ADVERTISEMENT

ಕಡಿಯಾಳಿ ದೇವಸ್ಥಾನದಲ್ಲಿ ನವರಾತ್ರಿ ಸೊಬಗು

ಸೆ.26ರಿಂದ ಅ.5ರವರೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಸೆ.26ರಂದು ಶರ್ವಾಣಿ ಕಲ್ಯಾಣ ಮಂಟಪ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 16:08 IST
Last Updated 23 ಸೆಪ್ಟೆಂಬರ್ 2022, 16:08 IST
ಕಡಿಯಾಳಿ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆಯೋಜನೆ ಕುರಿತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಕಟ್ಟೆ ರವಿರಾಜ ಆಚಾರ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಡಿಯಾಳಿ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆಯೋಜನೆ ಕುರಿತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಕಟ್ಟೆ ರವಿರಾಜ ಆಚಾರ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   

ಉಡುಪಿ: ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಡಿಯಾಳಿ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ಈ ವರ್ಷ ವೈಭವಯುತವಾಗಿ ನವರಾತ್ರಿ ಉತ್ಸವ ಆಯೋಜಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಕಟ್ಟೆ ರವಿರಾಜ ಆಚಾರ್ಯ ತಿಳಿಸಿದರು.

ಶುಕ್ರವಾರ ದೇವಸ್ಥಾನದ ಶರ್ವಾಣಿ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.26ರಿಂದ ಅ.5ರವರೆಗೆ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಪ್ರತಿದಿನ ದೇವರಿಗೆ ಗಣಯಾಗ, ಚಂಡಿಕಾಯಾಗ, ಮಹಾಪೂಜೆ, ಹೂವಿನ ಪೂಜೆ, ನವರಾತ್ರಿ ಉತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸೆ.27ರಂದು ಬೆಳಿಗ್ಗೆ 7ಕ್ಕೆ ಕದಿರು ಕಟ್ಟಲಾಗುವುದು, 30ರಂದು ಲಲಿತಾ ಪಂಚಮಿ, ಅ.2ರಂದು ಶಾರದ ಪೂಜಾರಂಭ, ಅಂದು ಮಧ್ಯಾಹ್ನ ಬಲಿ ಪೂಜೆ, 3ರಂದು ದುರ್ಗಾಷ್ಟಮಿ ಅಂಗವಾಗಿ ಮಹಾ ಚಂಡಿಕಾ ಯೋಮ ನಡೆಯಲಿದೆ. 4ರಂದು ಕನ್ನಿಕಾ ಪೂಜೆ, ಮಹಾ ಮಂತ್ರಾಕ್ಷತೆ, 5ರಂದು ವಿಜಯ ದಶಮಿ ಹಾಗೂ ಶಾರದ ವಿಸರ್ಜನೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ ಎಂದರು.

ADVERTISEMENT

ನವರಾತ್ರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸೆ.26ರಂದು ಸಂಜೆ 4.30ರಿಂದ ಶಾಂಭವಿ ಭಜನಾ ಮಂಡಳಿಯಿಂದ ಭಜನೆ, ಡಾ.ಜನಾರ್ಧನ, ಮೇಘನಾ ಸಾಲಿಗ್ರಾಮ ಅವರ ದ್ವಂದ್ವ ಸ್ಯಾಕ್ಸೋಫೋನ್ ವಾದನ, ರಾತ್ರಿ 7ಕ್ಕೆ ದೊಡ್ಡಣಗುಡ್ಡೆ ಮಹಿಳಾ ಮಂಡಳಿಯಿಂದ ತುಳು ಹಾಸ್ಯ ನಾಟಕ ‘ಅಪ್ಪೆನ ಮೋಕೆ’ ಪ್ರದರ್ಶನವಾಗಲಿದೆ.

