ಹೆಬ್ರಿ: ಹಿಂದೆಂದೂ ಕಂಡು ಕೇಳರಿಯ ಜಲಪ್ರಳಯ ಹೆಬ್ರಿ ತಾಲ್ಲೂಕಿನ ಮುದ್ರಾಡಿ ಗ್ರಾಮದ ಕಾಂತರಬೈಲು, ಹೊಸ ಕಂಬ್ಲ, ಬಲ್ಲಾಡಿ, ಕೆಲಕಿಲ ಪರಿಸರದಲ್ಲಿ ಭಾನುವಾರ ಸಂಭವಿಸಿದೆ. ಗುಮ್ಮಗುಂಡಿ ಹೊಳೆಯು ಉಕ್ಕಿ ಹರಿದು ಭಾರಿ ಅವಾಂತರ ಸೃಷ್ಟಿಸಿದೆ.
ಗುಮ್ಮಗುಂಡಿ ಹೊಳೆಯಲ್ಲಿ ಭಾರಿ ನೀರು ಹರಿದು ಕೇರಳ ಮೂಲದ ಪ್ರಭಾಕರ್ ಎಂಬುವರ 2 ಬೈಕ್‌ಗಳು ಕೊಚ್ಚಿ ಹೋಗಿವೆ. ಅಲ್ಟೊ ಕಾರು ನೀರಿನಲ್ಲಿ ಕೊಚ್ಚಿ ಹೋಗಿ 300 ಮೀಟರ್‌ನಷ್ಟು ದೂರದಲ್ಲಿ ಅಡಿಕೆ ಮರಕ್ಕೆ ತಾಗಿ ನಿಂತಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಕೃಷಿ ಉಪಕರಣಗಳ ಸಹಿತ ಮನೆಯ ಸುತ್ತ ಇದ್ದ ವಸ್ತುಗಳು, ಕಟ್ಟಿಗೆ ಎಲ್ಲವೂ ಕೊಚ್ಚಿ ಹೋಗಿದೆ. ಹವಾಮಾನ ಇಲಾಖೆ ಪ್ರಕಾರ ಹೆಬ್ರಿಯಲ್ಲಿ 2.28 ಸೆಂ.ಮೀ. ಮಳೆ ದಾಖಲಾಗಿದೆ.
ನಾವು ಮೂರು ವರ್ಷಗಳಿಂದ ಇಲ್ಲಿ ಇದ್ದೇವೆ. ಇಂತಹ ಪ್ರವಾಹ ನೋಡಿಲ್ಲ. ತೋಟಗಳಿಗೂ ಹಾನಿಯಾಗಿದೆ ಎಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ.
ನಾವು ಇಲ್ಲೇ ಹುಟ್ಟಿ ಬೆಳೆದವರು ಇಂತಹ ಪ್ರವಾಹ ಇದೇ ಮೊದಲು ನೋಡಿದ್ದು ಎನ್ನುತ್ತಾರೆ ಮುದ್ರಾಡಿಯ ಕೃಷಿಕ ಕಾಂತರಬೈಲು ಶ್ಯಾಮ ಶೆಟ್ಟಿ. ಅವರ ಅಡಿಕೆ ತೋಟದಲ್ಲೂ ಕಸಕಡ್ಡಿಗಳು ತುಂಬಿ ಹೋಗಿದೆ. ಬಾವಿಗೂ ಪ್ರವಾಹದ ನೀರು ನುಗ್ಗಿದೆ.
ಮಹಿಳೆಯ ಶವ ಪತ್ತೆ: ಭಾರಿ ಮಳೆ ಸುರಿದ ವೇಳೆ ನಾಪತ್ತೆಯಾಗಿದ್ದ ಮುದ್ರಾಡಿ ಬಲ್ಲಾಡಿ ಬೆಂಡುಗುಡ್ಡೆಯ ಚಂದ್ರು ಗೌಡ್ತಿ (91) ಎಂಬುವರ ಮೃತದೇಹ ಮನೆಯಿಂದ 1 ಕಿ.ಮೀ. ದೂರದಲ್ಲಿ ಬಲ್ಲಾಡಿಯ ದೇವಸ್ಥಾನದ ಬಳಿಯ ಗದ್ದೆಯಲ್ಲಿ ಸೋಮವಾರ ಪತ್ತೆಯಾಗಿದೆ.
