ADVERTISEMENT

ಹೆಮ್ಮಾಡಿ ಸೇವಂತಿಗೆಗೆ ಧಾರಣೆ ಕುಸಿತದ ಬಿಸಿ

ಜಾತ್ರಾ ಮಹೋತ್ಸವಗಳಲ್ಲಿ ಎಲ್ಲಿಲ್ಲದ ಬೇಡಿಕೆ: ಬೆಳೆಗೆ ಪೂರಕವಾದ ಚಳಿಯ ವಾತಾವರಣ

ನವೀನ್ ಕುಮಾರ್ ಜಿ.
Published 25 ಜನವರಿ 2026, 6:22 IST
Last Updated 25 ಜನವರಿ 2026, 6:22 IST
   

ಉಡುಪಿ: ಕುಂದಾಪುರ ತಾಲ್ಲೂಕಿನ ಹೆಮ್ಮಾಡಿಯಲ್ಲಿ ಬೆಳೆಯುವ ಹೆಮ್ಮಾಡಿ ಸೇವಂತಿಗೆ ಕೃಷಿಯಲ್ಲಿ ಈ ಬಾರಿ ಇಳುವರಿ ಅಧಿಕವಾದರೂ ಧಾರಣೆ ಇಳಿಕೆಯಾಗಿರುವುದರಿಂದ ಬೆಳೆಗಾರರಿಗೆ ಲಾಭ ಕುಸಿತವಾಗಿದೆ.

ಸಂಕ್ರಾಂತಿಯ ಸಂದರ್ಭದಲ್ಲಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ದೇವರಿಗೆ ಈ ಹೂವನ್ನು ಹರಕೆಯ ರೂಪದಲ್ಲಿ ಸಮರ್ಪಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ಈ ಜಾತ್ರೆಯ ಸಂದರ್ಭದಲ್ಲಿ ಹೆಮ್ಮಾಡಿ ಸೇವಂತಿಗೆಗೆ ಹೆಚ್ಚು ಬೇಡಿಕೆ ಕುದುರುತ್ತದೆ.

‘ಸುಮಾರು 60ಕ್ಕೂ ಹೆಚ್ಚು ರೈತರು ಹೆಮ್ಮಾಡಿಯಲ್ಲಿ ಈ ಕೃಷಿಯನ್ನು ನೆಚ್ಚಿಕೊಂಡಿದ್ದಾರೆ. ಪ್ರತಿ ವರ್ಷ ಸಾವಿರ ಸೇವಂತಿಗೆ ಹೂಗಳಿಗೆ ₹400 ರಿಂದ ₹600 ವರೆಗೆ ಧಾರಣೆ ಇರುತ್ತಿತ್ತು . ಆದರೆ ಈ ಬಾರಿ ಸಾವಿರ ಹೂವುಗಳಿಗೆ ₹200 ರಿಂದ ₹250ಕ್ಕೆ ಕುಸಿದಿದೆ’ ಎನ್ನುತ್ತಾರೆ ಸೇವಂತಿಗೆ ಬೆಳೆಗಾರ ಪ್ರಶಾಂತ್‌ ಭಂಡಾರಿ ಹೆಮ್ಮಾಡಿ.

ADVERTISEMENT

ಕೇವಲ ಮಾರಣಕಟ್ಟೆ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಮಾತ್ರವಲ್ಲದೆ ಅನಂತರ ಬರುವ ವಿವಿಧ ಜಾತ್ರೆಗಳಲ್ಲಿ, ದೈವಸ್ಥಾನಗಳ ಕೆಂಡ ಸೇವೆಗಳಲ್ಲೂ ಹೆಮ್ಮಾಡಿ ಸೇವಂತಿಗೆಗೆ ಬೇಡಿಕೆ ಇರುವುದರಿಂದ ಬೆಳೆಗಾರರು ವರ್ಷದಲ್ಲಿ ಮೂರು ಬೆಳೆಗಳನ್ನು ಬೆಳೆಯುತ್ತಾರೆ.

ಈ ಬಾರಿ ಚಳಿಯ ವಾತಾವರಣವಿದ್ದುದರಿಂದ ಇಳುವರಿ ಅಧಿಕ ಬಂದಿದೆ. ಅಲ್ಲದೇ ಈ ಬಾರಿ ಯಾವುದೇ ರೋಗವು ಹೂವಿನ ಗಿಡಗಳಿಗೆ ಬಾಧಿಸಿರಲಿಲ್ಲ. ಆದರೆ ಹೂವಿನ ದರ ಮಾತ್ರ ಕುಸಿತವಾಗಿದೆ ಎನ್ನುತ್ತಾರೆ ಬೆಳೆಗಾರರು.

ತಾವು ಬೆಳೆದ ಹೂವುಗಳನ್ನು ರೈತರು ನೇರವಾಗಿ ಮಾರುಕಟ್ಟೆಗೆ ತಲುಪಿಸುವುದರಿಂದ ಮಧ್ಯವರ್ತಿಗಳ ಹಾವಳಿ ಇಲ್ಲಿ ಇರುವುದಿಲ್ಲ. ಹೂಗಳನ್ನು ಬಾಳೆ ಗಿಡದ ನಾರಿನಿಂದ ಕಟ್ಟುತ್ತಾರೆ. ಈಗ ಮಾರುಕಟ್ಟೆಗೆ ಬೇರೆ ಜಿಲ್ಲೆಯ ಹೂವುಗಳು ಬರುತ್ತಿದ್ದರೂ ಹೆಮ್ಮಾಡಿ ಸೇವಂತಿಗೆಗೆ ಬೇಡಿಕೆ ಕಡಿಮೆಯಾಗಿಲ್ಲ ಎಂದೂ ಹೇಳುತ್ತಾರೆ.

