
ಉಡುಪಿ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯು ಕ್ರೀಡೆಯಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಅತ್ಯುತ್ತಮ ಕ್ರೀಡಾಪಟುಗಳನ್ನು ಈ ಜಿಲ್ಲೆಗಳು ನೀಡಿವೆ. ಈ ಪ್ರದೇಶದಲ್ಲಿ ದೇಸಿ ಕ್ರೀಡೆ ಕಬಡ್ಡಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅಗತ್ಯ ಇದೆ ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಜಂಟಿ ಆಶ್ರಯದಲ್ಲಿ ಅಜ್ಜರಕಾಡಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪದವಿಪೂರ್ವ ವಿದ್ಯಾರ್ಥಿಗಳ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರೀಡೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರ ಕ್ರೀಡಾ ಶಾಲೆಗಳನ್ನು ತೆರೆದಿದ್ದು ಈ ಭಾಗದ ಕ್ರೀಡಾಶಾಲೆಗಳಲ್ಲಿ ಕೆಲವು ಸೀಟುಗಳನ್ನು ಕಬಡ್ಡಿ ಆಟಗಾರರಿಗೆ ಮೀಸಲಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.
ಕ್ರೀಡಾ ಪ್ರಾಧಿಕಾರವು ಈಗಾಗಲೇ ಕಂಬಳ ಮತ್ತು ಮಲ್ಲಗಂಬಗಳಿಗೆ ಮಾನ್ಯತೆ ನೀಡಿದೆ. ಕಬಡ್ಡಿ ಆಟಗಾರರಿಗೂ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವಿದೆ ಎಂದು ಹೇಳಿದರು.
ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಲು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಗತ್ಯ. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಪ್ರಾಂಶುಪಾಲರ ಸಂಘವು ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡಲು ಇಂತಹ ಕ್ರೀಡಾಕೂಟ ಆಯೋಜನೆ ಮಾಡಿರುವುದು ಹೆಮ್ಮೆಯ ವಿಷಯ ಎಂದರು.
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯಲ್ಲಿ ಸುಸಜ್ಜಿತವಾದ ಕ್ರೀಡಾಂಗಣವಿದೆ. ಶಿಕ್ಷಣದಲ್ಲಿ ಉಡುಪಿ ಜಿಲ್ಲೆಯು ಮಾದರಿಯಾದಂತೆ ಕ್ರೀಡಾ ಕ್ಷೇತ್ರದಲ್ಲೂ ಮಾದರಿಯಾಗಬೇಕು ಎಂದರು.
ವಿದ್ಯಾರ್ಥಿಗಳು ಕ್ರೀಡಾಂಗಣದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು. ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ಉಡುಪಿಯಲ್ಲಿ ನಡೆಯಬೇಕು ಎಂದರು.
ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಷನ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಂಜುನಾಥ ಭಟ್ಟ, ಕಾರ್ಯದರ್ಶಿ ರಮೇಶ್ ಎಸ್. ಸಿ., ಕ್ರೀಡಾ ಸಂಚಾಲಕ ಸಂತೋಷ್, ಖಜಾಂಚಿ ಹರಿಪ್ರಸಾದ್, ದಿನೇಶ್ ಕುಮಾರ್ ಎ., ಜೀವನ್ ಕುಮಾರ್ ಶೆಟ್ಟಿ, ಸತೀಶ್ ಹೆಗ್ಡೆ, ಲೀಲಾಬಾಯಿ ಭಟ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಮಾರುತಿ ಸ್ವಾಗತಿಸಿದರು.
ನಮ್ಮ ದೇಶದಲ್ಲಿ ಬಲಿಷ್ಠವಾದ ಕಬಡ್ಡಿ ತಂಡ ಕಟ್ಟಬೇಕಿದೆ. ಈ ಭಾಗದ ವಿದ್ಯರ್ಥಿಗಳಿಗೆ ಪ್ರೋತ್ಸಾಹ ನೀಡಿ ಕಬಡ್ಡಿ ಆಟದತ್ತ ಅವರನ್ನು ಸೆಳೆದರೆ ಮುಂದೆ ಅವರಿಗೆ ಉದ್ಯೋಗಾವಕಾಶಗಳೂ ಲಭಿಸಲಿವೆಅರುಣ್ ಮಾಚಯ್ಯ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.