ಬೈಂದೂರು: ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ₹72 ಕೋಟಿ ವೆಚ್ಚದ ಗುಡೇದೇವಸ್ಥಾನ ಏತ ನೀರಾವರಿ ಯೋಜನೆಯ ಕಾಮಗಾರಿಯು ಸರ್ಕಾರದ ನಿಯಮದಂತೆ ನಡೆಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ರೈತ ಸಂಘದ ಕಂಬದಕೋಣೆ ವಲಯ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಆಗ್ರಹಿಸಿದರು.
ಗುಡೇದೇವಸ್ಥಾನ ಏತ ನೀರಾವರಿ ಯೋಜನೆಯನ್ನು ಹಳಗೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನಾನುಕೂಲವಾಗುವಂತೆ ಮಾರ್ಪಡಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಜಾಕ್‌ವೆಲ್ ಸ್ಥಳಾಂತರಿಸಿ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲ್ಲೂಕು ಕಚೇರಿ ಮುಂಭಾಗ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ನಡಾವಳಿಯಂತೆ ಜಾಕ್‌ವೆಲ್ ಬಿಂದುವನ್ನು ಹಳಗೇರಿ ಕಟ್ಟಿನ ಕೆಳಗಡೆ ಮಾಡಿ ನಕ್ಷೆ ಸಹಿತ ಯೋಜನೆ ಮತ್ತು ಅಂದಾಜು ಪಟ್ಟಿಗೆ ಸರ್ಕಾರ ಅನುಮತಿ ನೀಡಿದೆ. ಅದರ ಪ್ರಕಾರ ಟೆಂಡರ್ ಕರೆದು ಖಾಸಗಿ ಕಂಪನಿಗೆ ಗುತ್ತಿಗೆ ವಹಿಸಲಾಗಿದೆ. ನಂತರ ಸ್ಥಳೀಯ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಜಾಕ್‌ವೆಲ್ ಬಿಂದುವನ್ನು ಹಳಗೇರಿ ವೆಂಟೆಡ್ ಡ್ಯಾಮ್‌ನ ಒಳಗಡೆ ನಿರ್ಮಿಸಿ ಯೋಜನೆಯನ್ನು ಹಾಳುಗೆಡವಿ ರೈತರಿಗೆ ಸಂಕಷ್ಟವನ್ನು ತಂದೊಡ್ಡಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಎಂಜಿನಿಯರ್ ಅನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಬೇಕು. ಜಾಕ್‌ವೆಲ್ ಬಿಂದುವನ್ನು ಮೂಲ ಯೋಜನೆಯಂತೆ ಕಟ್ಟೆಯ ಕೆಳಗಡೆ ಮಾಡುವಂತೆ ಅವರು ಆಗ್ರಹಿಸಿದರು.
ಅವೈಜ್ಞಾನಿಕ ಕಾಮಗಾರಿಯಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಎರಡನೇ ಬೆಳೆಯಾದ ಶೇಂಗಾ, ಕಲ್ಲಂಗಡಿ ಮತ್ತು ಅಡಿಕೆ ತೋಟಗಳಿಗೆ ಹಾನಿಯಾಗುತ್ತದೆ. ಮಳೆಗಾಲದಲ್ಲಿ ಬರುವ ಪ್ರವಾಹದಿಂದ ನೀರು ಸಮುದ್ರಕ್ಕೆ ಹೋಗದೆ, ತಡೆಯುಂಟಾಗಿ ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿಯಾಗುವ ಆತಂಕ ಎದುರಾಗಿದೆ. ಕಟ್ಟೆಯ ಒಳಭಾಗದ ಹೊಳೆದಂಡೆಯನ್ನು ಎತ್ತರಿಸುವ ಯೋಜನೆಯ ಕಾಮಗಾರಿಯನ್ನು ಕೈ ಬಿಡಬೇಕು ಎಂದು ಗುಡೇಮಹಾಲಿಂಗೇಶ್ವರ ಸಂತ್ರಸ್ತ ರೈತರ ಒಕ್ಕೂಟದ ಸದಸ್ಯರು ಆಗ್ರಹಿಸಿದರು.
ಈ ಸಂಬಂಧ ಫೆ. 4ರಂದು ನಡೆದ ಇಲಾಖಾ ಮಾಹಿತಿ ಸಭೆಯಲ್ಲಿ ರೈತರ ಮೇಲೆ ನಡೆದ ಹಲ್ಲೆಗೆ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದ್ದು, ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಮೊದಲು ಬೈಂದೂರು ಸೇನೇಶ್ವರ ದೇವಸ್ಥಾನದಿಂದ ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆ ನಡೆಯಿತು. ಬಳಿಕ ತಹಶೀಲ್ದಾರ್ ಭೀಮಸೇನ ಕುಲಕರ್ಣಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಗುಡೇ ದೇವಸ್ಥಾನ ಏತ ನೀರಾವರಿ ಸಂತ್ರಸ್ತ ರೈತರ ಒಕ್ಕೂಟದ ಅಧ್ಯಕ್ಷೆ ಜಯಂತಿ ಎನ್.ಐತಾಳ ಹೇರಂಜಾಲು, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ರೈತ ಪ್ರತಿನಿಧಿ ಉದಯಕುಮಾರ್ ಶೆಟ್ಟಿ, ರಾಘವೇಂದ್ರ, ವೇದನಾಥ, ಕೃಷ್ಣ ಪೂಜಾರಿ, ಮಣಿರಾಜ್, ಕೃಷ್ಣ ಶುಕ್ರಾಸನಮನೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.