ಬ್ರಹ್ಮಾವರ: ಜಿಲ್ಲಾಡಳಿತವು ದೇವಸ್ಥಾನ, ಕಡಲತೀರದ ಪ್ರವಾಸೋದ್ಯಮಕ್ಕೆ ಮಹತ್ವ ನೀಡುತ್ತಿದೆ. ಇತಿಹಾಸಕ್ಕೆ ಸಂಬಂಧಿಸಿದ ಪ್ರವಾಸೋದ್ಯಮಕ್ಕೆ ಪ್ರಾಮುಖ್ಯತೆ ನೀಡುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಇತಿಹಾಸ ತಜ್ಞ ಜಗದೀಶ ಶೆಟ್ಟಿ ಆಗ್ರಹಿಸಿದರು.
ಬಸ್ರೂರಿನ ಶಾರದಾ ಕಾಲೇಜು, ಇತಿಹಾಸ ವಿಭಾಗ ಹಾಗೂ ಬಾರ್ಕೂರು ಶ್ರೀಮತಿ ರುಕ್ಕಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು, ಬಾರ್ಕೂರು, ಯಡ್ತಾಡಿ ಮತ್ತು ಹನೆಹಳ್ಳಿ ಗ್ರಾಮ ಪಂಚಾಯಿತಿ, ಬಾರ್ಕೂರು ರೋಟರಿ ಕ್ಲಬ್, ರಾಜಧಾನಿ ಯೂತ್ ಕ್ಲಬ್, ಬಾರ್ಕೂರು ಸ್ಪೋರ್ಟ್ಸ್ ಮತ್ತು ಕಲ್ಬರಲ್ ಕ್ಲಬ್, ಬಾರ್ಕೂರು ಆನ್‌ಲೈನ್ ಡಾಟ್ ಕಾಂ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಜಂಟಿ ಆಶ್ರಯದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಅಭಿಯಾನದ ಭಾಗವಾಗಿ ಬಾರ್ಕೂರು ಮಣಿಗಾರಕೇರಿಯ ಸೋಮನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆದ ಮರೆಯಲಾಗದ ತುಳುನಾಡಿನ ರಾಜಧಾನಿ ಬಾರ್ಕೂರಿನಲ್ಲಿ ಪರಂಪರೆ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಐತಿಹಾಸಿಕ ಪರಂಪರೆ ಹೊಂದಿರುವ ಬಾರ್ಕೂರು ಪ್ರವಾಸಿ ಕೇಂದ್ರವಾಗಿ ಬೆಳೆಯುವ ಎಲ್ಲ ಅರ್ಹತೆ ಹೊಂದಿದ್ದರೂ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ ನಿರ್ಲಕ್ಷ್ಯ ತೋರಿರುವುದು ಬೇಸರದ ಸಂಗತಿ. ಬಾರ್ಕೂರಿಗೆ 2 ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ವಿದೇಶದೊಂದಿಗೆ ಸಂಪರ್ಕ ಸಾಧಿಸಲು ಬಾರ್ಕೂರು ಮುಖ್ಯ ಕೇಂದ್ರವಾಗಿತ್ತು. ಅಳುಪರ ಕಾಲದಲ್ಲಿ ವ್ಯಾಪಾರಿ ಕೇಂದ್ರವಾಗಿತ್ತು. ವಿಜಯನಗರ ಕಾಲದಲ್ಲಿ ರಾಜಧಾನಿಯಾಗಿ ಮೆರೆದಿತ್ತು. ನಾಥಪಂಥ, ದೇವಿಯ ಆರಾಧನಾ ಕೇಂದ್ರವಾಗಿತ್ತು. ಆದರೆ, ಇಂದು ಎಲ್ಲವೂ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಬಸ್ರೂರು ಶಾರದಾ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯೆ ಅನುಪಮಾ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಬಾರ್ಕೂರು ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಶ್ರೀನಿವಾಸ ಶೆಟ್ಟಿಗಾರ್, ಯಡ್ತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಸಿ.ಶೆಟ್ಟಿ, ಹನೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ ಪೂಜಾರಿ, ಬಾರ್ಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ ಶೆಟ್ಟಿ ಸಳ್ವಾಡಿ, ನಿವೃತ್ತ ಪ್ರಾಧ್ಯಾಪಕ ಜಯರಾಮ ಶೆಟ್ಟಿಗಾರ್, ಬಾರ್ಕೂರು ರೋಟರಿ ಕ್ಲಬ್ ಅಧ್ಯಕ್ಷೆ ಕಿಶೋರಿ ಎಸ್.ಶೆಟ್ಟಿ, ಬಾರ್ಕೂರು ಸ್ಪೋಟ್ಸ್ ಮತ್ತು ಕಲ್ಚರಲ್ ಕ್ಲಬ್ ಅಧ್ಯಕ್ಷ ಸತೀಶ್ ಎಸ್.ಅಮೀನ್, ಬಸ್ರೂರು ಶಾರದಾ ಕಾಲೇಜಿನ ಆಡಳಿತಾಧಿಕಾರಿ ಮೋಹನ್ ಕೆ.ಎನ್, ಪ್ರಾಂಶುಪಾಲೆ ಪ್ರೊ. ಚಂದ್ರಾವತಿ ಶೆಟ್ಟಿ ಇದ್ದರು.
ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಂಪರೆ ನಡಿಗೆಗೆ ಚಾಲನೆ ನೀಡಿದ ನಂತರ ಬಾರ್ಕೂರಿನ ಐತಿಹಾಸಿಕ ಸ್ಥಳಗಳು, ಸ್ಮಾರಕಗಳ ಪ್ರದೇಶ, ಕೋಟೆ ಪ್ರದೇಶಗಳು ಹಾಗೂ ದೇವಸ್ಥಾನಗಳಿಗೆ ಪರಂಪರೆಯನ್ನು ಬಿಂಬಿಸುವ ನಡಿಗೆಯ ಜಾಥಾ ನಡೆಯಿತು.
ವಿದ್ಯಾರ್ಥಿಗಳು ಬಾರ್ಕೂರಿನಲ್ಲಿ ನಡಸಿದ ಐತಿಹಾಸಿಕ ಪರಂಪರೆ ನಡಿಗೆಯು ಜಿಲ್ಲಾಡಳಿತದ ಕಣ್ಣು ತೆರೆಸುವ ಕಾರ್ಯ ಮಾಡಲಿ.– ಜಗದೀಶ ಶೆಟ್ಟ, ಇತಿಹಾಸ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.