ಕಾಪು (ಪಡುಬಿದ್ರಿ): ಹಿಂದೂ-ಮುಸ್ಲಿಂ ಭಾವೈಕ್ಯತಾ ಕೇಂದ್ರವಾಗಿರುವ ಕಾಪುವಿನ ಕೈಪುಂಜಾಲುವಿನ ಸಮುದ್ರ ಕಿನಾರೆಯಲ್ಲಿರುವ ಸಯ್ಯಿದ್ ಅರಬಿ ವಲಿಯುಲ್ಲಾಹಿ೦ ಅವರ ದರ್ಗಾದಲ್ಲಿ ಸಫರ್ ಝಿಯಾರತ್ ಸಮಾರಂಭ ಬುಧವಾರ ಸಂಪನ್ನಗೊಂಡಿತು.
ಪೊಲಿಪು ಜಾಮಿಯಾ ಮಸೀದಿಯ ಅಧೀನದಲ್ಲಿರುವ ಈ ದರ್ಗಾವು ಮೊಗವೀರ ಸಮಾಜದ ಶ್ರೀಯಾನ್ ಕುಟುಂಬದ ಶೇಸಿ ಕರಿಯ ತಾಂಡೇಲರ ಜಾಗದಲ್ಲಿದೆ. ಪ್ರತಿ ವರ್ಷ ಇಸ್ಲಾಮಿಕ್ ಕ್ಯಾಲೆಂಡರ್‌ನ ಸಫರ್ ತಿಂಗಳ ಕೊನೆಯ ಬುಧವಾರ ಸಫರ್ ಝಿಯಾರತ್ ನಡೆಯುತ್ತದೆ.
ಸಿಹಿ ಗಂಜಿ (ಪಾಯಸ) ವಿಶೇಷ. ಸ್ಥಳೀಯ ಹಿಂದೂಗಳು ಕೂಡ ಗಂಜಿಗಾಗಿ ಹರಕೆ ಸಾಮಗ್ರಿಗಳು, ಬೆಲ್ಲ, ಅಕ್ಕಿ, ಮಂಡಕ್ಕಿ, ಮಲ್ಲಿಗೆ ಮತ್ತು ಖರ್ಜೂರ ನೀಡುತ್ತಾರೆ. ಇಲ್ಲಿಗೆ ಬರುವವರಿಗೆ ಸಿಹಿ ಗಂಜಿ, ಮಂಡಕ್ಕಿ, ಮಲ್ಲಿಗೆ, ಖರ್ಜೂರವನ್ನು ವಿತರಿಸಲಾಯಿತು.
‘ಇದೊಂದು ಹಿಂದೂ-ಮುಸ್ಲಿಂ ಸೌಹಾರ್ದದ ಕೇಂದ್ರ. ಇಲ್ಲಿ ಸುತ್ತಲೂ ಹಿಂದೂಗಳ ಮನೆ ಇದೆ. ವಾರ್ಷಿಕವಾಗಿ ನಡೆಯುವ ಝಿಯಾರತ್‌ಗೆ ಜಾತಿ, ಮತ, ಧರ್ಮ ಬೇಧವನ್ನು ಮರೆತು ಎಲ್ಲರೂ ಬರುತ್ತಾರೆ. ಇಲ್ಲಿನ ಮೀನುಗಾರರು ಮೀನುಗಾರಿಕೆ ಆರಂಭಿಸುವ ಮುನ್ನ ಸಮುದ್ರದಲ್ಲಿ ದರ್ಗಾದ ಎದುರು ಪ್ರದಕ್ಷಿಣೆ ಹಾಕಿ ಮೀನುಗಾರಿಕೆ ನಡೆಸುತ್ತಾರೆ’ ಎಂದು ದರ್ಗಾ ಇರುವ ಜಮೀನಿನ ಕುಟುಂಬಸ್ಥ ಗುಣವಂತ ಶ್ರೀಯಾನ್ ಹೇಳುತ್ತಾರೆ.
ನಾವು ಮುಂಬೈಯಲ್ಲಿ ವಾಸವಾಗಿದ್ದು ದರ್ಗಾದ ಸಫರ್ ಝಿಯಾರತ್ ಸಂದರ್ಭದಲ್ಲಿ ಪ್ರತಿವರ್ಷ ಊರಿಗೆ ಬರುತ್ತೇವೆ.ಗುಣವಂತ ಶ್ರೀಯಾನ್ ಸ್ಥಳೀಯ
ಪುರಾತನ ಇತಿಹಾಸ ಹೊಂದಿರುವ ಕೈಪುಂಜಾಲು ಸಯ್ಯಿದ್ ಅರಬಿ ವಲಿಯುಲ್ಲಾ ದರ್ಗಾದಲ್ಲಿ ಮೊಗವೀರ ಸಮುದಾಯದವರು ಪ್ರತಿದಿನ ದೀಪ ಹಚ್ಚುವುದು ಇಲ್ಲಿನ ವೈಶಿಷ್ಟ್ಯ. ಸಫರ್ ಝಿಯಾರತ್ ಅಂಗವಾಗಿ ಉಡುಪಿ ಮಂಗಳೂರು ವಿವಿಧೆಡೆಯ ಮುಸ್ಲಿಂ ಭಕ್ತರು ಸ್ಥಳೀಯ ಹಿಂದೂ ಮತ್ತು ಕ್ರೈಸ್ತ ಸಮಾಜದವರು ಜಾತಿ –ಮತ ಭೇದವಿಲ್ಲದೆ ಭಾಗವಹಿಸಿ ಹರಕೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.