
ಕಾರ್ಕಳ: ತಾಲ್ಲೂಕಿನ ಸಾಣೂರಿನಿಂದ ಬಿಕರ್ನಕಟ್ಟೆ ತನಕ ಸಾಗುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ನಿರಂತರ ಸಮಸ್ಯೆಗಳು ಕಾಡುತ್ತಿವೆ.
ಗ್ರಾಮದಲ್ಲಿ 2 ಕಿಲೊಮೀಟರ್ ಸರ್ವಿಸ್ ರಸ್ತೆ ನಿರ್ಮಾಣದ ಪ್ರಸ್ತಾವನೆಗೆ ಇನ್ನೂ ಅಂಗೀಕಾರ ಸಿಗದ ಕಾರಣ ಗ್ರಾಮಸ್ಥರು ಪೇಟೆ ದಾಟಲು ಕಷ್ಟಪಡುತ್ತಿದ್ದಾರೆ. ಹೆದ್ದಾರಿ ಅಕ್ಕಪಕ್ಕದ ವಾಹನಗಳು ಮತ್ತು ಜನರು ನೇರವಾಗಿ ಮುಖ್ಯರಸ್ತೆಗೆ ಬರುತ್ತವೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ.
ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ ಮಾಡಿದ್ದರಿಂದ ಶಾಸಕರು, ಸಂಸದರು ಮತ್ತು ಜಿಲ್ಲಾಧಿಕಾರಿ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. ಆದರೂ ಪ್ರಗತಿ ಕಂಡುಬರಲಿಲ್ಲ. ತಿರುವುಗಳಲ್ಲಿ ಗೊಂದಲವಾಗದಂತೆ ಬ್ಲಿಂಕರ್, ಬೆಳಕಿನ ವ್ಯವಸ್ಥೆ, ಫ್ಲೋರಸೆಂಟ್ ಸ್ಟಿಕ್ಕರ್ ಅಳವಡಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಸಾಣೂರು ರಾಷ್ಟ್ರೀಯ ಹೆದ್ದಾರಿಯ ಹೊಸ ಸೇತುವೆ ಡಾಂಬರೀಕರಣ ಪೂರ್ಣಗೊಂಡಿದ್ದು ವಾಹನ ಚಲಾವಣೆಗೆ ಅವಕಾಶ ಕಲ್ಪಿಸಿಲ್ಲ. ರಸ್ತೆ ಕಾಮಗಾರಿ ನಡೆಯುವ ಅಕ್ಕಪಕ್ಕದಲ್ಲಿ ಮಣ್ಣು, ಕಬ್ಬಿಣದ ಸಾಮಗ್ರಿ ರಾಶಿ ಬಿದ್ದಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಪ್ರಾಣಿಗಳು ಹತ್ತಿರ ಹೋದರೆ ಕೊರಳಿಗೆ ಬೀಳುವ ಅಪಾಯವಿದೆ ಎನ್ನುತ್ತಾರೆ ಜನರು.
ಕಾಮಗಾರಿ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಕಾಂಕ್ರಿಟ್ ಪ್ರವೇಶದ್ವಾರ ಹಾಗೂ ಬಸ್ ಪ್ರಯಾಣಿಕರ ತಂಗುದಾಣ ಕಿತ್ತು ಹಾಕಿರುವ ಕಾರಣ ಸಾರ್ವಜನಿಕರು ಬಿಸಿಲಲ್ಲೇ ಕಾಯಬೇಕಾಗಿದೆ. ಮುರತಂಗಡಿ–ಇರ್ವತ್ತೂರು ಜಂಕ್ಷನ್‌ನಲ್ಲಿ ಸರ್ವಿಸ್ ರಸ್ತೆ ಅಪೂರ್ಣವಾಗಿದೆ. ರಾತ್ರಿ ಹೈ ಮಾಸ್ಟ್ ದೀಪವಾದರೂ ಇರಬೇಕಿತ್ತು ಎಂಬುದು ವಾಹನ ಚಾಲಕರ ಆಗ್ರಹ. ಸಾಣೂರು ಫುಲ್ಕೇರಿ–ಬೈಪಾಸ್ ವೃತ್ತದ ಬಳಿಯೂ ಇದೇ ಸಮಸ್ಯೆ ಎನ್ನುತ್ತಾರೆ ಸ್ಥಳೀಯರು.
ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಆದಷ್ಟು ಬೇಗ ಪೂರ್ಣಗೊಳಿಸಿ ಸುರಕ್ಷತೆಗೆ ಆದ್ಯತೆ ನೀಡಬೇಕು.-ಸಾಣೂರು ನರಸಿಂಹ ಕಾಮತ್, ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.