ADVERTISEMENT

ಮುಂದಿನ ಪೀಳಿಗೆಯವರಲ್ಲಿ ರಾಷ್ಟ್ರಭಕ್ತಿ ಮೂಡಿಸಿ: ಸಚಿವೆ ಶೋಭಾ ಕರಂದ್ಲಾಜೆ

ಜಿಲ್ಲಾ ಯುವ ಮೋರ್ಚಾದ ವತಿಯಿಂದ ತಿರಂಗ ಯಾತ್ರೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 3:09 IST
Last Updated 14 ಆಗಸ್ಟ್ 2022, 3:09 IST
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕಾರ್ಕಳದ ಸ್ವರಾಜ ಮೈದಾನದಿಂದ ಗಾಂಧಿ ಮೈದಾನ ತನಕ ಶನಿವಾರ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ 75 ಮೀ. ಉದ್ದದ ಬೃಹತ್ ತಿರಂಗ ಯಾತ್ರೆ ನಡೆಯಿತು
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕಾರ್ಕಳದ ಸ್ವರಾಜ ಮೈದಾನದಿಂದ ಗಾಂಧಿ ಮೈದಾನ ತನಕ ಶನಿವಾರ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ 75 ಮೀ. ಉದ್ದದ ಬೃಹತ್ ತಿರಂಗ ಯಾತ್ರೆ ನಡೆಯಿತು   

ಕಾರ್ಕಳ: ‘ಮುಂದಿನ ಪೀಳಿಗೆಯವರಲ್ಲಿ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ಮೂಡಿಸುವತ್ತ ನಾವು ಗಮನ ಹರಿಸಬೇಕು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ ಇಲ್ಲಿನ ಸ್ವರಾಜ ಮೈದಾನದಿಂದ ಗಾಂಧಿ ಮೈದಾನ ತನಕ ಶನಿವಾರ ಆಯೋಜಿಸಲಾದ 75 ಮೀ ಉದ್ದದ ತಿರಂಗ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದ ಪ್ರತಿಯೊಬ್ಬ ನಾಗರಿಕನಲ್ಲಿಯೂ ತ್ರಿವರ್ಣ ಧ್ವಜದ ಬಗ್ಗೆ ಗೌರವ ಹುಟ್ಟಬೇಕು ಎಂಬ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ. ತ್ರಿವರ್ಣ ಧ್ವಜ ನಮ್ಮ ಸ್ವಾಭಿಮಾನದ ದ್ಯೋತಕ. ಸ್ವಾತಂತ್ರ್ಯಕ್ಕಾಗಿ ದುಡಿದ ಹಾಗೂ ತ್ಯಾಗ, ಬಲಿದಾನದ ಮೂಲಕ ಮಡಿದ ಪ್ರತಿಯೊಬ್ಬರನ್ನು ಸ್ಮರಿಸಿಕೊಳ್ಳಲು ಇದು ಸಕಾಲ. ರಾಷ್ಟ್ರಧ್ವಜಕ್ಕೆ ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲ. ನಮ್ಮನ್ನು ಇಂದಿಗೂ ಪ್ರಾಣ ಪಣಕಿಟ್ಟು ನಮ್ಮನ್ನು ಕಾಯುತ್ತಿರುವ ಯೋಧರನ್ನು ನಾವು ಸ್ಮರಿಸಿಕೊಳ್ಳಬೇಕು’ ಎಂದರು.

ADVERTISEMENT

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಮಂಡಳಿ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ್ ಕಾಮತ್, ಎಂ.ಕೆ. ವಿಜಯ ಕುಮಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಕೆ. ಉದಯ ಕುಮಾರ್ ಶೆಟ್ಟಿ, ಕುತ್ಯಾರು ನವೀನ್ ಮೊದಲಾದವರು ಇದ್ದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ಸ್ವಾಗತಿಸಿದರು. ಸುಹಾಸ್ ಶೆಟ್ಟಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.