ADVERTISEMENT

ದಾಳಿಗಳಿಗೆ ಜಗ್ಗದೆ ಉಳಿದ ಹಿಂದೂ ಧರ್ಮ: ಡಾ.ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 13:37 IST
Last Updated 29 ಜನವರಿ 2023, 13:37 IST
ಮಣಿಪಾಲದ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್ ಮತ್ತು ಮೃತ್ತಿಕಾಪೂಜೆ ಧಾರ್ಮಿಕ ಸಭೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿದರು.
ಮಣಿಪಾಲದ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್ ಮತ್ತು ಮೃತ್ತಿಕಾಪೂಜೆ ಧಾರ್ಮಿಕ ಸಭೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿದರು.   

ಉಡುಪಿ: ಮೊಘಲರ, ಕ್ರೈಸ್ತರ ದಾಳಿಯ ನಡುವೆಯೂ ಹಿಂದೂ ಧರ್ಮ ಹಾಗೂ ಅಸ್ಮಿತೆ ಉಳಿದು ಕೊಂಡಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಭಾನುವಾರ ಮಣಿಪಾಲದ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್ ಮತ್ತು ಮೃತ್ತಿಕಾಪೂಜೆ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿ, ಧರ್ಮ, ಜಾತಿ, ಪ್ರಾಂತ್ಯಗಳಿಂದ ಒಡೆದು ಹೋಗಿರುವ ಹಿಂದೂ ಸಮಾಜ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದರು.

ಪ್ರಪಂಚದ ಹಿತ ಬಯಸುವ ಜಗತ್ತಿನ ಏಕೈಕ ಧರ್ಮ ಹಿಂದೂ ಧರ್ಮವಾಗಿದ್ದು, ಪ್ರತಿಯೊಬ್ಬರಿಗೂ ಜೀವನದ ದರ್ಶನ ಮಾಡಿಸುತ್ತಿದೆ. ತಾಯಿಯನ್ನು ಆರಾಧಿಸುವ ಏಕೈಕ ಹಿಂದೂ ದೇಶವನ್ನು ಜೀವನ ಪದ್ಧತಿಯನ್ನು ಹಾಳುಗೆಡವಲು ಕೆಲವರು ಯತ್ನಿಸುತ್ತಿದ್ದು ಮೂಡನಂಬಿಕೆಯ ಬಣ್ಣ ಕೊಡುತ್ತಿದ್ದಾರೆ ಎಂದರು.

ADVERTISEMENT

ಹಿಂದೂ ಧರ್ಮ ಜಾತ್ಯತೀತತೆಗೆ ವಿರುದ್ಧವಾಗಿ ಎಂದು ಬಿಂಬಿಸಲು ಕೆಲವರು ಹೊರಟಿದ್ದು ಇಂತಹ ವ್ಯರ್ಥ ಪ್ರಯತ್ನಗಳು ಫಲ ಕೊಡುವುದಿಲ್ಲ ಎಂದರು.

ಶೃಂಗೇರಿ ಮಠದ ಉಡುಪಿ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ ಶಾಸ್ತ್ರಿ ಮಾತನಾಡಿ, ವೇದ ಪುರಾಣಗಳಲ್ಲಿ ಶಿವನ ಆರಾಧನೆಯ ಬಗ್ಗೆ ಉಲ್ಲೇಖ ಇದೆ. ಸಕಲ ಕಷ್ಟಗಳಿಗೂ ಶಿವನ ಸ್ಮರಣೆ ಪರಿಹಾರವಾಗಬಲ್ಲದು ಎಂದರು.

ರಾಜ್ಯ ಹಾಗೂ ನೆರೆ ರಾಜ್ಯಗಳ 120 ಮಂದಿ ಋತ್ವಿಜರು ಫೆ.22ರಿಂದ ಮಾ. 5ರವರೆಗೆ ನಡೆಯುವ 12 ದಿನಗಳ ಕಾಲ ರುದ್ರಮಂತ್ರ ಪಠಣದೊಂದಿಗೆ ರುದ್ರ ಹೋಮ ನಡೆಸಲಿದ್ದಾರೆ. ಶೃಂಗೇರಿ ಮಠದ ವಿಧುಶೇಖರ ಭಾರತಿ ಸ್ವಾಮೀಜಿ ಯಾಗ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಾಲಕೃಷ್ಣ ಭಂಡಾರಿ, ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಆರ್.ಎಸ್.ಎಸ್ ಜಿಲ್ಲಾ ಸಂಘ ಚಾಲಕ ಡಾ.ನಾರಾಯಣ ಶೆಣೈ, ಮಾಜಿ ವಿಧಾನ ಪರಿಷತ್ ಸದಸ್ಯ ದಯಾನಂದ ರೆಡ್ಡಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಡಾ.ಕೃಷ್ಣಪ್ರಸಾದ್, ಪರ್ವತ್ ಶೆಟ್ಟಿ, ನಿರ್ಮಿತಿ ಕೇಂದ್ರದ ಅರುಣ್ ಕುಮಾರ್, ನಗರಸಭಾ ಸದಸ್ಯೆ ವಿಜಯಲಕ್ಷ್ಮಿ, ಕಲ್ಪನಾ ಸುಧಾಮ ಇದ್ದರು.

ದೇವಸ್ಥಾನದ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿದರು. ಬಾಲಕೃಷ್ಣ ಮುದ್ದೋಡಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.