ADVERTISEMENT

ಕೃಷ್ಣನೂರಿನಲ್ಲಿ ಜನ್ಮಾಷ್ಟಮಿ ಸಂಭ್ರಮ

ಇಂದು ಮಧ್ಯರಾತ್ರಿ ಅರ್ಘ್ಯ ಪ್ರಧಾನ; ನಾಳೆ ಪಿಟ್ಲಪಿಂಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 19:46 IST
Last Updated 22 ಆಗಸ್ಟ್ 2019, 19:46 IST
ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಮೊಸರು ಕುಡಿಕೆ ಹೊಡೆಯಲು ನಿರ್ಮಿಸಿರುವ ಸಾಧನ
ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಮೊಸರು ಕುಡಿಕೆ ಹೊಡೆಯಲು ನಿರ್ಮಿಸಿರುವ ಸಾಧನ   

ಉಡುಪಿ: ಕಡೆಗೋಲು ಕೃಷ್ಣನೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಕಳೆಗಟ್ಟಿದೆ. ಅಷ್ಟಮಿಯ ವೈಭವವನ್ನು ಕಣ್ತುಂಬಿಕೊಳ್ಳಲು ಶ್ರೀಕೃಷ್ಣಮಠಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ.

ಆ.23 ಶ್ರೀಕೃಷ್ಣ ಜನ್ಮಾಷ್ಠಮಿ ಹಾಗೂ 24ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದೆ. 23ರಂದು ಮಧ್ಯರಾತ್ರಿ 12.12ಕ್ಕೆ ಚಂದ್ರೋದಯ ಕಾಲಕ್ಕೆ ಕೃಷ್ಣನಿಗೆ ಮಹಾಪೂಜೆ ನೆರವೇರಿದ ಬಳಿಕ ಅರ್ಘ್ಯಪ್ರಧಾನ ನಡೆಯಲಿದೆ.

24ರಂದು ವೈಭವದ ವಿಟ್ಲಪಿಂಡಿ ಉತ್ಸವ ನಡೆಯಲಿದ್ದು ಮಧ್ಯಾಹ್ನ 3ಕ್ಕೆ ರಥಬೀದಿಯಲ್ಲಿ ಕೃಷ್ಣನ ಲೀಲೋತ್ಸವಗಳನ್ನು ಭಕ್ತರು ಕಣ್ತುಂಬಿಕೊಳ್ಳಬಹುದು.

ADVERTISEMENT

ಮೃಣ್ಮಯ ಮೂರ್ತಿ ಸಿದ್ಧ

ವಿಟ್ಲಪಿಂಡಿ ಉತ್ಸವದಲ್ಲಿ ಚಿನ್ನದ ರಥದಲ್ಲಿ ಮೆರವಣಿಗೆ ಮಾಡಲಾಗುವ ಮೃಣ್ಮಯ ಮೂರ್ತಿಯನ್ನು ಸಿದ್ಧಗೊಳಿಸಲಾಗಿದೆ. ಮೆರವಣಿಗೆ ಬಳಿಕ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ.

ಮೊಸರು ಕುಡಿಕೆ ಪ್ರಮುಖ ಆಕರ್ಷಣೆ:

24 ರಂದು ರಥಬೀದಿಯಲ್ಲಿ ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆ ಪ್ರಮುಖ ಆಕರ್ಷಣೆಯಾಗಿರಲಿದ್ದು, ಮುಂಬೈನ ಆಲಾರೆ ಗೋವಿಂದ ತಂಡ ಪ್ರದರ್ಶನ ನೀಡಲಿದೆ. ಜತೆಗೆ, ಕನಕ ಮಂಟಪ, ಅಂಬಲಪಾಡಿ, ತ್ರಿವೇಣಿ ಸರ್ಕಲ್‌, ಕಿದಿಯೂರು ಹೋಟೆಲ್ ಸೇರಿದಂತೆ ಹಲವು ಕಡೆಗಳಲ್ಲಿ ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆಗಳು ನಡೆಯಲಿವೆ.

ಲಕ್ಷ ಉಂಡೆ ಚಕ್ಕುಲಿ ತಯಾರಿ

ಶ್ರೀಕೃಷ್ಣನಿಗೆ ಪ್ರಿಯವಾದ ಚಕ್ಕುಲಿ ಹಾಗೂ ಉಂಡೆಗಳ ತಯಾರಿ ನಡೆದಿದೆ. ತಲಾ ಒಂದು ಲಕ್ಷದಷ್ಟು ಚಕ್ಕುಲಿ, ಉಂಡೆಗಳನ್ನು ತಯಾರಿಸಿ, ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ.

ಮುದ್ದು ಕೃಷ್ಣರ ಸಂಭ್ರಮ:

ಕೃಷ್ಣ ಜನ್ಮಾಷ್ಟಮಿಯ ದಿನ ಮುದ್ದು ಕೃಷ್ಣ ವೇಷಧಾರಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಬಾರಿಯೂ ರಾಜಾಂಗಣದಲ್ಲಿ ಕೃಷ್ಣ ವೇಷ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಹಲವು ಸಂಘ ಸಂಸ್ಥೆಗಳೂ ಸ್ಪರ್ಧೆಗಳನ್ನು ನಡೆಸುತ್ತಿವೆ.

ಹುಲಿವೇಷ ಕುಣಿತ:

ಅಷ್ಟಮಿಯ ವಿಶೇಷತೆಗಳಲ್ಲೊಂದು ಹುಲಿ ಕುಣಿತ. ಮೈತುಂಬಾ ಹುಲಿಯ ಪಟ್ಟೆಯನ್ನು ಬಳಿದುಕೊಂಡು, ಚಂಡೆ ವಾದ್ಯಕ್ಕೆ ತಕ್ಕಂತೆ ನರ್ತಿಸುವುದನ್ನು ನೋಡುವುದೇ ಸಂಭ್ರಮ. ಮರಿ ಹುಲಿಗಳು, ಹೆಣ್ಣು ಹುಲಿಗಳು ಹೆಜ್ಜೆ ಹಾಕುವುದು ವಿಶೇಷ.

ವ್ಯಾಪಾರ ಜೋರು:

ರಥಬೀದಿಯಲ್ಲಿ ಹಬ್ಬದ ಸಂಭ್ರಮ ತುಂಬಿದ್ದು, ರಸ್ತೆ ಬದಿಯಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ಹಾಕಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.