ADVERTISEMENT

ಗೂಡ್ಸ್ ವಾಹನದಲ್ಲಿ ಪ್ರಯಾಣ: ಬೀಳಲಿ ಕಡಿವಾಣ

ನಿರ್ಲಕ್ಷ್ಯದಿಂದ ಅಪಘಾತ: ಕಾರ್ಮಿಕರ ಸುರಕ್ಷತೆಗೆ ಬೇಕಿದೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:37 IST
Last Updated 18 ಜನವರಿ 2026, 6:37 IST
ಸುರೇಶ್ ಕಲ್ಲಾಗರ
ಸುರೇಶ್ ಕಲ್ಲಾಗರ   

ಉಡುಪಿ: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸದ ಸ್ಥಳಗಳಿಗೆ ಕಾರ್ಮಿಕರನ್ನು ಸರಕು ಸಾಗಿಸುವ ಟೆಂಪೊ, ಲಾರಿಗಳಲ್ಲಿ ಕರೆದುಕೊಂಡು ಹೋಗುತ್ತಿರುವುದು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಕಾಪು ಬಳಿ ಈಚೆಗೆ ನಡೆದ ಗೂಡ್ಸ್‌ ಟೆಂಪೊ ಅಪಘಾತದಲ್ಲಿ ಉತ್ತರ ಭಾರತದ ಐವರು ಕಾರ್ಮಿಕರು ಮೃತಪಟ್ಟಿದ್ದರು. ಅಲಂಕಾರದ ವಸ್ತುಗಳನ್ನು ಸಾಗಿಸುತ್ತಿದ್ದ ಗೂಡ್ಸ್‌ ಟೆಂಪೊದಲ್ಲಿ ಈ ಕಾರ್ಮಿಕರು ಸಂಚರಿಸುತ್ತಿದ್ದರು.

ಕಲ್ಲಿನ ಕೋರೆ, ಕಟ್ಟಡ ನಿರ್ಮಾಣ ಕಾಮಗಾರಿ, ಕೂಲಿ ಕೆಲಸಗಳಿಗೆ ಕಾರ್ಮಿಕರನ್ನು ಗೂಡ್ಸ್ ವಾಹನಗಳಲ್ಲಿ ಕರೆದೊಯ್ಯಲಾಗುತ್ತಿದೆ. ಇಂತಹ ವಾಹನಗಳ ಅತಿ ವೇಗ ಕೂಡ ಕಾರ್ಮಿಕರ ಪ್ರಾಣಕ್ಕೆ ಎರವಾಗುತ್ತಿದೆ. ಹೆಚ್ಚಾಗಿ ಉತ್ತರ ಭಾರತದ, ಉತ್ತರ ಕರ್ನಾಟಕದ ಕಾರ್ಮಿಕರನ್ನು ಈ ರೀತಿಯಲ್ಲಿ ಕರೆದೊಯ್ಯಲಾಗುತ್ತಿದೆ.

ADVERTISEMENT

ಕಾರ್ಮಿಕರ ಸುರಕ್ಷತೆಯನ್ನು ಲೆಕ್ಕಿಸದೆ ಗೂಡ್ಸ್‌ ವಾಹನಗಳಲ್ಲಿ ಕರೆದೊಯ್ಯುತ್ತಿರುವ ಬಗ್ಗೆ ದೂರುಗಳು ಬಂದಾಗ ಪೊಲೀಸರು ಕ್ರಮ ಕೈಗೊಂಡರೂ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಕೆಲವು ಗೂಡ್ಸ್‌ ವಾಹನಗಳಲ್ಲಿ ಸಾಮಗ್ರಿಯನ್ನು ತುಂಬಿಸಿಕೊಂಡು ಅದರೊಂದಿಗೆ ಕಾರ್ಮಿಕರನ್ನೂ ಕೂರಿಸಲಾಗುತ್ತಿದೆ. ಕೆಲವರು ಮಿತಿ ಮೀರಿ ಕಾರ್ಮಿಕರನ್ನು ತುಂಬಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ಮಲ್ಪೆ ಬಂದರಿನಲ್ಲಿ ನೂರಾರು ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇಲ್ಲಿಗೆ ಬರುವ ಕೆಲವು ಗೂಡ್ಸ್‌ ವಾಹನಗಳಲ್ಲಿ, ಮೀನು ಸಾಗಿಸುವ ಲಾರಿಗಳಲ್ಲಿ ಕಾರ್ಮಿಕರನ್ನೂ ಕರೆದೊಯ್ಯುತ್ತಿರುವುದು ಕಂಡುಬರುತ್ತಿದೆ. ಕಲ್ಲಿನ ಕ್ವಾರಿಗಳಿಗೂ ಕಾರ್ಮಿಕರನ್ನು ಲಾರಿಗಳಲ್ಲಿ ಕರೆಯೊಯ್ಯಲಾಗುತ್ತಿದೆ ಎಂಬ ದೂರುಗಳೂ ಕೇಳಿ ಬಂದಿವೆ.

