ADVERTISEMENT

ಉಡುಪಿ | ಹಿಜಾಬ್ ವಿವಾದ; ವೇಷಭೂಷಣ ಶಿಕ್ಷಣಕ್ಕೆ ಅಡ್ಡಿಯಾಗದಿರಲಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 13:34 IST
Last Updated 3 ಫೆಬ್ರುವರಿ 2022, 13:34 IST

ಉಡುಪಿ: ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸುವ ಮೂಲಕ ಶಿಕ್ಷಣದ ಮೂಲಭೂತ ಹಕ್ಕನ್ನು ಕಾಲೇಜು ಪ್ರಾಂಶುಪಾಲರು ಹಾಗೂ ಕಾಲೇಜು ಆಡಳಿತ ಮಂಡಳಿ ಕಸಿದುಕೊಂಡಿದೆ ಎಂದು ಎಸ್‌ಎಸ್‌ಎಫ್‌ ಕ್ಯಾಂಪಸ್‌ ಸಿಂಡಿಕೇಟ್‌ ಆಕ್ಷೇಪ ವ್ಯಕ್ತಪಡಿಸಿದೆ.

ಹಿಜಾಬ್‌ ಧರಿಸಿದ ಕಾರಣಕ್ಕೆ ತಿಂಗಳಿಗೂ ಹೆಚ್ಚಿನ ಕಾಲ ವಿದ್ಯಾರ್ಥಿನಿಯರನ್ನು ತರಗತಿಗೆ ಸೇರಿಸಿಕೊಳ್ಳದೆ ಶಾಲೆಯ ವರಾಂಡದಲ್ಲಿ ಕೂರಿಸಿದ್ದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇಷ್ಟದ ಧಿರಿಸು ಧರಿಸಲು ಸಂವಿಧಾನವು ವೈಯಕ್ತಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಹಿಂದಿನಿಂದಲೂ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಶಿಕ್ಷಣ ಸಂಸ್ಥೆಗಳಿಗೆ ಹೋಗುತ್ತಿದ್ದಾರೆ.

ಕುಂಕುಮ, ನಾಮ, ಹಣೆಬೊಟ್ಟು ಇಟ್ಟುಕೊಳ್ಳುವುದು, ಹಿಜಾಬ್ ಧರಿಸುವುದು ಕೂಡ ಧಾರ್ಮಿಕ ಸ್ವಾತಂತ್ರ್ಯವಾಗಿದೆ. ಹಿಜಾಬ್‌ಗೆ ಸರ್ಕಾರಿ ಮಹಿಳಾ ಕಾಲೇಜಿನಲ್ಲಿಯೇ ವಿರೋಧಿಸಿರುವುದು ಮೂಲಭೂತ ಹಕ್ಕನ್ನು ಕಸಿದುಕೊಂಡಂತಾಗಿದೆ. ಕೆಲವು ಕೋಮುವಾದಿ ಸಂಘಟನೆಗಳು ವಿವಾದವನ್ನು ಬಳಸಿಕೊಳ್ಳುತ್ತಿದ್ದು, ಸಮಾಜದಲ್ಲಿ ಶಾಂತಿ ಕದಡುತ್ತಿದ್ದು, ಸಮಾಜ ಒಡೆಯಲು ಯತ್ನಿಸುತ್ತಿವೆ.

ADVERTISEMENT

ಈಗಾಗಲೇ ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಂ ಮಹಿಳೆಯರನ್ನು ಅನಗತ್ಯವಾಗಿ ಹಿಜಾಬ್‌ ವಿವಾದಕ್ಕೆ ಸಿಲುಕಿಸಿ ಶಿಕ್ಷಣದಿಂದ ವಂಚಿತರನ್ನಾಗಿಸುವ ಷಡ್ಯಂತ್ರವಾಗಿ ಕಾಣುತ್ತಿದೆ. ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯ ವರದಿ ಪ್ರಕಾರ ದೇಶದಲ್ಲಿ ಶಾಲೆ ಮೊಟಕುಗೊಳಿಸಿದ ವಿದ್ಯಾರ್ಥಿಗಳ ಪ್ರಮಾಣ ಶೇ 18.96ರಷ್ಟಿದ್ದು, ಅದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಶೇ 23.1ರಷ್ಟಿರುವುದು ಕಳವಳಕಾರಿ.

ಕರ್ನಾಟಕದಲ್ಲಿ ಶಾಲೆಬಿಟ್ಟ ಮುಸ್ಲಿಂ ವಿದ್ಯಾರ್ಥಿಗಳ ಪ್ರಮಾಣ ಶೇ 24.3ರಷ್ಟಿದ್ದು, ಶಾಲೆ ಬಿಟ್ಟ ನಾಲ್ವರು ವಿದ್ಯಾರ್ಥಿಗಳಲ್ಲಿ ಒಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಿಜಾಬ್ ವಿವಾದದಿಂದ ಮುಸ್ಲಿಂ ಸಮುದಾಯ ಮತ್ತಷ್ಟು ಶಿಕ್ಷಣ ವಂಚಿತರಾಗಬೇಕಿದೆ ಎಂದು ಎಸ್‌ಎಸ್‌ಎಫ್‌ ಕ್ಯಾಂಪಸ್‌ ಸಿಂಡಿಕೇಟ್‌ ಕಾರ್ಯದರ್ಶಿ ಶರೀಫ್ ಎಂ.ಎ.ಕೊಡಗು ಆತಂಕ ವ್ಯಕ್ತಪಡಿಸಿದ್ದಾರೆ.

ಹಿಜಾಬ್ ವಿವಾದ ಬಿಜೆಪಿಗೆ ಲಾಭ: ಸಿಪಿಐ(ಎಂ)
ಉಡುಪಿ:
ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ವಿವಾದ ಜಿಲ್ಲೆಯ ಬೇರೆ ಕಾಲೇಜುಗಳಿಗೆ ವಿಸ್ತರಿಸುತ್ತಿದ್ದು, ಬಿಜೆಪಿ ಸರ್ಕಾರಕ್ಕೆ ಲಾಭವಾಗಿದೆ. ಬೆಲೆ ಏರಿಕೆ, ನಿರುದ್ಯೋಗ, ಆದಾಯ ಕುಸಿತ, ಶಾಲಾ ಶುಲ್ಕ ಹೆಚ್ಚಳ ಸಮಸ್ಯೆಗಳಿಂದ ಜನರ ಜೀವನ ದುಸ್ತರವಾಗಿದೆ. ಕೋವಿಡ್ ಸನ್ನಿವೇಶದಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ನೀತಿಗಳಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿಯ ಪ್ರಭಾವ ಕುಂದುತ್ತಿರುವ ಸಂದರ್ಭ ಹಿಜಾಬ್ ವಿವಾದವು ಬಿಜೆಪಿಗೆ ಮರುಭೂಮಿಯಲ್ಲಿ ಸಿಕ್ಕ ನೀರಿನಂತಾಗಿದೆ. ಶೈಕ್ಷಣಿಕ ವರ್ಷ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಎದುರಿಸುವತ್ತ ಚಿತ್ತ ಹರಿಸಬೇಕಾಗಿದ್ದು, ಕಾಲೇಜುಗಳಲ್ಲಿ ಶಾಂತಿಯುತ ವಾತಾವರಣ ಇರಬೇಕು. ಪೋಷಕರು ಹಾಗೂ ನಾಗರಿಕರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಎಂದು ಸಿಪಿಐ(ಎಂ) ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.