ಹೆಬ್ರಿ: ತಾಲ್ಲೂಕಿನಾದ್ಯಂತ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಭಾರಿ ಗಾಳಿ ಮಳೆಯಾಗಿದೆ.
ಸೀತಾನದಿ ಬ್ರಹ್ಮಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿ 169 ಎ ಮೇಲೆ ಬೃಹತ್ ಗಾತ್ರದ ಮರಗಳು ಉರುಳಿ ಸಂಚಾರಕ್ಕೆ ತೊಡಕಾಯಿತು. ಅರಣ್ಯ ಇಲಾಖೆ ತೆರವು ಕಾರ್ಯ ನಡೆಸಿದರು. ಸ್ಥಳೀಯರು ಸಹಕರಿಸಿದರು.
ಉಡುಪಿ–ಹೆಬ್ರಿ–ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಸೀತಾನದಿಯಲ್ಲಿ ಮರಗಳು ಬಿದ್ದು 3 ಗಂಟೆ ಕಾಲ ಸಂಚಾರ ಬಂದ್ ಆಗಿತ್ತು. ವಾಹನಗಳು ಕುಚ್ಚೂರು ರಸ್ತೆಯಲ್ಲಿ ಹೋಗಿ ಮಾಂಡಿ ಮೂರುಕೈ ಸೋಮೇಶ್ವರದ ಮೂಲಕ ತೆರಳಿದವು.
ಹೆದ್ದಾರಿ ಪಕ್ಕದಲ್ಲಿ ಇನ್ನೂ ಹಲವಾರು ಬೀಳುವ ಅಪಾಯಕಾರಿ ಮರಗಳು ಇದ್ದು ಅನಾಹುತಗಳು ಸಂಭವಿಸುವ ಮೊದಲು ಅರಣ್ಯ ಇಲಾಖೆ ಮರಗಳನ್ನು ತೆರವುಗೊಳಿಸುವಂತೆ ಸಾಮಾಜಿಕ ಹೋರಾಟಗಾರ ಸೀತಾನದಿ ವಿಜೇಂದ್ರ ಶೆಟ್ಟಿ ಒತ್ತಾಯಿಸಿದ್ದಾರೆ.
ಪ್ರಯಾಣಿಕರನ್ನು ರಸ್ತೆಯಲ್ಲೇ ಇಳಿಸಿದ ಬಸ್‌ನವರು: ಹೆದ್ದಾರಿ ಮೇಲೆ ಮರಗಳು ಬಿದ್ದು ರಸ್ತೆ ಸಂಚಾರ ಬಂದ್ ಹಿನ್ನಲೆಯಲ್ಲಿ ಸರ್ಕಾರಿ ಬಸ್‌ನವರು ಸ್ಥಳೀಯ ಪ್ರಯಾಣಿಕರನ್ನು ಅರ್ಧದಲ್ಲಿಯೇ ಇಳಿಸಿ ಹೋದ ಘಟನೆ ನಡೆದಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಬದಲಿ ಮಾರ್ಗದಲ್ಲಿ ಬಸ್‌ನವರಿಗೆ ತೆರಳಲು ಹೇಳಿದ್ದರೂ ರಸ್ತೆಯಲ್ಲೇ ಇಳಿಸಿ ಹೋಗಿದ್ದಾರೆ ಎಂದು ಸೀತಾನದಿ ವಿಜೇಂದ್ರ ಶೆಟ್ಟಿ ದೂರಿದ್ದಾರೆ.
ಬೇಳಂಜೆಯಲ್ಲಿ ಕುಚ್ಚೂರು 2 ಸರ್ಕಾರಿ ಶಾಲೆ ಬಳಿಯಿದ್ದ ಅಪಾಯಕಾರಿದ ಬೃಹತ್ ಮರ ಒಂದು ಭಾರಿ ಗಾಳಿಗೆ ಉರುಳಿ ಬಿದ್ದಿದೆ. ಅದೇ ದಾರಿಯಿಂದ ಸ್ಕೂಟರ್‌ನಲ್ಲಿ ಬರುತ್ತಿದ್ದ ಕುಚ್ಚೂರಿನ ಕಾಳು ನಾಯ್ಕ್ ಎಂಬುವರು ಮರದಡಿ ಸಿಲುಕಿ ಸಣ್ಣಪುಟ್ಟ ಗಾಯಗಳೊಂದಿಗೆ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಸ್ಕೂಟರ್‌ನ ಸ್ವಲ್ಪ ಭಾಗ ಮರದಡಿ ಸಿಲುಕಿದೆ.
ಬೆಳಿಗ್ಗೆ ತುಂತುರು ಮಳೆಯಿದ್ದು, 3 ಗಂಟೆ ತನಕ ಸಂಪೂರ್ಣ ಬಿಸಿಲು ಇತ್ತು. ನಂತರ ಭಾರಿ ಗಾಳಿ ಇತ್ತು. ಮುನಿಯಾಲು ಲಕ್ಷ್ಮೀ ವೆಂಕಟರಣ ದೇವಸ್ಥಾನದ ನಾಗನಕಟ್ಟೆಯ ಅಶ್ವತ್ಥ ಮರದ ಗೆಲ್ಲು ಬಿದ್ದು ಕಟ್ಟೆಗೆ ಹಾಕಿರುವ ತಗಡು ಶೀಟು, ಕಟ್ಟೆಯ ಸ್ವಲ್ಪ ಭಾಗ ಹಾನಿಯಾಗಿದೆ. ಅರಣ್ಯ ಸೇರಿ ಹಲವಾರು ಮರಗಳು, ಗೆಲ್ಲುಗಳು ಧರೆಗೆ ಉರುಳಿವೆ.
ಹೆಬ್ರಿಯ ಕಿನ್ನಿಗುಡ್ಡೆ ಎಂಬಲ್ಲಿ ಸರೋಜ ಶೆಟ್ಟಿ ಅವರ ಮನೆಯ ಕೊಟ್ಟಿಗೆ ಮೇಲೆ ಮರ ಬಿದ್ದು ಅಪಾರ ಹಾನಿಯಾಗಿದೆ. ಮುದ್ರಾಡಿ ಸಾಮಗರಬೆಟ್ಟು ಮುದ್ದಣ್ಣ ಪೂಜಾರಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ಬೇಳಂಜೆ–ಸಂಚಾರ ಬಂದ್: ಹೆಬ್ರಿ–ಕುಂದಾಪುರ ರಸ್ತೆಯ ಬೇಳಂಜೆಯಲ್ಲಿ ಬೃಹತ್ ಗಾತ್ರದ ಮರ ಬಿದ್ದು ಸಂಚಾರ ಬಂದ್ ಆಗಿತ್ತು. ಆರ್ಡಿ ಕಡೆ ತೆರಳುತ್ತಿದ್ದ ಆಮ್ನಿ ಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಪಕ್ಕದಲ್ಲಿ ಬೇರೆ ದಾರಿ ಬಳಸಲು ಮುಂದಾಗಿ, ಹೂತು ಹೋದ ಘಟನೆ ಘಟನೆ ನಡೆದಿದೆ. ಸ್ಥಳೀಯರು ಸೇರಿ ಕಾರ್ ಮೇಲೆತ್ತಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.