ಹೆಬ್ರಿ: ಸದಾ ಕಾಲವೂ ವನ್ಯಜೀವಿ ಸಂರಕ್ಷಣೆಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಅರಣ್ಯ ಇಲಾಖೆ ಅಧಿಕಾರಿಗಳು ಮಾನವೀಯತೆ ಮೆರೆದು ಹೆಬ್ರಿಯಲ್ಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೆಬ್ರಿ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿ ಗೌರವ ಎಸ್.ಎಂ. ಅವರು, ಒಂಟಿ ಸಲಗದ ಭಯದಿಂದ ಕಂಗೆಟ್ಟ ಗ್ರಾಮಸ್ಥರ ಮಕ್ಕಳಿಗೆ ಶಾಲೆಗೆ ಹೋಗಿ ಬರಲು ಜೀಪ್ ವ್ಯವಸ್ಥೆ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮದ ಪಶ್ಚಿಮ ಘಟ್ಟ ತಪ್ಪಲಿನ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಅನೇಕ ದಿನಗಳಿಂದ ಒಂಟಿ ಸಲಗ ಒಂದು ಬೀಡು ಬಿಟ್ಟು, ಜನರಿಗೆ ಜೀವ ಭಯ ಉಂಟುಮಾಡಿದೆ. ಗ್ರಾಮಸ್ಥರು ಜೀವಭಯದಿಂದ ಇರುವುದನ್ನು ಗಮನಿಸಿದ ಹೆಬ್ರಿ ಸೋಮೇಶ್ವರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಗೌರವ್ ಎಸ್.ಎಂ. ಉನ್ನತಾಧಿಕಾರಿಗಳಿಗೆ ಪತ್ರ ಬರೆದಿದ್ದು, ಪರಿಶೀಲನೆ ನಡೆಸಿ ಅರಣ್ಯ ಇಲಾಖೆಯ ಸಿಸಿಎಫ್ ಕರಿಕಾಳನ್, ಡಿಸಿಎಫ್ ಶಿವರಾಮ ಬಾಬು, ಎಸಿಎಫ್ ಪ್ರಕಾಶ್ ಪೂಜಾರಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜುಲೈ 12ರಿಂದ ಜೀಪ್ ವ್ಯವಸ್ಥೆ ಮಾಡಲಾಗಿದೆ.
ಒಂದು ದಿನಕ್ಕೆ ಎಂಟು ಟ್ರಿಪ್: ಅರಣ್ಯ ಇಲಾಖೆಯ ಜೀಪು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಬರಲು ಒಂದು ದಿನಕ್ಕೆ ಸುಮಾರು ಎಂಟು ಟ್ರಿಪ್ ಹೊಡೆಯಬೇಕಾಗುತ್ತದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳನ್ನು ಬೆಳಿಗ್ಗೆ ಬೇಗ ಕರೆದುಕೊಂಡು ಹೋಗಿ ನೆಲ್ಲಿಕಟ್ಟೆಯ ತನಕ ಬಿಟ್ಟು ಬರಬೇಕಾಗುತ್ತದೆ. ಅಲ್ಲಿಂದ ಅವರಿಗೆ ಬಸ್ ಸಿಗುತ್ತದೆ.
15 ವಿದ್ಯಾರ್ಥಿಗಳಿಗೆ ಉಪಯೋಗ: ಮೇಗದ್ದೆ, ವಣಜಾರು, ಕೂಡ್ಲು, ಕೆದ್ಳುಮಕ್ಕಿ, ಬೆಳಾರ್ ಕಡೆಯಿಂದ ಸುಮಾರು 15 ವಿದ್ಯಾರ್ಥಿಗಳು ಜೀಪಿನಲ್ಲಿ ಸಂಚರಿಸುತ್ತಾರೆ. ಕೆಲವರು ಹೆದರಿಕೆಯಿಂದ ಶಾಲೆ ಹೋಗುವುದು ಹೇಗೆ ಎಂದು ಚಿಂತಿಸುತ್ತಿರುವಾಗ, ಅರಣ್ಯ ಇಲಾಖೆ ಯೋಜನೆ ಫಲಪ್ರದವಾಗಿದೆ. ಇನ್ನು ಕೆಲವು ಹೆತ್ತವರು, ಸಮಸ್ಯೆಯಿಂದ ಕಂಗೆಟ್ಟು ವಿದ್ಯಾರ್ಥಿಗಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದಾರೆ.