ಮನೆ ಸೇರಿದಂತೆ ಕಟ್ಟಡಗಳ ನಿರ್ಮಾಣದ ವೇಳೆ ಕಾಂಕ್ರಿಟ್‌ ಕಾಮಗಾರಿಗೆ ಅತಿ ಹೆಚ್ಚು ಮಂದಿ ಕಾರ್ಮಿಕರ ಅಗತ್ಯ ಇರುತ್ತದೆ. ನಗರದಲ್ಲಿ ಇಂತಹ ಕೆಲಸಗಳನ್ನು ಹೆಚ್ಚಾಗಿ ವಲಸೆ ಕಾರ್ಮಿಕರೇ ನಿರ್ವಹಿಸುತ್ತಾರೆ. ಈ ಕಾರ್ಮಿಕರನ್ನು ಹೆಚ್ಚಾಗಿ ಗೂಡ್ಸ್‌ ವಾಹನಗಳಲ್ಲಿ ಕರೆದೊಯ್ಯುವುದನ್ನು ಕಾಣಬಹುದಾಗಿದೆ.

ಕೆಲವು ಲಾರಿಗಳಲ್ಲಿ ಸಿಮೆಂಟ್‌ ಮಿಕ್ಸಿಂಗ್‌ ಯಂತ್ರವನ್ನು ತುಂಬಿಸಿ, ಅದರೊಂದಿಗೆ ಕಾರ್ಮಿಕರನ್ನೂ ಕರೆಯೊಯ್ಯಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿಯಾಗಿದೆ. ಕಾರ್ಕಳದಲ್ಲಿ ಗೂಡ್ಸ್‌ ವಾಹನವೊಂದರಲ್ಲಿ ಸೆಂಟ್ರಿಂಗ್‌ ಮೆಷಿನ್‌ಗಳೊಂದಿಗೆ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ದೃಶ್ಯವಿದ್ದ ವಿಡಿಯೊ ಈಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಬಳಿಕ ಪೊಲೀಸರು ಆ ವಾಹನದ ಮಾಲೀಕರಿಗೆ ದಂಡ ವಿಧಿಸಿದ್ದರು.

ಕೆಲವೆಡೆ ಕಾರ್ಮಿಕರನ್ನು ಗೂಡ್ಸ್‌ ವಾಹನಗಳಲ್ಲಿ ಅತಿಯಾಗಿ ತುಂಬಿಕೊಂಡು, ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. ಕಾರ್ಮಿಕರನ್ನು ಕರೆದೊಯ್ಯುವ ಗುತ್ತಿಗೆದಾರರು, ಏಜೆಂಟರು ಅವರ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕು. ಈ ಕುರಿತು ಕಾರ್ಮಿಕ ಇಲಖೆಯ ಅಧಿಕಾರಿಗಳೂ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಹರಿರಾಮ್‌ ಶಂಕರ್‌
ಕಾಪುವಿನಲ್ಲಿ ಐವರು ಕಾರ್ಮಿಕರ ಸಾವಿಗೆ ಕಾರಣವಾಗಿದ್ದ ಗೂಡ್ಸ್‌ ಟೆಂಪೊ ಅಪಘಾತ
ಕಾರ್ಕಳ ವ್ಯಾಪ್ತಿಯಲ್ಲಿ ಈಚೆಗೆ ಕಾರ್ಮಿಕರನ್ನು ಅಪಾಯಕಾರಿ ರೀತಿಯಲ್ಲಿ ಕರೆದೊಯ್ದಿರುವುದು

ಅಪಾಯಕಾರಿ ಸ್ಥಿತಿಯಲ್ಲಿ ಕರೆದೊಯ್ದರೆ ಕ್ರಮ

’ ‘ಗೂಡ್ಸ್‌ ಟೊಂಪೊಗಳಲ್ಲಿ ಕಾರ್ಮಿಕರನ್ನು ಅಪಾಯಕಾರಿ ಸ್ಥಿತಿಯಲ್ಲಿ ಕರೆದೊಯ್ಯುವುದು ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಕಾರ್ಕಳ ಮಲ್ಪೆ ಪಡುಬಿದ್ರಿ ಮೊದಲಾದೆಡೆ ಕಾರ್ಮಿಕರನ್ನು ಟೆಂಪೊಗಳಲ್ಲಿ ಕರೆದೊಯ್ಯುತ್ತಿರುವುದು ಗಮನಕ್ಕೆ ಬಂದಿದ್ದು ಈ ಪ್ರದೇಶಗಳಲ್ಲಿ ಪೊಲೀಸರು ಈಚೆಗೆ ವಾಹನಗಳ ತಪಾಸಣೆ ನಡೆಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್ ಶಂಕರ್‌ ತಿಳಿಸಿದರು.