2 ತಿಂಗಳ ಹಿಂದೆ ಗಾಳಿ ಪಡ್ಲುವಿನ ಮಗಳ ಮನೆಗೆ ಅವರು ಬಂದಿದ್ದರು. ಭಾನುವಾರ ಮಳೆ, ಸಿಡಿಲು ಬರುತ್ತಿತ್ತು ಅಮ್ಮ ಕಾಣುತ್ತಿಲ್ಲ ಎಂದು ಹುಡುಕಾಡಿದ್ದೆವು. ನನ್ನ ಮಕ್ಕಳು ಎಲ್ಲಾ ಕಡೆ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ನಮ್ಮ ಮನೆಯ ಬಳಿ ಭಾರಿ ಮಳೆ ಸುರಿದಿತ್ತು, ಆದರೆ ಪ್ರವಾಹ ಬಂದಿರಲಿಲ್ಲ. ಅಮ್ಮನಿಗೆ ನಡೆದಾಡಲು ಆಗುತ್ತಿರಲಿಲ್ಲ. ಹೀಗೇಕೆ ಆಯಿತು ಎಂದು ತಿಳಿಯುತ್ತಿಲ್ಲ ಎಂದು ಚಂದ್ರು ಗೌಡ ಅವರ ಮಗಳು ಗುಲಾಬಿ ಗೌಡ ಕಣ್ಣೀರಾದರು.
ವರಂಗ ಗ್ರಾಮದ ಅಡ್ಕ ತೋಡು, ಕಬ್ಬಿನಾಲೆ ನದಿಗಳಲ್ಲಿ ಭಾರಿ ನೀರು ಹರಿದು ಬಂದು ವರಂಗ ಬಲ್ಲಾಡಿ ಸಂಪರ್ಕ ರಸ್ತೆಯು ಕಡಿತಗೊಂಡಿತ್ತು. ಮುದ್ರಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಈಶ್ವರ ನಗರ, ಹನ್‌ಸನ್‌ಬೆಟ್ಟು, ಗುಮ್ಮಗುಂಡಿ , ವರಂಗ ಗ್ರಾಮದ ಅಡ್ಕ ಪರಿಸರದಲ್ಲಿ ಭತ್ತ ಕೃಷಿಗೆ ಹಾನಿಯಾಗಿದೆ. ಸುದ್ದಿತಿಳಿದು ಕುಟುಂಬಸ್ಥರು, ಸಂಬಂಧಿಕರು ಇಲ್ಲಿನ ಮನೆಗಳಿಗೆ ಧಾವಿಸುತ್ತಿದ್ದಾರೆ.
ಕಾಂತರಬೈಲಿನ ಎರಡು ಮನೆಯ ಮಹಿಳೆಯರು ಮತ್ತು ಮಕ್ಕಳನ್ನು ತಾರಸಿ ಮೇಲೆ ಕಳುಹಿಸಿ ಪುರುಷರನ್ನು ಹಗ್ಗ, ಏಣಿಯ ಸಹಾಯದಿಂದ ಮನೆಯಿಂದ ಹೊರಗೆ ಕರೆತಂದೆವು ಎಂದು ಶ್ಯಾಮ ಶೆಟ್ಟಿ ತಿಳಿಸಿದರು.
ಹೊಸಕಂಬ್ಲ ಸೂರ್ಯಣ್ಣ ಪೂಜಾರಿ ಅವರ ಭತ್ತದ ಕೃಷಿಗೆ ಅಪಾರ ಹಾನಿಯಾಗಿದೆ. ನದಿಯು ಸುಮಾರು 10 ಅಡಿ ಕೆಳಗೆ ಇದ್ದರೂ ನದಿ ತುಂಬಿ ಮನೆಯಲ್ಲಿ 5 ಅಡಿಯಷ್ಟು ನೀರು ತುಂಬಿದೆ ಎಂದು ಮುದ್ರಾಡಿಯ ಸಾಮಾಜಿಕ ಕಾರ್ಯಕರ್ತ ಹರೀಶ್ ಕುಲಾಲ್ ಘಟನೆ ಭೀಕರತೆಯನ್ನು ವಿವರಿಸಿದರು.
ಅರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಬೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದರು. ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಸಮೀಕ್ಷೆ ನಡೆಸುತ್ತಿದ್ದಾರೆ.
‘ಜೋರು ಸಿಡಿಲು ಬರುತ್ತಿತ್ತು. ಮನೆಯಲ್ಲಿ ಒಬ್ಬಳೇ ಇದ್ದೆ. ಏಕಾಏಕಿ ಮಳೆ ನೀರು ನುಗ್ಗಿತು. ಸೊಂಟದವರೆಗೂ ನೀರು ಬಂತು. ಮನೆಯಲ್ಲಿದ್ದ ಅಕ್ಕಿ ಸಹಿತ ವಸ್ತುಗಳು, ವಿದ್ಯುತ್ ಉಪಕರಣಗಳು ಹಾಳಾಗಿವೆ’ ಎಂದು ಹೊಸಕಂಬ್ಲ ಸಂಪ ಪೂಜಾರಿ ಹೇಳಿದರು.
ಪ್ರವಾಹ ಪೀಡಿತ ಸ್ಥಳಕ್ಕೆ ಶಾಸಕ ಸುನಿಲ್ ಕುಮಾರ್, ಕುಂದಾಪುರ ಸಹಾಯಕ ಆಯುಕ್ತ ಮಹೇಶ್ ಚಂದ್ರ, ಹೆಬ್ರಿ ತಹಶೀಲ್ದಾರ್ ಎಸ್.ಎ. ಪ್ರಸಾದ್, ಕಾರ್ಕಳ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ಕೃಷಿ ಇಲಾಖೆಯ ಸಿದ್ದಪ್ಪ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಲ್ಲಾಡಿ ಹೊಸಕಂಬಳ ಮನೆಯ ಕೃಷ್ಣ ಪೂಜಾರಿ ಎಂಬುವವರ ಓಮ್ನಿ ಕಾರು ಪ್ರವಾಹಕ್ಕೆ ಸಿಲುಕಿ 200 ಮೀಟರ್ ದೂರಕ್ಕೆ ಪ್ರವಾಹದಲ್ಲಿ ತೇಲಿ ಹೋಗಿತ್ತು ಪ್ರವಾಹದ ಪರಿಣಾಮ ದನದ ಕೊಟ್ಟಿಗೆಯು ಸಂಪೂರ್ಣ ಧರಾಶಾಹಿಯಾಗಿದೆ. ಮನೆಯ ಒಳಗೆ ನೀರು ನುಗ್ಗಿ ಹಾನಿಯಾಗಿದೆ. ಮನೆಯಲ್ಲಿ ಸಣ್ಣ ಮಕ್ಕಳು ಕೂಡ ಇದ್ದು ಅಪಾಯದಿಂದ ಪಾರಾಗಿದ್ದಾರೆ ಕೃಷ್ಣ ಪೂಜಾರಿ ....... ಮನೆಯೊಳಗೆ ನೀರು ನುಗ್ಗಿದೆ. 5 ಸಾವಿರಕ್ಕೂ ಹೆಚ್ಚು ತೆಂಗಿನಕಾಯಿ ರಬ್ಬರ್ ಸ್ಕ್ರಾಪ್ ಎರಡು ಪಂಪ್‌ಗಳು ಸೇರಿದಂತೆ ಕೃಷಿ ಸಲಕರಣೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಬಾವಿಗೂ ಹೊಳೆಯ ನೀರು ನುಗ್ಗಿದೆ. ಒಮ್ಮೆಲೆ ಮನೆಯೊಳಗೆ ನೀರು ನುಗ್ಗಿತ್ತು. ಏನು ಮಾಡುಬೇಕೆಂದು ತೋಚಲಿಲ್ಲ. ಕಾಂತರಬೈಲು ರಬ್ಬರ್ ತೋಟದಲ್ಲಿ ಆಶ್ರಯ ಪಡೆದಿದ್ದ ಸುಮಾರು 25 ಕ್ಕೂ ಹೆಚ್ಚು ದನಗಳು ಕೂಡ ನಾಪತ್ತೆಯಾಗಿವೆ. ಪ್ರದೀಪ್ ಕಾಂತರಬೈಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.