ADVERTISEMENT

ಕಡಲತೀರ ಸ್ವಚ್ಛಗೊಳಿಸಿದ ಬಳಿಕ ಮಧುಚಂದ್ರ

ಬೈಂದೂರಿನ ಅನುದೀಪ್ ಹೆಗಡೆ ಹಾಗೂ ಮಿನುಷಾ ದಂಪತಿಯ ಪರಿಸರ ಪ್ರೇಮ

ಬಾಲಚಂದ್ರ ಎಚ್.
Published 7 ಡಿಸೆಂಬರ್ 2020, 1:00 IST
Last Updated 7 ಡಿಸೆಂಬರ್ 2020, 1:00 IST
ಅನುದೀಪ್ ಹಾಗೂ ಮಿನುಷಾ ಕಾಂಚನ್‌ ದಂಪತಿ
ಅನುದೀಪ್ ಹಾಗೂ ಮಿನುಷಾ ಕಾಂಚನ್‌ ದಂಪತಿ   

ಉಡುಪಿ: ಮದುವೆಯಾದ ಬಳಿಕ ನವ ದಂಪತಿ ಮಧುಚಂದ್ರದ ಯೋಜನೆ ರೂಪಿಸುವುದು ಸಾಮಾನ್ಯ. ಆದರೆ, ಬೈಂದೂರು ತಾಲ್ಲೂಕಿನ ಅನುದೀಪ್‌ ಹೆಗಡೆ ಹಾಗೂ ಮಿನುಷಾ ಕಾಂಚನ್ ದಂಪತಿ ಮಾತ್ರ ಹುಟ್ಟೂರಿನ ಕಡಲತೀರ ಸ್ವಚ್ಛಗೊಳಿಸಿಯೇ ಮಧುಚಂದ್ರಕ್ಕೆ ಹೋಗುವ ಪಣ ತೊಟ್ಟರು. ಸತತ 9 ದಿನಗಳ ಪರಿಶ್ರಮದ ಫಲವಾಗಿ ಸೋಮೇಶ್ವರ ಬೀಚ್‌ನ ಒಂದು ಭಾಗ ಕಸಮುಕ್ತವಾಗಿದೆ. ಸಂಕಲ್ಪ ಈಡೇರಿದ ನಂತರ ದಂಪತಿ ಮಧುಚಂದ್ರಕ್ಕೆ ಹೋಗುವ ತಯಾರಿ ನಡೆಸಿದ್ದಾರೆ.

ಡಿಜಿಟಲ್‌ ಮಾರ್ಕೆಂಟಿಂಗ್ ವೃತ್ತಿಯಲ್ಲಿರುವ ಅನುದೀಪ್‌ ಹಾಗೂ ಫಾರ್ಮಾಸಿಟಿಕಲ್‌ ಕಂಪನಿ ಉದ್ಯೋಗಿ ಮಿನುಷಾ ನ.18ರಂದು ಹಸೆಮಣೆ ಏರಿದ್ದರು. ಮದುವೆಯ ನೆನಪು ಬಹುಕಾಲ ಉಳಿಯಬೇಕು ಎಂದು ನಿರ್ಧರಿಸಿದ ದಂಪತಿ, ಸೋಮೇಶ್ವರ ಬೀಚ್‌ ಸ್ವಚ್ಛಗೊಳಿಸುವ ನಿರ್ಧಾರ ಮಾಡಿದರು. ಅದಕ್ಕಾಗಿ ಹನಿಮೂನ್ ಪ್ಲಾನ್ ಕೂಡ ಮುಂದೂಡಿದರು.

ನ.27ರಿಂದ ಪತಿ, ಪತ್ನಿ ಸೋಮೇಶ್ವರ ಬೀಚ್‌ನಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಲು ಆರಂಭಿಸಿದರು. ಪ್ರತಿದಿನ ಸಂಜೆ 2 ಗಂಟೆ ಶ್ರಮದಾನ ಮಾಡಿ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಮದ್ಯದ ಬಾಟಲಿ, ಚಪ್ಪಲಿ ಹೀಗೆ ಪರಿಸರಕ್ಕೆ ಮಾರಕವಾದ ವಸ್ತುಗಳನ್ನು ಹೆಕ್ಕಿದರು. 7 ದಿನಗಳ ಅವಧಿಯಲ್ಲಿ 500 ಕೆ.ಜಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದರು. ಕಳೆದ ಎರಡು ದಿನಗಳಿಂದ ಸ್ಥಳೀಯರು ಕೈಜೋಡಿಸಿದ್ದು, 700 ಮೀಟರ್‌ನಷ್ಟು ಕಡಲತೀರವನ್ನುಸ್ವಚ್ಛಗೊಳಿಸಿದ್ದು, 700 ರಿಂದ 800 ಕೆ.ಜಿ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದ್ದಾರೆ.

ADVERTISEMENT

‘ಇಬ್ಬರೇ ಆರಂಭಿಸಿದ ಸ್ವಚ್ಛತಾ ಅಭಿಯಾನ ಇದೀಗ ಹಲವರನ್ನು ಸೆಳೆದಿದೆ. ಹಸನ್‌ ಹಾಗೂ ಅವರ ತಂಡ, ಬೈಂದೂರಿನ ಮಂಜುನಾಥ ಶೆಟ್ಟಿ ಅಭಿಯಾನಕ್ಕೆ ಕೈಜೋಡಿಸಿದ್ದಾರೆ’ ಎಂದರು ಅನುದೀಪ್‌ ಹೆಗಡೆ.

***

ನಾವಿಬ್ಬರೂ ಆರಂಭಿಸಿದ ಈ ಕಾರ್ಯದಲ್ಲಿ ಹಲವರು ಭಾಗಿಯಾಗಿರುವುದು ಖುಷಿಯಾಗಿದೆ. ಮದುವೆಯಾದ ಸಂದರ್ಭ ಒಳ್ಳೆಯ ಕೆಲಸವೊಂದನ್ನು ಪೂರೈಸಿದ ತೃಪ್ತಿ ಇದೆ.

- ಅನುದೀಪ್‌ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.