ADVERTISEMENT

ಮೀನುಗಾರರಿಗೆ ಸೀಮೆಎಣ್ಣೆ ಪ್ರಮಾಣ ಹೆಚ್ಚಳ: ಕೆ.ಗೋಪಾಲಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 14:31 IST
Last Updated 29 ಫೆಬ್ರುವರಿ 2020, 14:31 IST
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಗೋಪಾಲಯ್ಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಗೋಪಾಲಯ್ಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.   

ಉಡುಪಿ: ಕರಾವಳಿಯಲ್ಲಿ ನಾಡದೋಣಿ ಮೀನುಗಾರರ ಸಂಕಷ್ಟಗಳಿಗೆ ಸ್ಪಂದಿಸಲು ಸರ್ಕಾರ ಬದ್ಧವಾಗಿದ್ದು, ಪ್ರಸ್ತುತ ಮೀನುಗಾರರಿಗೆ ನೀಡಲಾಗುತ್ತಿರುವ 210 ರಿಂದ 230 ಲೀಟರ್ ಸೀಮೆಎಣ್ಣೆ ಪ್ರಮಾಣವನ್ನು ಗರಿಷ್ಠ ಹೆಚ್ಚಿಸಲು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಮೀನುಗಾರರು ಕನಿಷ್ಠ 400 ಲೀಟರ್ ಸೀಮೆಎಣ್ಣೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸಿಎಂ ಹಾಗೂ ಮೀನುಗಾರಿಕಾ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಉಡುಪಿಯಲ್ಲಿ 4,300 ನಾಡದೋಣಿ ಮೀನುಗಾರರಿದ್ದು, ದೋಣಿಗಳ ಕಾರ್ಯನಿರ್ವಹಣೆಗೆ ಡೀಸೆಲ್‌ ಹಾಗೂ ಪೆಟ್ರೋಲ್ ಬಳಸುವುದು ದುಬಾರಿಯಾಗಲಿದ್ದು, ಸೀಮೆಎಣ್ಣೆ ಅಗತ್ಯವಾಗಿ ಬೇಕಿರುವ ವಿಚಾರ ತಿಳಿದಿದೆ. ಮೀನುಗಾರರ ಸಮಸ್ಯೆ ಪರಿಹರಿಸಲು ಸರ್ಕಾರ ಸಿದ್ಧವಿದೆ ಎಂದರು.

ಪಡಿತರ ಚೀಟಿಗಳ ಇ-ಕೆವೈಸಿ ಪ್ರಕ್ರಿಯೆಗಳಿಗೆ ಸರ್ವರ್ ಸಮಸ್ಯೆಯಿಂದ ತೊಡಕುಂಟಾಗಿದ್ದು, ಇಲ್ಲಿಯವರೆಗೆ 3,52,154 ಸದಸ್ಯರ ಇ-ಕೆವೈಸಿ ಸಂಗ್ರಹಣೆಯಾಗಿದ್ದು, ಶೇ 44 ಪ್ರಗತಿ ದಾಖಲಾಗಿದೆ. 2 ತಿಂಗಳಲ್ಲಿ ಶೇ100ರಷ್ಟು ನೋಂದಣಿಗೆ ಕ್ರಮ ಜರುಗಿಸಲಾಗುವುದು ಎಂದರು.

ADVERTISEMENT

7,98,735 ಕುಟುಂಬಗಳ ಸದಸ್ಯರಿಗೆ ಬಯೋಮೆಟ್ರಿಕ್ ಮೂಲಕ ಆಹಾರ ವಿತರಣೆ ನಡೆಯುತ್ತಿದೆ. ಜಿಲ್ಲೆಯಲ್ಲಿ 292 ನ್ಯಾಯಬೆಲೆ ಅಂಗಡಿಗಳು, 3 ಟಿಎಪಿಸಿಎಂಎಸ್ ಸಗಟು ಮಳಿಗೆಗಳು, 24 ಎಲ್‌ಪಿಜಿ ವಿತರಕರು ಮತ್ತು 97 ಪೆಟ್ರೋಲ್ ಬಂಕ್‌ಗಳಿವೆ.

