ADVERTISEMENT

ಆಧುನಿಕತೆಗೆ ಪ್ರಾಚ್ಯ ಅವಶೇಷಗಳು ಬಲಿ

ಐತಿಹಾಸಿಕ ಪರಂಪರೆ ಉಳಿಸಿ ಅಭಿಯಾನದಲ್ಲಿ ಸಂಶೋಧಕ ಸುಭಾಷ್‌ ನಾಯಕ್

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 6:10 IST
Last Updated 3 ನವೆಂಬರ್ 2022, 6:10 IST
ಎರ್ಮಾಳಿನ ಅದಮಾರಿನಲ್ಲಿ ನಡೆದ ಐತಿಹಾಸಿಕ ಪರಂಪರೆ ಉಳಿಸಿ ಜನಜಾಗೃತಿ ಅಭಿಯಾನವನ್ನು ಉದಯ ಶೆಟ್ಟಿ ಉದ್ಘಾಟಿಸಿದರು
ಎರ್ಮಾಳಿನ ಅದಮಾರಿನಲ್ಲಿ ನಡೆದ ಐತಿಹಾಸಿಕ ಪರಂಪರೆ ಉಳಿಸಿ ಜನಜಾಗೃತಿ ಅಭಿಯಾನವನ್ನು ಉದಯ ಶೆಟ್ಟಿ ಉದ್ಘಾಟಿಸಿದರು   

ಪಡುಬಿದ್ರಿ: ‘ಇತಿಹಾಸದ ಸ್ಮಾರಕಗಳು ಮೂರು ವಿಧಗಳಾಗಿದ್ದು, ಪ್ರಾಚ್ಯ, ಐತಿಹಾಸಿಕ ಅವಶೇಷಗಳು ಮತ್ತು ಕಲಾತ್ಮಕ ವಸ್ತುಗಳಾಗಿವೆ. ಮಾನವನ ಆಧುನಿಕತೆಗೆ ಪ್ರಾಚ್ಯ ಅವಶೇಷಗಳೆಲ್ಲ ಬಲಿಯಾಗುತ್ತಿವೆ’ ಎಂದು ಪುರಾತತ್ವ ಸಂಶೋಧಕ ಸುಭಾಷ್‌ ನಾಯಕ್ ಬಂಟಕಲ್ಲು ವಿಷಾದ ವ್ಯಕ್ತಪಡಿಸಿದರು.

ಅದಮಾರು ಆದರ್ಶ ಸಂಘಗಳ ಒಕ್ಕೂಟ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಅದಮಾರು ಸರ್ವೋದಯ ಸಭಾಭವನದಲ್ಲಿ ಈಚೆಗೆ ಆಯೋಜಿಸಿದ್ದ ಐತಿಹಾಸಿಕ ಪರಂಪರೆ ಉಳಿಸಿ ಜನಜಾಗೃತಿ ಅಭಿಯಾನದಲ್ಲಿ ಅವರು ಉಪನ್ಯಾಸ ನೀಡಿದರು.

ತುಳು ಭಾಷೆಯಲ್ಲಿ 11ರಿಂದ 15ನೇ ಶತಮಾನದವರೆಗಿನ ಶಾಸನಗಳು ದಾಖಲೀಕರಣ ವೇಳೆ ಪತ್ತೆಯಾಗಿವೆ. ಆಧುನಿಕ ತಂತ್ರಜ್ಞಾನ ಬಳಸಿ ತುಳು ಶಾಸನಗಳನ್ನು ಅಕಾಡೆಮಿ ಅಥವಾ ವಿಶ್ವವಿದ್ಯಾಲಯದಲ್ಲಿ ಸಂಗ್ರಹಿಸಿ ರಕ್ಷಿಸುವ ಕಾರ್ಯ ನಡೆಯಬೇಕು. ನಾಣ್ಯ, ಮಹಾಕಾವ್ಯಗಳು ಇರುವ ತಾಳೆಗರಿಗಳ ರಕ್ಷಣೆಯೂ ಆಗಬೇಕಿದೆ ಎಂದು ಸಲಹೆ ನೀಡಿದರು.

ADVERTISEMENT

ದೇವಾಲಯಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವವನ್ನು ವಿಜೃಂಭಣೆಯಿಂದ ಮಾಡುವ ನಾವು ಅಲ್ಲಿನ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಗಮನಹರಿಸದಿರುವುದು ಖೇದಕರ. ದೇವಾಲಯದಲ್ಲಿರುವ ಶಿಲಾಶಾಸನಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ದೇವಾಲಯಗಳಲ್ಲಿರುವ ಶಾಸನಗಳ ಅಧ್ಯಯನಕ್ಕೆ ಪುರಾತತ್ವ ಸಂಶೋಧಕರಿಗೆ ಅನುಮತಿಪತ್ರ ಪಡೆಯಬೇಕೆನ್ನುವ ನೆಪದಲ್ಲಿ ಅಡ್ಡಿಯಾದರೆ, ಅನುಮತಿ ಪಡೆದು ತಿಂಗಳ ಬಳಿಕ ಅಲ್ಲಿಗೆ ತೆರಳಿದರೆ ಶಾಸನಗಳನ್ನೇ ಎಸೆದಿರುವ ಪ್ರಸಂಗಗಳು ನಡೆದಿವೆ. ಇತಿಹಾಸದ ರಕ್ಷಣೆ ಕೇವಲ ಸರ್ಕಾರ, ಪುರಾತ್ವ ಇಲಾಖೆಯದ್ದಲ್ಲ, ಸಾರ್ವಜನಿಕರು, ನಾಗರಿಕರು ಹಾಗೂ ಇತಿಹಾಸಕಾರರ ಜವಾಬ್ದಾರಿಯೂ ಆಗಿದೆ ಎಂದರು.

ಉದಯ ಕೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅದಮಾರು ಪೂರ್ಣಪ್ರಜ್ಞ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ರಾಮಕೃಷ್ಣ ಪೈ ದಂಪತಿಯನ್ನು ನಿವೃತ್ತ ಪ್ರಾಂಶುಪಾಲೆ ಬಿ.ಆರ್. ನಾಗರತ್ನಾ ರಾವ್ ಗೌರವಿಸಿದರು. ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಕೆ. ಶೆಟ್ಟಿ ಎರ್ಮಾಳು ನೈಮಾಡಿ ಇದ್ದರು. ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ಯಾಮಲಾ ರಾವ್ ಅಭಿನಂದನಾ ಭಾಷಣ ಮಾಡಿದರು. ಆದರ್ಶ ಯುವಕ ಸಂಘ ಅಧ್ಯಕ್ಷ ಸಂತೋಷ್ ಜೆ ಶೆಟ್ಟಿ ಸ್ವಾಗತಿಸಿದರು. ಗಣೇಶ್ ಸಾಲಿಯಾನ್ ನಿರೂಪಿಸಿದರು. ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಲತಾ ಎಸ್ ಆಚಾರ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.