
ಹೆಬ್ರಿ: ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಾರ ಬೇಳಂಜೆ ಶೌರ್ಯ ವಿಪತ್ತು ಘಟಕದ ಸದಸ್ಯರು 15 ದಿನಗಳಲ್ಲಿ ರಸ್ತೆ ಬದಿಯಲ್ಲಿದ್ದ 10 ಟನ್ ಕಸ ಸಂಗ್ರಹಿಸಿ ಸ್ವಚ್ಚ ರಸ್ತೆಯನ್ನಾಗಿ ಮಾಡಿದ್ದಾರೆ. ಈ ಮೂಲಕ ಕಸವನ್ನು ರಸ್ತೆ ಬದಿಗೆ ಎಸೆಯುವವರ ಕಣ್ಣು ತೆರೆಸಿದ್ದಾರೆ.
ಹೆಬ್ರಿಯ ಮೂರು ರಸ್ತೆಯ ಸರ್ಕಲ್‌ನಿಂದ ಆರಂಭಗೊಂಡು ತೆಂಕೋಲದ ತನಕ ಹೆಬ್ರಿ ಕುಂದಾಪುರ ರಸ್ತೆಯಲ್ಲಿ ಮೇಲ್ವಿಚಾರಕಿ ರೇವತಿ, ಅಧ್ಯಕ್ಷ ಚಂದ್ರ ನಾಯ್ಕ್, ಪ್ರತಿನಿಧಿ ಲತಾ ಶೆಟ್ಟಿ ಮಾರ್ಗದರ್ಶನದಲ್ಲಿ ಸದಸ್ಯರು ತ್ಯಾಜ್ಯ ನಿರ್ಮೂಲನೆ ಮಾಡಿದ್ದಾರೆ. ಇವರ ಪೈಕಿ ಬಹುತೇಕರು ಕಾರ್ಮಿಕರು. ಪ್ರತಿ ಸಂಜೆ ಎಲ್ಲರೂ ಕೂಡಿ ಸ್ವಚ್ಛತೆಯ ಸೇನಾನಿಗಳಂತೆ ಕೆಲಸ ಮಾಡಿದ್ದರು.
ಪ್ರತಿ ದಿನ 12ರಿಂದ 15 ಜನರ ತಂಡ ಸಂಜೆ 5.30ರಿಂದ 6.30ರ ತನಕ ಕಸ ಹೆಕ್ಕಿದ್ದರು. ಸಂಗ್ರಹಿಸಿದ ಕಸದಲ್ಲಿ ಮದ್ಯದ ಬಾಟಲಿಗಳೇ ಹೆಚ್ಚಿದ್ದವು. ವಾಹನ ನಿಲ್ಲಿಸಿ ಮದ್ಯಪಾನ ಮಾಡಿ ಬಾಟಲಿಗಳನ್ನು ಎಸೆಯುವ ಕೆಟ್ಟ ಚಾಳಿಯಿಂದಾಗಿ ಹೀಗಾಗಿದೆ ಎನ್ನುತ್ತಾರೆ ಸಮೀಪದ ನಿವಾಸಿಗಳು. ಮನೆಯಲ್ಲಿ ಸಂಗ್ರಹವಾದ ತ್ಯಾಜ್ಯ, ಹೋಟೆಲ್‌ನಿಂದ ತಂದು ಎಸೆದಿರುವ ತ್ಯಾಜ್ಯ ಕೂಡ ಭಾರಿ ಪ್ರಮಾಣದಲ್ಲಿ ಇತ್ತು.
ಗ್ರಾಮ ಪಂಚಾಯಿತಿ ಮತ್ತು ಸಂಘ ಸಂಸ್ಥೆಗಳು ಸ್ವಚ್ಛತೆಯ ಬಗ್ಗೆ ನಿರಂತರ ಜಾಗೃತಿ ಮೂಡಿಸಿದರೂ ರಸ್ತೆಬದಿಯಲ್ಲಿ ಕಸವನ್ನು ಎಸೆಯಲಾಗುತ್ತಿದೆ. ಯಾರೋ ಎಸೆದ ಕಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಹೆಕ್ಕಿದ್ದಾರೆ. ಜನರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಪಂಚಾಯಿತಿಯ ತ್ಯಾಜ್ಯ ಘಟಕಕ್ಕೆ ನೀಡಬೇಕು. ಊರು ಸುಂದರವಾಗಬೇಕಾದರೆ ಎಲ್ಲರ ಸಹಕಾರ ಅಗತ್ಯ ಎಂದು ಧರ್ಮಸ್ಥಳ ಯೋಜನೆಯವರು ಹೇಳುತ್ತಾರೆ.
12 ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ
ಚಾರದಿಂದ ಕುಚ್ಚೂರು ವ್ಯಾಪ್ತಿಯಲ್ಲಿ ಸುಮಾರು 12 ಬಸ್ ನಿಲ್ದಾಣಗಳಲ್ಲೂ ಸ್ವಚ್ಛತೆ ಕಾರ್ಯ ಮಾಡಲಾಗಿದೆ. ಜನರು ಅತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದ ನಿಲ್ದಾಣಗಳು ಈಗ ಸುಂದರವಾಗಿವೆ. ಪ್ರಯಾಣಿಕರು ಕುಳಿತುಕೊಂಡು ಬಸ್‌ಗಾಗಿ ಕಾಯುತ್ತಾರೆ. ಸಾರ್ವಜನಿಕರು ಓಡಾಡುವ ಸ್ಥಳ ದೇವಸ್ಥಾನದ ಪರಿಸರ ಪ್ರಾಥಮಿಕ ಆರೋಗ್ಯ ಕೇಂದ್ರ ಅಂಗನವಾಡಿ ಕೇಂದ್ರ ಶಾಲೆಗಳಲ್ಲಿ ಸ್ವಚ್ಛತೆ ಮಾಡಲಾಗಿದೆ. ಕೈತೋಟ ನಿರ್ಮಾಣವನ್ನೂ ಮಾಡುವ ಶೌರ್ಯ ವಿಪತ್ತು ಘಟಕದವರು ಗಾಳಿ ಮಳೆಯಿಂದ ಅನಾಹುತವಾದರೆ ಯೋಧರಂತೆ ಹೋಗಿ ಕೆಲಸ ಮಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.