
ಹೆಬ್ರಿ: ಎಳ್ಳಮಾವಾಸ್ಯೆಯ ಪ್ರಯುಕ್ತ ಪುಣ್ಯಕ್ಷೇತ್ರ ಜೋಮ್ಲು ಕ್ಷೇತ್ರದಲ್ಲಿ ಡಿ. 19ರಂದು ಜೋಮ್ಲು ತೀರ್ಥೋತ್ಸವ, ವಾರ್ಷಿಕ ಜಾತ್ರೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಹೆಬ್ರಿ ತಾಲ್ಲೂಕು ಚಾರ ಗ್ರಾಮದ ಕಳ್ತೂರು ಸಂತೆಕಟ್ಟೆ ಸಮೀಪದ ಪ್ರಸಿದ್ಧ ಪ್ರವಾಸಿ ತಾಣವಾದ ಬೊಬ್ಬರ್ಯ ದೇವಸ್ಥಾನದಲ್ಲಿ ಎಳ್ಳಮಾವಾಸ್ಯೆ ವಿಜೃಂಭಣೆಯಿಂದ ನಡೆಯಲಿದೆ.
ಶ್ರೀಕ್ಷೇತ್ರವು ಜೋಮ್ಲು ಬೊಬ್ಬರ್ಯ ದೇವರ ಅಭಿವೃದ್ಧಿ ಸಮಿತಿಯಿಂದ ನವೀಕೃತಗೊಂಡಿದ್ದು, ಸಾವಿರಾರು ಭಕ್ತ ಸಮೂಹವನ್ನು ತನ್ನತ್ತ ಸೆಳೆಯುತ್ತಿದೆ. ಕ್ಷೇತ್ರದಲ್ಲಿ ಪ್ರತಿವರ್ಷವೂ ಜೋಮ್ಲು ಬೊಬ್ಬರ್ಯ ದೇವರ ಅಭಿವೃದ್ಧಿ ಸಮಿತಿ ಮತ್ತು ಶ್ರೀವಿವೇಕಾನಂದ ಯುವವೇದಿಕೆ ಚಾರ ಹಂದಿಕಲ್ಲು ಸಹಕಾರದಲ್ಲಿ, ಹಲವು ಕಾರ್ಯಕ್ರಮಗಳು ನಿರಂತರವಾಗಿ ನಡೆಸುತ್ತಾ ಬಂದಿರುವುದರಿಂದ ಅಭಿವೃದ್ಧಿ ಹೊಂದುತ್ತಿದೆ. ಪರಿಸರದ ಸ್ವಚ್ಛತೆ, ರಕ್ಷಣೆ, ಪ್ರವಾಸಿ ತಾಣದ ಅಭಿವೃದ್ಧಿಯಲ್ಲಿ ಕೈಜೋಡಿಸುವ ಮೂಲಕ ಕ್ಷೇತ್ರ ಗುರುತಿಸಿಕೊಂಡಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಅರಣ್ಯ ಇಲಾಖೆಯವರ ನಿರ್ದೇಶನದಲ್ಲಿ, ವನ್ಯಜೀವಿ ಸಂರಕ್ಷಣೆ ಮುಂತಾದ ಇಲಾಖಾ ಸುರಕ್ಷಾ ಕ್ರಮಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.
ಹಿನ್ನೆಲೆ: ಜೋಮ್ಲು ಕ್ಷೇತ್ರವು ಜೋಮೇರು ಎನ್ನುವ ಋಷಿಯು ತಪಸ್ಸನ್ನಾಚರಿಸಿದ ಸ್ಥಳ. ತಪಸ್ಸಿನ ಕ್ಷೇತ್ರದಲ್ಲಿ ಪವಿತ್ರ ಸೀತಾನದಿ ಹರಿಯುತ್ತದೆ. ಇದೇ ಕಾರಣದಿಂದಾಗಿ ಈ ಕ್ಷೇತ್ರದಲ್ಲಿ ಪುಣ್ಯಕಾರ್ಯ ಸೇವೆ ತೀರ್ಥೋತ್ಸವ ಎಳ್ಳಮಾವಾಸ್ಯೆಯಂದು ನಡೆಯುತ್ತದೆ.
ಎಳ್ಳಮವಾಸ್ಯೆ ಸಂಭ್ರಮ: ಪ್ರತಿವರ್ಷ ಎಳ್ಳಮಾವಾಸ್ಯೆ ಜಾತ್ರೆ ವಿಜೃಂಭಣೆಯಿಂದ ಜರುಗುತ್ತದೆ. ವಿವಿಧ ಕಡೆಗಳಿಂದ ಬರುವ ಭಕ್ತರು ಮತ್ತು ಪ್ರವಾಸಿಗರು ಪವಿತ್ರ ಪುಣ್ಯನದಿ ಸೀತಾನದಿಯಲ್ಲಿ ತೀರ್ಥಸ್ನಾನ ಮಾಡಿ ಬೊಬ್ಬರ್ಯ ದೇವರಿಗೆ ಸೇವೆ ಸಲ್ಲಿಸುತ್ತಾರೆ.
ಈ ಹಿಂದೆ ಜಾತ್ರೆಯಂದು ಭಕ್ತರಿಗೆ ಅನ್ನದಾನ ನಡೆಸಲಾಗುತ್ತಿತ್ತು, ಕಾಲಕ್ರಮೇಣ ದಾನಿಗಳ ಕೊರತೆಯಿಂದಾಗಿ ಅದು ನಿಂತು ಹೋಯಿತು. ಆದರೆ, ಇತ್ತೀಚೆಗೆ ಕೆಲವು ವರ್ಷಗಳಿಂದ ನಿರಂತರವಾಗಿ ಜಾತ್ರೆಯಂದು ಶ್ರೀಕ್ಷೇತ್ರ ಜೋಮ್ಲು ಬೊಬ್ಬರ್ಯ ದೇವರ ಅಭಿವೃದ್ಧಿ ಸಮಿತಿ, ಶ್ರೀವಿವೇಕಾನಂದ ಯುವ ವೇದಿಕೆ ಚಾರ ಹಂದಿಕಲ್ಲು ಮತ್ತು ದಾನಿಗಳ ನೆರವಿನಿಂದ ಅನ್ನಸಂತರ್ಪಣೆಯ ಸೇವೆ ನಡೆಯುತ್ತಿದೆ.
ಡಿ. 18ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 12.30ರವರೆಗೆ ನವಕಪ್ರದಾನ ಹೋಮ, ಶುದ್ಧ ಕಲಶ, ಕೊಟ್ಟೆ ಕಡುಬು ಸೇವೆ, ಏಣಿ ಮುಹೂರ್ತ. ಡಿ. 19ನೇ ಶುಕ್ರವಾರ ಎಳ್ಳಮಾವಾಸ್ಯೆಯ ಪ್ರಯುಕ್ತ ತೀರ್ಥಸ್ನಾನ, ಮಹಾ ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ಜರುಗಲಿದೆ ಎಂದು ಶ್ರೀಕ್ಷೇತ್ರ ಜೋಮ್ಲು ಬೊಬ್ಬರ್ಯ ದೇವರ ಅಭಿವೃದ್ಧಿ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.