292 ನ್ಯಾಯಬೆಲೆ ಅಂಗಡಿಗಳಲ್ಲಿ 291 ಅಂಗಡಿಗಳನ್ನು ಪಿಒಎಸ್ ಆಗಿ ಪರಿವರ್ತಿಸಲಾಗಿದೆ. ಬಯೋಮೆಟ್ರಿಕ್ ನೀಡಲು ಸಾಧ್ಯವಾಗದ 1,327 ಅಂಗವಿಕಲರು, ಅಶಕ್ತರು ಮತ್ತು ವಯೋವೃದ್ದರನ್ನು ಗುರುತಿಸಿ ಬಯೋಮೆಟ್ರಿಕ್ ವಿನಾಯತಿ ನೀಡಿ ಪಡಿತರ ಚೀಟಿ ವಿತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಪ್ರತಿ ತಿಂಗಳೂ ಜಿಲ್ಲೆಯಲ್ಲಿ 5,492 ಮೆಟ್ರಿಕ್ ಟನ್ ಅಕ್ಕಿ ಹಂಚಿಕೆಯಾಗುತ್ತಿದ್ದು, ಎನ್‌ಎಫ್‌ಎಸ್‌ಎ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 20 ಕಲ್ಯಾಣ ಸಂಸ್ಥೆಗಳಲ್ಲಿರುವ 36,000 ಫಲಾನುಭವಿಗಳಿಗೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ಮತ್ತು 5 ಕೆ.ಜಿ ಗೋಧಿಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಅನಿಲ ಭಾಗ್ಯ ಯೋಜನೆಯಡಿ 1,106 ಗುರಿ ನಿಗದಿಪಡಿಸಲಾಗಿದ್ದು, ಶೇ 100 ಗುರಿ ಸಾಧಿಸಲಾಗಿದೆ. 1,874 ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ಎಪಿಎಲ್‌ಗಳಾಗಿ ಪರಿವರ್ತಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ.ಮಂಜುನಾಥ್ ಸಭೆಗೆ ತಿಳಿಸಿದರು.

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‍ಗಳಿಗೆ ಕಲಬೆರಕೆ ಮಾಡುವ ವ್ಯವಸ್ಥಿತ ಜಾಲ ಸಕ್ರಿಯವಾಗಿದ್ದು, ಜಿಲ್ಲೆಯಲ್ಲಿ ಇಂತಹ ಘಟನೆಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಕಲಬೆರಕೆ ತಪಾಸಣೆ ನಡೆಸಲು ಪ್ರತ್ಯೇಕ ಲ್ಯಾಬ್ ಮತ್ತು ಕಿಟ್‍ನ ಅಗತ್ಯವಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇಲಾಖೆಗೆ ಅಗತ್ಯವಿರುವ ಲ್ಯಾಬ್ ಮತ್ತು ಕಿಟ್ ಒದಗಿಸುವ ಬಗ್ಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಉಡುಪಿಯಲ್ಲಿ 25 ಆಹಾರ ನಿರೀಕ್ಷಕರ ಹುದ್ದೆ ಮಂಜೂರಾಗಿದ್ದು, 7 ಮಾತ್ರ ಭರ್ತಿಯಾಗಿದೆ. 6 ಮಂದಿ ಆಹಾರ ಶಿರಸ್ತೇದಾರರನ್ನು ಕಂದಾಯ ಇಲಾಖೆಯಿಂದ ನೇಮಿಸಲಾಗಿದೆ. ಜಿಲ್ಲೆಯ ಎಲ್ಲಾ ಅಂಗಡಿಗಳಲ್ಲಿ ತೂಕ, ಮಾಪನ ಸಾಧನಗಳು ಹಾಗೂ ಆಟೋರಿಕ್ಷಾ ಮೀಟರ್‌ಗಳನ್ನು ತಪಾಸಣೆ ನಡೆಸಿ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.