
ಬ್ರಹ್ಮಾವರ: ‘ಪ್ರತಿಯೊಬ್ಬರೂ ನಮ್ಮನ್ನು ನಾವು ಪ್ರೀತಿಸಬೇಕು. ಆಗ ಮಾತ್ರ ನಾವು ಬೇರೆಯವರನ್ನೂ ಪ್ರೀತಿಸುತ್ತೇವೆ. ನಮ್ಮ ನಾಡು, ನಮ್ಮ ಹೆಮ್ಮೆಯ ಭಾಷೆ ಕನ್ನಡ, ನಮ್ಮ ರಾಜ್ಯ ಮತ್ತು ದೇಶ ಹೀಗೆ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು’ ಎಂದು ಸಾಹಿತಿ ಕೆ.ಜಿ.ಸೂರ್ಯನಾರಾಯಣ ಮಯ್ಯ ಹೇಳಿದರು.
ಸಾಲಿಗ್ರಾಮ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಕಡ ಗೆಳೆಯರ ಬಳಗದ ಸಹಯೋಗದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು, ಕನ್ನಡ ಧ್ವಜನಮನ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
ಭಾಷಾ ಅಭಿಮಾನ ಬೇಕು, ದುರಭಿಮಾನ ಒಳ್ಳೆಯದಲ್ಲ. ಮಕ್ಕಳೂ ಸೇರಿದಂತೆ ಎಲ್ಲರೂ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಕಲಿಯೋಕೆ ನೂರು ಭಾಷೆ ಆಡೋಕೆ ಒಂದೇ ಭಾಷೆ ಅದು ಕನ್ನಡವಾಗಿರಲಿ ಎಂದು ತಿಳಿಸಿದ ಅವರು, ಕನ್ನಡ ಭಾಷೆಗೆ ಉಪಭಾಷೆಗಳ ಕೊಡುಗೆ ಅಪಾರ ಎನ್ನುವ ವಿಚಾರವನ್ನು ವ್ಯಕ್ತಪಡಿಸಿದರು.
ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳ, ಉಪಾಧ್ಯಕ್ಷ ಕೆ.ಶಶಿಧರ ಮಯ್ಯ, ಶಾಲಾ ನಿವೃತ್ತ ಅಧ್ಯಾಪಕ ನಾರಾಯಣ ಆಚಾರ್ಯ, ಶಾಲಾ ಸಂಚಾಲಕ ಎನ್.ಪ್ರಭಾಕರ ಕಾಮತ್, ಎಸ್.ಡಿ.ಎಂ. ಸಿ. ಅಧ್ಯಕ್ಷ ಗುರುರಾಜ ಉಪಾಧ್ಯ, ಗೆಳೆಯರ ಬಳಗದ ಕಾರ್ಯಕಾರಿ ಮಂಡಳಿಯ ಕೆ. ತಮ್ಮಯ್ಯ, ಜಗದೀಶ ಆಚಾರ್ಯ, ರಘು ಭಂಡಾರಿ, ಶ್ರೀಪತಿ ಆಚಾರ್ಯ, ಶ್ರೀಕಾಂತ ಐತಾಳ, ರಾಘವೇಂದ್ರ ಇದ್ದರು.
ಕೆ. ತಾರಾನಾಧ ಹೊಳ್ಳ ಸ್ವಾಗತಿಸಿದರು. ಕಾರ್ಯದರ್ಶಿ ಕೆ. ನಾಗರಾಜ ಉಪಾಧ್ಯ ವಂದಿಸಿದರು. ಇದೇ ಸಂದರ್ಭ ಶಾಲಾ ಮಕ್ಕಳಿಗೆ ಲಿಖಿತ ರಸಪ್ರಶ್ನೆ ಏರ್ಪಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.