ADVERTISEMENT

ಮಾರಿ ಪೂಜೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅನುಮತಿ ಬೇಡ: ಹಿಂದೂ ಕಾರ್ಯಕರ್ತರ ಮನವಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 13:28 IST
Last Updated 18 ಮಾರ್ಚ್ 2022, 13:28 IST

ಕಾಪು ಪುರಸಭೆ ಮುಖ್ಯಾಧಿಕಾರಿ, ದೇವಸ್ಥಾನ ಆಡಳಿತ ಮಂಡಳಿಗೆ ಹಿಂದೂ ಕಾರ್ಯಕರ್ತರಿಂದ ಮನವಿ

ಕಾಪು (ಉಡುಪಿ ಜಿಲ್ಲೆ): ಕಾಪುವಿನ ಮೂರು ಮಾರಿಗುಡಿಗಳಲ್ಲಿ ಮಾರ್ಚ್‌ 22 ಹಾಗೂ 23ರಂದು ನಡೆಯುವ ಸುಗ್ಗಿ ಮಾರಿ ಪೂಜೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅಂಗಡಿಗಳನ್ನು ನೀಡಬಾರದು ಎಂದು ಹಿಂದೂ ಕಾರ್ಯಕರ್ತರು ಕಾಪು ಪುರಸಭಾ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಸುಗ್ಗಿ ಮಾರಿ ಪೂಜೆಯ ಸಂದರ್ಭ ಮುಸ್ಲಿಂ ಸಮುದಾಯದವರಿಗೆ ಅಂಗಡಿ, ಸ್ಟಾಲ್‌ಗಳನ್ನು ಹಾಕಲು ಅವಕಾಶ ಕೊಟ್ಟರೆ ಮುಂದೆ ಎದುರಾಗುವ ತೊಂದರೆ ಹಾಗೂ ಅನಾಹುತಗಳಿಗೆ ನೀವೇ ಜವಾಬ್ದಾರರು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ADVERTISEMENT

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್‌ ನಾವಡ, ‘ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಕೆಲವು ಹಿಂದೂ ಕಾರ್ಯಕರ್ತರು ಮನವಿ ನೀಡಿದ್ದಾರೆ. ಆದರೆ, ಸರ್ಕಾರದ ನೀತಿ ನಿಯಮಗಳು ಹಾಗೂ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕಿರುವುದರಿಂದ ಜಾತ್ಯತೀತ ರಾಷ್ಟ್ರದಲ್ಲಿ ಮತ ಬೇಧ ಮಾಡುವಂತಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸುಗ್ಗಿ ಮಾರಿ ಪೂಜೆಯಲ್ಲಿ ನಿರ್ಧಿಷ್ಟ ಸಮುದಾಯದವರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂಬ ನಿಯಮವಿಲ್ಲ. ಯಾವುದೇ ಸಮಯದಾದವರು ವ್ಯಾಪಾರ ಮಾಡಬಹುದು. ವ್ಯಾಪಾರಿಗಳಿಂದ ಶುಚಿತ್ವ ಶುಲ್ಕ ಮಾತ್ರ ಪಡೆದು ಅನುಮತಿ ನೀಡಲಾಗುತ್ತಿದೆ. ಈ ವರ್ಷವೂ ಅದೇ ಪದ್ಧತಿಯನ್ನು ಮುಂದುವರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಹಿಂದೂಗಳಿಗೆ ಮಾತ್ರ ಅನುಮತಿ:

ಸುಗ್ಗಿ ಮಾರಿ ಪೂಜೆಯಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಹಿಂದೂ ಸಂಘಟನೆಗಳು ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿವೆ. ಇಲಾಖೆಯ ಕಾಯ್ದೆಯ ಪ್ರಕಾರ ದೇವಸ್ಥಾನಕ್ಕೆ ಸೇರಿದ ಕಟ್ಟಡ ಹಾಗೂ ನಿವೇಶನಗಳನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ ಎಂಬ ನಿಯಮವಿದೆ. ಅದರಂತೆ ಸುಗ್ಗಿ ಮಾರಿ ಜಾತ್ರೆಯಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಅಂಗಡಿಗಳನ್ನು ವ್ಯಾಪಾರಕ್ಕೆ ನೀಡಲು ದೇವಸ್ಥಾನದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.