ವಲಸೆ ಕಾರ್ಮಿಕರೇ ಬಲಿ

ಗೂಡ್ಸ್ ಟೆಂಪೊ ಲಾರಿ ಅಪಘಾತಗಳಲ್ಲಿ ಹೆಚ್ಚಾಗಿ ವಲಸೆ ಕಾರ್ಮಿಕರೇ ಬಲಿಯಾಗುತ್ತಿದ್ದಾರೆ. ಕಟ್ಟಡ ಕಾಮಗಾರಿ ಕೃಷಿ ಕೆಲಸ ಸೇರಿದಂತೆ ವಿವಿಧ ಕೆಲಸಗಳಿಗೆ ಜಿಲ್ಲೆಯಲ್ಲಿ ಈಚೆಗೆ ವಲಸೆ ಕಾರ್ಮಿಕರನ್ನೇ ಬಳಸಿಕೊಳ್ಳುತ್ತಿದ್ದು ಇಂತಹ ಕಾರ್ಮಿಕರ ಸುರಕ್ಷತೆಗೆ ಗಮನ ನೀಡಲಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಪಶ್ಚಿಮ ಬಂಗಾಳ ಬಿಹಾರ ಉತ್ತರ ಪ್ರದೇಶ ಮೊದಲಾದ ಉತ್ತರ ಭಾರತದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಕೆಲಸ ಅರಸಿ ಬರುತ್ತಿದ್ದಾರೆ. ಇಂತಹ ಕಾರ್ಮಿಕರನ್ನು ಕೆಲಸದ ಸ್ಥಳಗಳಿಗೆ ಸರಕು ಸಾಗಣೆ ವಾಹನಗಳಲ್ಲಿ ಕರೆದೊಯ್ಯಲಾಗುತ್ತಿದೆ.

- ‘ಕೊಲೆ ಪ್ರಕರಣ ದಾಖಲಿಸಿ’

‘ಉಡುಪಿ ಜಿಲ್ಲೆಗೆ ಉದ್ಯೋಗ ಅರಸಿ ಬರುವ ಕಾರ್ಮಿಕರನ್ನು ಕೆಲಸದ ಸ್ಥಳಕ್ಕೆ ನಿಯೋಜಿಸುವ ಮಾಲಕರು ಸರಕು ಸಾಗಾಣೆ ವಾಹನಗಳಲ್ಲಿ ಅಕ್ರಮವಾಗಿ ಕಾನೂನು ಬಾಹಿರವಾಗಿ ಸಾಗಿಸುತ್ತಿದ್ದಾರೆ. ಇದರಿಂದಾಗಿ ನಿರಂತರ ಅಮೂಲ್ಯ ಜೀವಗಳು ಸಾವು– ನೋವಿಗೆ ತುತ್ತಾಗುತ್ತಿರುವುದು ಖಂಡನೀಯ‘ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು. ‘ಈಚೆಗೆ ಕಾಪುವಿನಲ್ಲಿ ನಡೆದ ಅಪಘಾತದಲ್ಲಿ 5 ಮಂದಿ ಕಾರ್ಮಿಕರು ಮೃತಪಟ್ಟಿದ್ದು ಬೈಂದೂರು ಪಡುವರಿಯ ಉಪ್ಪುಂದದಲ್ಲಿ ಕಾರ್ಮಿಕರೊಬ್ಬರು ಸರಕು ವಾಹನದ ಹಿಂಬದಿಯಲ್ಲಿ ಕುಳಿತು ಸಾಗುತ್ತಿದ್ದಾಗ ಚಾಲಕ ಬ್ರೇಕ್ ಹಾಕಿದಾಗ ಪರಿಣಾಮ ರಸ್ತೆಗೆ ಬಿದ್ದು ಮೃತರಾಗಿದ್ದರು. ಜಿಲ್ಲೆಯಲ್ಲಿ ಅಲ್ಲಲ್ಲಿ ಇಂತಹ ಪ್ರಕರಣಗಳು ನಿರಂತರ ನಡೆಯುತ್ತಿವೆ. ಈ ರೀತಿ ದುರ್ಘಟನೆಗಳು ನಡೆದಾಗ ವಾಹನದ ಚಾಲಕರ ಅಥವಾ ಗುತ್ತಿಗೆದಾರರ ಮೇಲೆ ಕೊಲೆ ಪ್ರಕರಣ ದಾಖಲಿಸದೇ ಕೇವಲ ದಂಡಕ್ಕೆ ಸೀಮಿತಗೊಳಿಸಿರುವುದರಿಂದ ಇವುಗಳು ಹೆಚ್ಚಾಗಲು ಕಾರಣವಾಗುತ್ತಿದ್ದು ವಾಹನ ಚಾಲಕರು ಯಾವುದೇ ಭಯವಿಲ್ಲದೇ ಇಂತಹ ಅಕ್ರಮ ಸಾಗಾಟದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ತಿಳಿಸಿದರು. ‘ಇಂತಹ ಪ್ರಕರಣಗಳನ್ನು ತಡೆಯಲು ಜಿಲ್ಲಾಡಳಿತ ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಪ್ರತಿಯೊಬ್ಬ ಗುತ್ತಿಗೆದಾರನೂ ಕಾರ್ಮಿಕರನ್ನು ಸಾಗಿಸಲು ಸರಕು ವಾಹನದ ಬದಲಾಗಿ ಪ್ಯಾಸೆಂಜರ್ ವಾಹನಗಳನ್ನು ಬಳಸಲು ಕಟ್ಟುನಿಟ್ಟಿನ ಲಿಖಿತ ಆದೇಶ ಹೊರಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.