ADVERTISEMENT

ಹಿಜಾಬ್‌ ವಿವಾದ: ವಿಜ್ಞಾನ ಪ್ರಾಯೋಗಿಕ ಪರೀಕ್ಷೆ ಮುಂದೂಡಲು ವಿದ್ಯಾರ್ಥಿನಿಯರ ಆಗ್ರಹ

ಹಿಜಾಬ್‌ಗಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 14:02 IST
Last Updated 23 ಫೆಬ್ರುವರಿ 2022, 14:02 IST
ಹಿಜಾಬ್‌ಗಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಿಜಾಬ್‌ಗಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   

ಉಡುಪಿ: ಹೈಕೋರ್ಟ್‌ನಲ್ಲಿ ಹಿಜಾಬ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಅಂತಿಮ ಆದೇಶ ಬರುವವರೆಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಹಿಜಾಬ್‌ಗಾಗಿ ಹೋರಾಟ ನಡೆಸುತ್ತಿರುವ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಲಿಯಾ ಅಸಾದಿ ಒತ್ತಾಯಿಸಿದರು.

ಬುಧವಾರ ಸಹಪಾಠಿಗಳ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಪ್ರಾಯೋಗಿಕ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಬರೆಯಲು ಸಾಧ್ಯವಿಲ್ಲದ್ದರಿಂದ ಅಂತಿಮ ಆದೇಶದವರೆಗೂ ಮುಂದೂಡಬೇಕು. ಈ ಸಂಬಂಧ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ’ ಎಂದರು.

‘ಹಿಜಾಬ್ ಕಾರಣದಿಂದ ರಾಜ್ಯದಾದ್ಯಂತ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ.ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದ್ದು, ನಮ್ಮ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ. ಶೀಘ್ರ ಅಂತಿಮ ಆದೇಶ ಬರಬೇಕು’ ಎಂದು ಆಲಿಯಾ ಆಗ್ರಹಿಸಿದರು.

ADVERTISEMENT

ಜಾಲತಾಣಗಳಲ್ಲಿ ನಿಂದನೆ:

‘ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಸೋರಿಕೆಯಾದ ಬಳಿಕ ಅಪರಿಚಿತರಿಂದ ಹೆಚ್ಚಾಗಿ ಕರೆಗಳು ಬರುತ್ತಿದ್ದು, ಅವಾಚ್ಯವಾಗಿ ನಿಂದಿಸಲಾಗುತ್ತಿದೆ. ಮಾಧ್ಯಮಗಳಿಂದಲೂ ಖಾಸಗಿತನಕ್ಕೆ ಧಕ್ಕೆಯಾಗಿದೆ. ಕೆಲವರು ವಿಡಿಯೋಗಳನ್ನು ವೈರಲ್‌ ಮಾಡಿ ವಿಕೃತಿ ಪ್ರದರ್ಶಿಸುತ್ತಿದ್ದಾರೆ’ ಎಂದು ಆಲ್ಮಾ ಅಸಮಾಧಾನ ವ್ಯಕ್ತಪಡಿಸಿದರು.

ಸಹಪಾಠಿ ಹಾಜ್ರಾ ಶಿಫಾಳ ಪೋಷಕರ ಹೋಟೆಲ್ ಮೇಲೆ ದಾಳಿ ನಡೆಸಿ, ಅಣ್ಣನ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆಯಿಂದ ಶಿಫಾ ಮಾನಸಿಕವಾಗಿ ಜರ್ಜರಿತಗೊಂಡಿದ್ದು ಮನೆಯಿಂದ ಹೊರಬರುತ್ತಿಲ್ಲ. ಹಲ್ಲೆ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹಿಜಾಬ್‌ ಹೋರಾಟದಲ್ಲಿ ಅನವಶ್ಯಕವಾಗಿ ಕುಟುಂಬವನ್ನು ಎಳೆದು ತರಬಾರದು, ಮಾಧ್ಯಮಗಳು ಖಾಸಗಿತನವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.

ಸುಪ್ರೀಂಕೋರ್ಟ್‌ ಮೊರೆ:

ಹೈಕೋರ್ಟ್‌ನಲ್ಲಿ ಹಿಜಾಬ್ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ. ಬರದಿದ್ದರೆ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಹಿಜಾಬ್‌ಗಾಗಿ ಮುಸ್ಲಿಂ ಹೆಣ್ಣುಮಕ್ಕಳು ಕಾಲೇಜಿನ ಗೇಟ್‌ ಹೊರಗೆ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಾದ ಶೀಘ್ರ ಬಗೆಹರಿಯಬೇಕು ಎಂದು ವಿದ್ಯಾರ್ಥಿನಿ ರೇಶಮ್‌ ಒತ್ತಾಯಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.