ಸಾಂಪ್ರದಾಯಿಕ ತಳಿಯಾದ ಹೆಮ್ಮಾಡಿ ಸೇವಂತಿಯ ಜೊತೆಗೆ ಬೆಳೆಗಾರರು ಸೆಂಟ್ ಎಲ್ಲೊ, ಸೆಂಟ್ ವೈಟ್, ಚಾಂದಿನಿ ತಳಿಯ ಸೇವಂತಿಗೆಯನ್ನೂ ಬೆಳೆಯುತ್ತಾರೆ. ಹೆಮ್ಮಾಡಿ ಸೇವಂತಿಗೆ ತಳಿಯ ಹೂವುಗಳು ಸಣ್ಣದಾದರೂ ಇಳುವರಿ ಅಧಿಕ ಸಿಗುತ್ತದೆ ಎನ್ನುತ್ತಾರೆ ರೈತರು.

ಹೆಮ್ಮಾಡಿ ಗ್ರಾಮದ ಕಟ್ಟು, ಅರೆಗೋಡು, ಹೆಮ್ಮಾಡಿಯಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಸೇವಂತಿಗೆ ಹೂವು ಕೊಯ್ಲಿಗೆ ಬರಬೇಕಾದರೆ ನಾಲ್ಕು ತಿಂಗಳು ಬೇಕಾಗುತ್ತದೆ. ಸೆಪ್ಟೆಂಬರ್, ಅಕ್ಟೋಬರ್ ಮತ್ತು ಅಕ್ಟೋಬರ್ ತಿಂಗಳ ಕೊನೆಯಲ್ಲಿ ರೈತರು ಈ ಹೂವಿನ ಬೆಳೆಯನ್ನು ಬೆಳೆಯುತ್ತಾರೆ.

ಒಂದು ಗದ್ದೆಯಲ್ಲಿ ಒಂದೇ ಬೆಳೆಯನ್ನು ಬೆಳೆಯುತ್ತೇವೆ. ಎರಡನೇ ಮತ್ತು ಮೂರನೇ ಬೆಳೆಗಳನ್ನು ಪ್ರತ್ಯೇಕ ಗದ್ದೆಗಳಲ್ಲಿ ಬೆಳೆಯಬೇಕಾಗುತ್ತದೆ ಎನ್ನುತ್ತಾರೆ ರೈತರು.

ಹೆಮ್ಮಾಡಿ ಸೇವಂತಿಗೆ
ಈ ಬಾರಿ ಧಾರಣೆ ಕುಸಿತವಾದರೂ ಬೇಡಿಕೆ ಕಡಿಮೆಯಾಗಿಲ್ಲ ಆ ಕಾರಣಕ್ಕೆ ನಷ್ಟ ಸಂಭವಿಸಿಲ್ಲ. ಆದರೂ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ರೈತರಿಗೆ ಕಡಿಮೆ ಲಾಭ ಸಿಕ್ಕಿದೆ
ಪ್ರಶಾಂತ್ ಭಂಡಾರಿ ಸೇವಂತಿಗೆ ಬೆಳೆಗಾರ

‘ಹೆಚ್ಚು ಕಾರ್ಮಿಕರು ಬೇಕು’

ಸೇವಂತಿಗೆ ಬೆಳೆಯುವಾಗ ಗದ್ದೆ ಹದ ಮಾಡಲು ಹೂವು ಕೊಯ್ಯಲು ಸೇರಿದಂತೆ ವಿವಿಧ ಕೆಲಸಗಳಿಗೆ ಹೆಚ್ಚು ಕಾರ್ಮಿಕರು ಬೇಕಾಗುತ್ತಾರೆ. ವಾರದಲ್ಲಿ ಒಂದು ಬಾರಿ ಕಟಾವು ಮಾಡುತ್ತಿದ್ದು ಬೆಳಿಗ್ಗೆ 9 ಗಂಟೆಯಿಂದ 11 ಗಂಟೆವರೆಗೆ ಮತ್ತು ಸಂಜೆ ಮೂರು ಗಂಟೆಯಿಂದ ಆರು ಗಂಟೆವರೆಗೆ ಕೊಯ್ಲು ನಡೆಯುತ್ತದೆ’ ಎನ್ನುತ್ತಾರೆ ಬೆಳೆಗಾರ ಪ್ರಶಾಂತ್ ಭಂಡಾರಿ. ‘ನಾನು 20 ವರ್ಷಗಳಿಂದ ಹೆಮ್ಮಾಡಿ ಸೇವಂತಿಗೆ ಬೆಳೆಯುತ್ತಿದ್ದೇನೆ. ಅದಕ್ಕೂ ಮೊದಲಿಂದಲೂ ನಮ್ಮ ತಂದೆ ಅಜ್ಜ ಕೂಡ ಇದೇ ಕೃಷಿಯನ್ನು ಮಾಡುತ್ತಿದ್ದರು. ಪ್ರತಿ ವರ್ಷ ಆಗಸ್ಟ್‌ ತಿಂಗಳಲ್ಲಿ ಹೂವಿನ ತಾಯಿ ಗಿಡದಿಂದ ಟಿಸಿಲು ತುಂಡರಿಸಿ ಅದನ್ನು ನರ್ಸರಿ ಮಾಡಿ ಗಿಡ ಸಿದ್ಧ ಮಾಡಿಟ್ಟುಕೊಳ್ಳುತ್ತೇವೆ ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.