
ಶಿರ್ವ: ಸಾಗರ ಕವಚ ಬಂದೋಬಸ್ತ್ ಕರ್ತವ್ಯದ ವೇಳೆ ಕಟಪಾಡಿ ಸಮೀಪದ ಮಟ್ಟು ಕ್ರಾಸ್ ಬಳಿಯ ತಪಾಸಣಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾಪು ಠಾಣೆ ಸಿಬ್ಬಂದಿ ಅರುಣ ಯು. ಮತ್ತು ಗುಡುಸಾಬ್, ಮಟ್ಟು ಕ್ರಾಸ್ ಬಳಿ ಕರ್ತವ್ಯದಲ್ಲಿದ್ದಾಗ ಸಚಿನ್ ಲಮಾಣಿ ಎಂಬಾತ ಕಟಪಾಡಿ ಕಡೆಯಿಂದ ಮಟ್ಟು ಪಡುಕೆರೆ ಕಡೆಗೆ ವಾಹನದಲ್ಲಿ ಒಂದು ಯುನಿಟ್ ಮರಳನ್ನು ತುಂಬಿಸಿಕೊಂಡು ಬರುತ್ತಿರುವುದು ಕಂಡಿದೆ. ವಾಹನ ತಡೆದು ನಿಲ್ಲಿಸಿ ವಿಚಾರಿಸಿದಾಗ, ಅಲೆವೂರು ಗ್ರಾಮದ ಹೊಳೆಯಿಂದ ಮರಳು ತೆಗೆದು ಸಾಗಿಸುತ್ತಿರುವುದಾಗಿ ಆತ ಮಾಹಿತಿ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಲೆವೂರು ಸೇತುವೆ ಸಮೀಪದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ದೂರುಗಳು ಇವೆ. ಈ ಬಗ್ಗೆ ಗಣಿ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಕರಣದಲ್ಲಿ ವಾಹನ ಸಮೇತ ₹5 ಸಾವಿರ ಬೆಲೆಬಾಳುವ ಮರಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಕಾಪು ಕಡೆಯಿಂದ ಕೋತಲಕಟ್ಟೆ ಕಡೆಗೆ ದ್ಯಾವಯ್ಯ ಕೆ.ಟಿ. ಎಂಬಾತ ಮಲ್ಲಾರು ನಿವಾಸಿ ಹಮ್ಜಾ ಎಂಬುವರಿಗೆ ಸೇರಿದ ವಾಹನದಲ್ಲಿ ಒಂದು ಯುನಿಟ್ ಮರಳನ್ನು ತುಂಬಿಸಿಕೊಂಡು ಬರುತ್ತಿರುವಾಗ ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.