
ಬ್ರಹ್ಮಾವರ: ಮಂದಾರ್ತಿ ಬಳಿಯ ಹೆಗ್ಗುಂಜೆ ಗ್ರಾಮದ ನೀರ್ ಜೆಡ್ಡು ಎಂಬಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಿದ್ದ 5 ಶೆಡ್ ಮತ್ತು ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಆದೇಶದಂತೆ ಹಾಗೂ ಲೋಕಾಯುಕ್ತ ಪ್ರಕರಣದಲ್ಲಿ ನೀಡಿದ ನಿರ್ದೇಶನದಂತೆ ಸೋಮವಾರ ತೆರೆವುಗೊಳಿಸಲಾಯಿತು.
ಹೆಗ್ಗುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 2ಎಕರೆ ಸರ್ಕಾರಿ ಜಮೀನಿನಲ್ಲಿ ವಿಜಯ ಚೌಟ ಎಂಬುವರು ಸರ್ಕಾರಿ ಜಮೀನನ್ನು ಕೆಲವರಿಗೆ ಹಣಕ್ಕೆ ಮಾರಾಟ ಮಾಡಲು ರಶೀದಿಯ ಮೂಲಕ ಮಾರಾಟ ಮಾಡಿ ಅದರಲ್ಲಿ ಅನಧಿಕೃತವಾಗಿ ಕಟ್ಟಡ ಕಟ್ಟಿದ ಬಗ್ಗೆ ಮಂದಾರ್ತಿ ಕೊಂಡಾಡಿಬೆಟ್ಟಿನ ವಿಜಯ ಲಕ್ಷ್ಮೀ ಹೆಬ್ಬಾಡಿ ಅವರು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರ ನ್ಯಾಯಾಲಯ, ಕಂದಾಯ ಸಚಿವರು ಮತ್ತು ಕರ್ನಾಟಕದ ಸಾರ್ವಜನಿಕ ಜಮೀನುಗಳ ನಿಗಮ, ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ನಂತರ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣಗಳು ವಿಚಾರಣೆ ನಡೆದು, ಒತ್ತುವರಿ ಜಮೀನಿಗೆ ಸಂಬಂಧಿಸಿದಂತೆ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನವನ್ನು ನೀಡಲಾಗಿತ್ತು.
ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಆದೇಶದಂತೆ ಕ್ರಮ ಜರುಗಿಸಲು ಬಾಕಿ ಇರುವಾಗ ಒತ್ತುವರಿ ಜಾಗದಲ್ಲಿಯೇ ಬೆಳ್ಳ ನಾಯ್ಕ ಎನ್ನುವವರು ಕಟ್ಟಡ ಕಾಮಗಾರಿಯನ್ನು ನಡೆಸಿದ್ದರು. ಅನೇಕ ಬಾರಿ ತೆರವುಗೊಳಿಸಲು ಆದೇಶ ನೀಡಿದ್ದರೂ ಕಾಮಗಾರಿ ನಿಲ್ಲಿಸದೇ ಮುಂದುವರಿಸಿದ್ದರು. ತಾಲ್ಲೂಕು ಕಚೇರಿಯಿಂದ ನೋಟೀಸ್ ನೀಡಿದರೂ ಸಹಾ ಬೆಳ್ಳ ನಾಯ್ಕ ರವರು ಕಟ್ಟಡ ಕಾಮಗಾರಿಯನ್ನು ಮುಂದುವರಿಸಿದ ಕಾರಣ ಅನಧಿಕೃತ ಕಟ್ಟಡ ಹಾಗೂ ವಾಸವಿಲ್ಲದ ಶೆಡ್ ಗಳನ್ನು ಜನವರಿ 8 ರಂದು ಮತ್ತೆ ತೆರವು ಮಾಡುವಂತೆ ಆದೇಶವನ್ನು ನೀಡಲಾಗಿದ್ದರೂ, ತೆರವುಗೊಳಿಸಲು ಹೋದ ಸಂದರ್ಭದಲ್ಲಿ ತೆರವು ಕಾರ್ಯಕ್ಕೆ ಅಡ್ಡಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ತೆರವು ಕಾರ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿ ಸೋಮವಾರ ಪೊಲೀಸರ ಸಮ್ಮುಖದಲ್ಲಿ ಒತ್ತುವರಿ ತೆರವುಗೊಳಿಸಲಾಯಿತು.
ಸಂಸದರು, ಶಾಸಕರ ಬೇಟಿ: ಮನೆ ಕೆಡವಿರುವ ಸ್ಥಳಕ್ಕೆ ಸೋಮವಾರ ಸಂಜೆ ಉಡುಪಿ ಚಿಕ್ಕಮಂಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಂದಾಪುರದ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕೊಡ್ಗಿ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮನೆಯ ವಾರೀಸುದಾರರಿಗೆ ಸಾಂತ್ವನ ಹೇಳಿ ನಿಮ್ಮೊಂದಿಗೆ ನಾವಿದ್ದೇವೆ ನ್ಯಾಯ ಒದಗಿಸಿ, ಸೂರು ಒದಗಿಸಲು ಕೈ ಜೋಡಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಹೆಗ್ಗುಂಜೆ ಗ್ರಾ.ಪಂ ಸದಸ್ಯ ಗುರುಪ್ರಸಾದ ನೀರ್ಜೆಡ್ಡು, ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.