ಉಡುಪಿ: ಜನರು ಆ ಪಕ್ಷ, ಈ ಪಕ್ಷ ಅಧಿಕಾರದಲ್ಲಿದೆ ಎಂದು ನೋಡಬಾರದು. ಪಕ್ಷ ನೋಡದೆ ನಿಮ್ಮ ಹಕ್ಕುಗಳನ್ನು ಧೈರ್ಯವಾಗಿ ಕೇಳಿ ಎಂದು ಹೋರಾಟಗಾರ ಪಿ.ವಿ.ಭಂಡಾರಿ ಹೇಳಿದರು.
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಇಂದ್ರಾಳಿ ಸೇತುವೆ ಹೋರಾಟ ಸಮಿತಿ ವತಿಯಿಂದ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಇಲ್ಲಿನ ಜನರಿಗೆ ಯಾವುದೂ ಬೇಕಿಲ್ಲ. ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ಯಾವುದಾದರೂ ಭಾವನಾತ್ಮಕ ವಿಚಾರಗಳನ್ನು ಮುಂದೆ ತರುತ್ತವೆ. ಆಗ ಅವರಿಗೆ ಮತ ಹಾಕುತ್ತಾರೆ ಎಂದರು.
ರಾಜಕಾರಣಿಗಳು ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ. ಜನರ ಮತವನ್ನು ಪಡೆದು ಜನರನ್ನೇ ಮೂರ್ಖರನ್ನಾಗಿಸುತ್ತಿದ್ದಾರೆ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ತಪ್ಪು ಮಾಡಿದಾಗ ಎದ್ದು ಬಂದು ಹೋರಾಟ ಮಾಡಿದರೆ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಹೇಳಿದರು.
ಸಂಸದರು ನೀಡಿರುವ ಗಡುವು ಮುಗಿದಾಗ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಮತ್ತೆ ಹೋರಾಟ ಮಾಡಿ, ಚುನಾಯಿತ ಪ್ರತಿನಿಧಿಗಳಿಗೆ ನೈತಿಕತೆ ಇದ್ದರೆ ಅದಷ್ಟು ಶೀಘ್ರ ಕಾಮಗಾರಿಯನ್ನು ಮುಗಿಸಬೇಕು ಎಂದರು.
ಕಾಂಗ್ರೆಸ್ ನಾಯಕಿ ಲಾವಣ್ಯ ಬಳ್ಳಾಲ್ ಮಾತನಾಡಿ, ನಾವು ತೆರಿಗೆ ಕಟ್ಟುತ್ತಿದ್ದೇವೆ. ಆಸ್ಪತ್ರೆ, ಶಿಕ್ಷಣ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವುದು ಸರ್ಕಾರಗಳ ಜವಾಬ್ದಾರಿ ಎಂದು ಪ್ರತಿಪಾದಿಸಿದರು.
ಇಲ್ಲಿನ ವಾರ್ಡ್ ಸದಸ್ಯರಿಂದ ಹಿಡಿದು ಕೇಂದ್ರದ ರೈಲ್ವೆ, ಹೆದ್ದಾರಿ ಸಚಿವರು ಬಿಜೆಪಿಯವರೇ ಆಗಿದ್ದಾರೆ. ಆದರೂ ಈ ಮೇಲ್ಸೇತುವೆ ಕಾಮಗಾರಿ ಯಾಕೆ ಹಿಂದೆ ಬಿದ್ದಿದೆ ಎಂದು ಪ್ರಶ್ನಿಸಿದರು.
ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ಈ ಕಾಮಗಾರಿಯಲ್ಲಿ ಕಮಿಷನ್ ದೊಡ್ಡ ಮಟ್ಟದಲ್ಲಿ ಆಟವಾಡಿದೆ ಎಂಬ ಸಂದೇಹ ಬರುತ್ತಿದೆ. ರೈಲ್ವೆ ಇಲಾಖೆ ಕೂಡ ಕೇಂದ್ರ ಸರ್ಕಾರದ್ದು, ಹೆದ್ದಾರಿ ಕೂಡ ಅದರದ್ದೇ ಅಧೀನದಲ್ಲಿ ಬರುತ್ತದೆ ಆದರೂ ಕಾಮಗಾರಿ ಕುಂಟುತ್ತಿದೆ. ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ’ ಎಂದರು.
ಇಂದ್ರಾಳಿ ರೈಲ್ವೆ ಮೇಲ್ಸೇತುವೆಯನ್ನು ಚತುಷ್ಪಥಗೊಳಿಸದೇ ಕಾಮಗಾರಿಯನ್ನು ಬಹುತೇಕ ಸ್ಥಗಿತಗೊಳಿಸಿ ವರ್ಷಗಳೇ ಸಂದಿವೆ. ರಸ್ತೆ ಅವ್ಯವಸ್ಥೆಯು ಸಾವು ನೋವಿಗೂ ಕಾರಣವಾಗಿವೆ. ದಿನನಿತ್ಯ ವಾಹನ ದಟ್ಟಣೆಯಿಂದ ಜನರು ಬಸವಳಿದಿದ್ದಾರೆ ಈ ಕಾರಣಕ್ಕೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪ್ರತಿಭಟನಕಾರರು ತಿಳಿಸಿದರು.
ಮೂರು ತಿಂಗಳೊಳಗೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು. ಬಳಿಕ ಕೆಲಕಾಲ ರಸ್ತೆ ತಡೆ ನಡೆಸಿದರು. ನಾಸಿಕ್ ಬ್ಯಾಂಡ್ ಹಾಗೂ ಚೆಂಡೆ ಮೇಳದವರು ಗಮನ ಸೆಳೆದರು.
ಅಮೃತ್ ಶೆಣೈ, ರಮೇಶ್ ಕಾಂಚನ್, ರಾಮಪ್ಪ ಸಾಲಿಯಾನ್, ಕೀರ್ತಿ ಶೆಟ್ಟಿ ಅಂಬಲಪಾಡಿ ಅನ್ಸರ್ ಅಹಮ್ಮದ್, ಫ್ರಾಂಕಿ ಡಿಸೋಜ, ಡಾ.ಶಶಿಕಿರಣ್ ಉಮಾಕಾಂತ್, ಗಣೇಶ ನೇರ್ಗಿ, ಗಣೇಶ್‌ರಾಜ್ ಸರಳಬೆಟ್ಟು ಇದ್ದರು.
ಪ್ರತಿಭಟನೆ ಹಾಸ್ಯಾಸ್ಪದ: ಕೋಟ
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರು ವರ್ಷಗಳಿಂದ ನಡೆಯುತ್ತಿದೆ. ಈಗ ಕಾಮಗಾರಿ ಚುರುಕುಗೊಂಡಿದೆ. ಕಾಮಗಾರಿ ಕೊನೆಯ ಹಂತಕ್ಕೆ ಬಂದಾಗ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿರುವುದು ಹಾಸ್ಯಾಸ್ಪದ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು ಜನವರಿ 15ರೊಳಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳು ಗುತ್ತಿಗೆದಾರರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ನಿಗದಿತ ಅವಧಿಯೊಳಗೆ ಮುಗಿಸುವ ಭರವಸೆ ಇದೆ. ನಾನು ಸಂಸದನಾದ ಬಳಿಕ ಪದೇ ಪದೇ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.