ADVERTISEMENT

ಕೋಟ | ತಹಶೀಲ್ದಾರ್ ಪರಿಶೀಲನೆ; ಮರಳು ಸಂಗ್ರಹಕ್ಕೆ ತಡೆ

ವಡ್ಡರ್ಸೆ ನಾಗರಮಠದಲ್ಲಿ ಅಕ್ರಮ ಮರಳು ಸಂಗ್ರಹ ಘಟಕ; ಸ್ಥಳೀಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 14:47 IST
Last Updated 4 ಮಾರ್ಚ್ 2025, 14:47 IST
ಕಾವಡಿ ಸಮೀಪದ ನಾಗರಮಠದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಘಟಕದ ವಿರುದ್ಧ ಗ್ರಾಮಸ್ಥರು ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಬ್ರಹ್ಮಾವರ ತಹಶೀಲ್ದಾರ್‌ ಭೇಟಿ ನೀಡಿ, ಮರಳುಗಾರಿಕೆಗೆ ತಡೆಯೊಡ್ಡಿದರು
ಕಾವಡಿ ಸಮೀಪದ ನಾಗರಮಠದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಘಟಕದ ವಿರುದ್ಧ ಗ್ರಾಮಸ್ಥರು ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಬ್ರಹ್ಮಾವರ ತಹಶೀಲ್ದಾರ್‌ ಭೇಟಿ ನೀಡಿ, ಮರಳುಗಾರಿಕೆಗೆ ತಡೆಯೊಡ್ಡಿದರು   

ಕೋಟ (ಬ್ರಹ್ಮಾವರ): ಕಾವಡಿ ಸಮೀಪದ ನಾಗರಮಠದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಘಟಕ ತೆರೆಯಲು ಪ್ರಯತ್ನಿಸಲಾಗುತ್ತಿದೆ. ಇದನ್ನು ಸ್ಥಗಿತಗೊಳಿಸಬೇಕು ಎಂದು ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದರು.

ಕಾವಡಿಯ ದೊಡ್ಡ ಹೊಳೆಯನ್ನು ಮುಚ್ಚಿ ಮರಳು ಸಂಗ್ರಹ ಘಟಕ ಸ್ಥಾಪಿಸಲಾಗುತ್ತಿದ್ದು, ಇಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ನೆರೆ ಸಮಸ್ಯೆ ಉಂಟಾಗುತ್ತದೆ. ಘಟಕ ಆರಂಭವಾದರೆ ಇನ್ನಷ್ಟು ಸಮಸ್ಯೆ ಹೆಚ್ಚಲಿದೆ ಹಾಗೂ ಇಲ್ಲಿನ ಹೊಳೆಯಲ್ಲೇ ಮುಂದೆ ಅಕ್ರಮವಾಗಿ ಮರಳುಗಾರಿಕೆ ನಡೆಯಲಿದೆ. ಆದ್ದರಿಂದ ಯಾವುದೇ ಕಾರಣಕ್ಕೆ ಈ ಪ್ರಕ್ರಿಯೆಗೆ ಅನುಮತಿ ನೀಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಬ್ರಹ್ಮಾವರ ತಹಶೀಲ್ದಾರ್‌ ಶ್ರೀಕಾಂತ್‌ ಹೆಗ್ಡೆ, ‘ಕಾಮಗಾರಿ ನಡೆಯುತ್ತಿರುವ ಸ್ಥಳ ಖಾಸಗಿ ಜಾಗ ಎಂದು ಹೇಳುತ್ತಿದ್ದು, ಖಾಸಗಿ ಸ್ಥಳವಾದರೂ ಕೂಡ ಇದುವರೆಗೆ ಯಾವುದೇ ಪರವಾನಗಿ ನೀಡಿಲ್ಲ. ಮುಂದೆ ಖಾಸಗಿ ಸ್ಥಳ ಗುರುತಿಸಿ, ಕಾನೂನು ಪ್ರಕಾರ ಅನುಮತಿ ಪಡೆದು ನಡೆಸಬಹುದು. ಅಲ್ಲಿಯವರೆಗೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ’ ಎಂದು ತಿಳಿಸಿದರು.

ADVERTISEMENT

ಗಣಿ ಅಧಿಕಾರಿ ಅಶ್ವಿನಿ ಅವರು, ‘ಕಾಮಗಾರಿಗೆ ಗ್ರಾಮಸ್ಥರ ಆಕ್ಷೇಪವಿರುವ ಕುರಿತು ಹಾಗೂ ಮುಂದೆ ಮರಳುಗಾರಿಕೆ ಚಟುವಟಿಕೆಗೆ ಅವಕಾಶ ನೀಡಬಾರದು ಎನ್ನುವ ಗ್ರಾಮಸ್ಥರ ಆಗ್ರಹವನ್ನು ಮೇಲಧಿಕಾರಿಗಳಿಗೆ ತಿಳಿಸಲಾಗುವುದು’ ಎಂದರು.

ಕೋಟ ಠಾಣೆಯ ಸಬ್‌ ಇನ್‌ಸ್ಪೆಪೆಕ್ಟರ್‌ ರಾಘವೇಂದ್ರ ಮತ್ತು ಕ್ರೈಂ ವಿಭಾಗದ ಸುಧಾ ಪ್ರಭು, ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್‌ ನಡೆಸಿದ್ದರು.

ವಡ್ಡರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ ಕಾಂಚನ್, ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಸಾಮಾಜಿಕ ಹೋರಾಟಗಾರ ನಾಗರಾಜ ಗಾಣಿಗ ಸಾಲಿಗ್ರಾಮ, ಪಂಚಾಯಿತಿ ಸದಸ್ಯ ಪ್ರವೀಣ, ಚಂದ್ರ ಮರಕಾಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.