ಜೀಪಿನಲ್ಲಿ ಬಹುತೇಕ ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಬಹಳಷ್ಟು ಪುಟಾಣಿಗಳು ಆನೆಯ ಭಯದಿಂದ ಶಾಲೆಗೆ ಹೋಗುತ್ತಿದ್ದರು. ಈಗ ಅವರಿಗೆಲ್ಲ ಅನುಕೂಲವಾಗಿದೆ. ಹೆತ್ತವರ ಮುಖದಲ್ಲಿ ಮಂದವಾಸ ಮೂಡಿದೆ. ಆರ್.ಎಫ್.ಒ ಗೌರವ ಎಸ್.ಎಂ. ಮತ್ತು ಡಿಆರ್‌ಎಫ್‌ಒ ಜುನೈದ್ ಅಖ್ತರ್ ಮತ್ತು ತಂಡದ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆನೆಯನ್ನು ಓಡಿಸಬೇಕೆಂದು ಊರಿನ ಗ್ರಾಮಸ್ಥರೆಲ್ಲರೂ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಅದು ಅರಣ್ಯ ಇಲಾಖೆಯ ಮೇಲೆ ಬಹಳಷ್ಟು ಒತ್ತಡ ತಂದಿತ್ತು. ಅರಣ್ಯ ಇಲಾಖೆಯು ಸದಾ ಜನರೊಂದಿಗೆ ಇದೆ ಎಂದು ತೋರಿಸಿಕೊಡಲು ಇದೊಂದು ವಿನೂತನವಾದ ಕಾರ್ಯವಾಗಿದೆ. ಊರಿನ ಬಹಳಷ್ಟು ಮಂದಿ ವಿದ್ಯಾರ್ಥಿಗಳಿಗೆ ಇದು ಸಹಾಯಕವಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಜೀಪ್ ವ್ಯವಸ್ಥೆ ಮಾಡಿರುವುದರಿಂದ ನಮಗೆ ಆನೆ ಭಯದಿಂದ ಮುಕ್ತಿ ಸಿಕ್ಕಿದೆ. ಅರಣ್ಯ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇನೆ.
–ಅನ್ವಿತಾ ವಿದ್ಯಾರ್ಥಿನಿ
ನಿರಂತರ ಸಹಕಾರ ನೀಡಿ ನಮ್ಮ ಇಲಾಖೆ ನಿಂತರವಾಗಿ ಊರಿನ ಜನರ ಜೊತೆ ಇದೆ. ಆನೆ ದಾಳಿ ಭಯದಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಿದ್ಧರಾಗುತ್ತಿರಲಿಲ್ಲ ನಮ್ಮ ಕೋರಿಕೆಯಂತೆ ಉನ್ನತಾಧಿಕಾರಿಗಳು ಮಕ್ಕಳಿಗೆ ಜೀಪ್ ವ್ಯವಸ್ಥೆ ಮಾಡಲು ವಿಶೇಷ ಸಹಕಾರ ನೀಡಿದ್ದಾರೆ. ಯಾರು ಭಯ ಪಡುವ ಅಗತ್ಯ ಇಲ್ಲ. ಕೃಷಿ ನಾಶಕ್ಕೆ ಸಂಬಂಧಿಸಿದಂತೆ ಎಲ್ಲರಿಗೂ ಸೂಕ್ತ ಪರಿಹಾರ ನೀಡುತ್ತೇವೆ. ಜನರು ನಮಗೆ ನಿರಂತರವಾಗಿ ಸಹಕಾರ ನೀಡಿ ಎಂದು ಸೋಮೇಶ್ವರ ವನ್ಯಜೀವಿ ವಿಭಾಗ ಹೆಬ್ರಿ ಅರಣ್ಯಾಧಿಕಾರಿ ಗೌರವ್ ಎಂ. ಎಸ್. ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.