ADVERTISEMENT

ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಹೆಮ್ಮಾಡಿಯ ಪ್ರತಿಭೆಗಳು: ಶ್ರೀಕಾಂತ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2023, 13:23 IST
Last Updated 26 ನವೆಂಬರ್ 2023, 13:23 IST
ಕುಂದಾಪುರ ಸಮೀಪದ ಹೆಮ್ಮಾಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಭಾನುವಾರ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ನಡೆಯಿತು.
ಕುಂದಾಪುರ ಸಮೀಪದ ಹೆಮ್ಮಾಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಭಾನುವಾರ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ನಡೆಯಿತು.   

ಕುಂದಾಪುರ: ಪ್ರಾಥಮಿಕ ಶಿಕ್ಷಣ ಹಂತದಲ್ಲೇ ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ತರಬೇತುಗೊಳಿಸುವುದರಿಂದ, ಭವಿಷ್ಯದಲ್ಲಿ ಸಾಧನೆ ಮಾಡಲು ದಾರಿ ದೀಪವಾಗುತ್ತದೆ ಎಂದು ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಹೇಳಿದರು.

ಭಾನುವಾರ ಇಲ್ಲಿನ ಹೆಮ್ಮಾಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.

ಭಾರತದ ವಾಲಿಬಾಲ್ ತಂಡದಲ್ಲಿ ಗುರುತಿಸಿಕೊಂಡಿರುವ ಶಾಲೆಯ ಹಳೆವಿದ್ಯಾರ್ಥಿ ರೈಸನ್ ಬೆನೆಟ್ ರೆಬೆಲ್ಲೋ ಸೇರಿದಂತೆ ಗ್ರಾಮೀಣ ಭಾಗದ ಹಲವರು ಇದೇ ಮೈದಾನದಲ್ಲಿ ತರಬೇತಿ ನಡೆಸಿ ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿಭೆ ತೋರುತ್ತಿರುವುದು ಗಮನಾರ್ಹ ಸಂಗತಿ ಎಂದರು.

ADVERTISEMENT

ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು ಮತ್ತು 3 ವರ್ಷಗಳಿಂದ ಪೋಷಕರಿಗೆ ಕ್ರೀಡಾಕೂಟ ಆಯೋಜಿಸಿ ಅವರೊಳಗಿರುವ ಕ್ರೀಡಾ ಪ್ರತಿಭೆ ಹೊರತರುವ ಕಾರ್ಯಕ್ಕೆ ಶಾಲಾ ಎಸ್‍ಡಿಎಂಸಿ, ವಾರ್ಷಿಕೋತ್ಸವ ಸಮಿತಿ, ಹಳೆವಿದ್ಯಾರ್ಥಿ ಸಂಘ, ಮುಖ್ಯಶಿಕ್ಷಕರು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಅವರು ಶ್ಲಾಘಿಸಿದರು.

ಕ್ರೀಡಾಪಟು,  ಹಳೆವಿದ್ಯಾರ್ಥಿ ಅಬ್ದುಲ್ ಮುನಾಫ್ ಕ್ರೀಡಾಕೂಟ ಉದ್ಘಾಟಿಸಿ ಶುಭಹಾರೈಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ಅಧ್ಯಕ್ಷತೆ ವಹಿಸಿದ್ದರು. ಜನತಾ ಪ್ರೌಢಶಾಲೆ ಶಿಕ್ಷಕ ಜಗದೀಶ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ರಾಘವೇಂದ್ರ ಕುಲಾಲ್, ನಿವೃತ್ತ ಶಿಕ್ಷಕ ಶಂಕರ ಮಡಿವಾಳ, ಸಿ.ಆರ್.ಪಿ.ಒ ರಾಮನಾಥ ಮೇಸ್ತ ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯೆ ರತ್ನಾ ದೇವಾಡಿಗ, ವಾರ್ಷಿಕೋತ್ಸ ಸಮಿತಿ ಗೌರವಾಧ್ಯಕ್ಷ ದೇವಪ್ಪ ಪೂಜಾರಿ, ಅಧ್ಯಕ್ಷ ಶಾಂತಾರಾಮ್ ಭಟ್, ಕುಂದಾಪುರ ಪೊಲೀಸ್ ಠಾಣೆ ಸಿಬ್ಬಂದಿ ನಾರಾಯಣ, ಪೋಷಕ ರಾಘವೇಂದ್ರ ಬಿ.ಮೊಗವೀರ ಇದ್ದರು. ಮುಖ್ಯಶಿಕ್ಷಕ ವಿ. ದಿವಾಕರ ಸ್ವಾಗತಿಸಿದರು. ಶಿಕ್ಷಕಿಯರಾದ ವಿಜಯಲಕ್ಷ್ಮಿ ವಂದಿಸಿದರು, ಸುಶೀಲಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.