ನಷ್ಟ ಉಂಟಾಗಿದೆ.
‘ಕಳೆದ ನಾಲ್ಕೈದು ದಿನಗಳಿಂದ ತೂಫಾನ್‌ನಿಂದಾಗಿ ದೋಣಿಗಳು ದಡ ಸೇರಿವೆ. ಮಲ್ಪೆಯ ಕೆಲವು ದೋಣಿಗಳು ಕಾರವಾರದ ಬಂದರಿನಲ್ಲೂ ಲಂಗರು ಹಾಕಿವೆ. ಈ ಬಾರಿಯೂ ಇದುವರೆಗೆ ಉತ್ತಮ ಮೀನುಗಾರಿಕೆ ನಡೆದಿಲ್ಲ’ ಎಂದೂ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.