27ರಂದು ಸಂಜೆ 4.30ಕ್ಕೆ ನಾರಾಯಣಿ ಭಜನಾ ಮಂಡಳಿಯಿಂದ ಭಜನೆ, ಬಳಿಕ ದಕ್ಷಣ ಯಜ್ಞ ಯಕ್ಷಗಾನ ತಾಳಮದ್ದಳೆ ಪ್ರಸಂಗ, 28ರಂದು ಸಂಜೆ 4.30ಕ್ಕೆ ಕಾತ್ಯಾಯಿನಿ ಭಜನಾ ಮಂಡಳಿಯಿಂದ ಭಜನೆ, ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸಂಜೆ 6ಕ್ಕೆ ದುರ್ಗಾ ನೃತ್ಯ ಅಕಾಡೆಮಿಯಿಂದ ನೃತ್ಯ ವೈಭವ ನಡೆಯಲಿದೆ.

29ರಂದು ಸಂಜೆ ಪಾರ್ವತಿ ಭಜನಾ ಮಂಡಳಿಯಿಂದ ಭಜನೆ, ಬಳಿಕ ಕುಂಜಿಬೆಟ್ಟು ಮಹಿಳಾ ಮಂಡಳಿಯಿಂದ ಕುರು ಪ್ರಹಸನ, ಮಕ್ಕಳಿಂದ ನೃತ್ಯ, ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಹಿಳಾ ತಂಡದಿಂದ ನೃತ್ಯ ವೈಭವ, 30ರಂದು ಭೈರವಿ ಭಜನಾ ಮಂಡಳಿಯಿಂದ ಭಜನೆ, ಬಳಿಕ ವಾಣಿಶ್ರೀ ಕಾಸರಗೋಡು ಅವರಿಂದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ.

ಅ.1ರಂದು ಆದಿಶಕ್ತಿ ಭಜನಾ ಮಂಡಳಿಯಿಂದ ಭಜನೆ, ಬಳಿಕ ಶ್ರೀಯಕ್ಷ ಬಳಗದಿಂದ ‘ರುಕ್ಮಾವತಿ ಕಲ್ಯಾಣ’ ಯಕ್ಷಗಾನ, 2ರಂದು ಕೃಷ್ಣಗೀತಾ ಭಜನಾ ಮಂಡಳಿಯಿಂದ ಭಜನೆ, ನಂತರ ಸಾಕ್ಷಿತ್ ವಾರಂಬಳ್ಳಿ ಅವರಿಂದ ಮ್ಯಾಂಡೊಲಿನ್ ವಾದನ, ನಾಗರಾಜ್ ಶೇಟ್ ಬಳಗದಿಂದ ಭಕ್ತಿ ಸುಗಮ ಸಂಗೀತ, 3ರಂದು ಆಂಜನೇಯ ಭಜನಾ ಮಂಡಳಿಯಿಂದ ಭಜನೆ, ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾ ಮಂಡಳದಿಂದ ‘ಮಧ್ವಯಾನ ಗಾನ ನಮನ’, ಅಕ್ಷತಾ ದೇವಾಡಿಗ ಅವರ ಸ್ಯಾಕ್ಸೋಫೋನ್, 4ರಂದು ದುರ್ಗಾ ಭಜನಾ ಮಂಡಳಿಯಿಂದ ಭಜನೆ, ಬಳಿಕ ‘ಮೋಕೆದ ಮದಿಮಾಲ್’ ಹಾಸ್ಯ ತುಳು ನಾಟಕ ಪ್ರದರ್ಶನ ಇದೆ ಎಂದು ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ನೀಡಿದರು.

ಸೆ.26ರಂದು ಸಂಜೆ 5.30ಕ್ಕೆ ಸೋದೆ ಮಠಾಧೀಶರಾದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ₹ 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶರ್ವಾಣಿ ಕಲ್ಯಾಣ ಮಂಟಪ ಹಾಗೂ ಯಾಗಶಾಲೆಯನ್ನು ಉದ್ಘಾಟಿಸಲಿದ್ದಾರೆ. ನವರಾತ್ರಿ ಉತ್ಸವ ನಡೆಯುವ 9 ದಿನ ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಇದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ನಾಗರಾಜ ಶೆಟ್ಟಿ, ರಮೇಶ್ ಶೇರಿಗಾರ್, ಮಂಜುನಾಥ್ ಹೆಬ್ಬಾರ್, ಕಿಶೋರ್ ಸಾಲ್ಯಾನ್, ಗಣೇಶ್ ನಾಯಕ್, ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.