ADVERTISEMENT

‘ಕರಾವಳಿಯಲ್ಲಿ ಕನ್ನಡ ಕಂಪು ಹರಡುತ್ತಿರುವ ಸುಮಗಳು’

ಕಲೆ, ಸಾಹಿತ್ಯ, ರಂಗಭೂಮಿಯ ಮೂಲಕ ಕನ್ನಡ ಪ್ರೇಮ ಜಾಗೃತಗೊಳಿಸುವ ಯತ್ನ

ಬಾಲಚಂದ್ರ ಎಚ್.
Published 31 ಅಕ್ಟೋಬರ್ 2020, 19:30 IST
Last Updated 31 ಅಕ್ಟೋಬರ್ 2020, 19:30 IST
ಸಂಸ್ಕೃತಿ ವಿಶ್ವಪ್ರತಿಷ್ಠಾನ 
ಸಂಸ್ಕೃತಿ ವಿಶ್ವಪ್ರತಿಷ್ಠಾನ    

ಉಡುಪಿ: ಪರಭಾಷೆಗಳ ಅಬ್ಬರದ ನಡುವೆ ಕನ್ನಡವನ್ನು ಕಟ್ಟುವ, ಕನ್ನಡ ಪ್ರೇಮವನ್ನು ಜಾಗೃತಗೊಳಿಸುವ, ಮಾತೃಭಾಷೆಯನ್ನು ಉಳಿಸಿ, ಬೆಳೆಸುವ ಕಾಯಕ ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಕಲೆ, ಸಾಹಿತ್ಯ, ಶಿಕ್ಷಣ, ರಂಗಭೂಮಿ, ಹೀಗೆ, ಹಲವು ಮಾಧ್ಯಮಗಳ ಮೂಲಕ ಕನ್ನಡದ ಕಂಪನ್ನು ಪಸರಿಸಲಾಗುತ್ತಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಿಡಿದು ಹತ್ತಾರು ಸಂಘ–ಸಂಸ್ಥೆಗಳು ನಾಡು ನುಡಿಯ ಬೆಳವಣಿಗೆಗೆ ಶ್ರಮಿಸುತ್ತಿವೆ.‌

ಕನ್ನಡ ಮೋಹ ಹುಟ್ಟಿಸುತ್ತಿರುವ ಕಸಾಪ:ಕನ್ನಡ ಉಳಿಯಬೇಕಾದರೆ ಮುಖ್ಯವಾಗಿ ಮಕ್ಕಳಲ್ಲಿ ಕನ್ನಡದ ಮೋಹ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ‘ಶಾಲೆಯತ್ತ ಸಾಹಿತ್ಯ’ ಎಂಬ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಸಾಹಿತಿಗಳೇ ಖುದ್ದು ಶಾಲೆಗಳಿಗೆ ಹೋಗಿ, ತಾವು ರಚಿಸಿದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಕೊಟ್ಟು ಓದಿಸುವಂತಹ ಕಾರ್ಯಕ್ರಮ ಇದಾಗಿದ್ದು, ಮಕ್ಕಳಲ್ಲಿ ಕನ್ನಡ ಸಾಹಿತ್ಯ ಓದುವ ಆಸಕ್ತಿ ಹೆಚ್ಚಿಸಲಾಗುತ್ತಿದೆ.

ಕಸಾಪದಿಂದ ‘ಯುವಧ್ವನಿ’ ಸಂಕಲನ ಹೊರತರಲಾಗಿದ್ದು, ಇದರಲ್ಲಿ 50ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಕಥೆ, ಕವನಗಳನ್ನು ಬರೆದಿದ್ದಾರೆ. ಜಿಲ್ಲೆಯಲ್ಲಿ ಕೀರ್ತಿಶೇಷರಾದ 27 ಗಣ್ಯರ, ಸಾಹಿತಿಗಳ ‘ಕಿರು ಪುಸ್ತಕ’ಗಳನ್ನು ಮುದ್ರಿಸಿ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಹಂಚಲಾಗಿದೆ. ಜಿಲ್ಲೆಯ ಹಿರಿಯ ಸಾಧಕರ ಬಗ್ಗೆ ಮಕ್ಕಳು ಅರಿಯಬೇಕು ಎಂಬುದು ಈ ಕಾರ್ಯಕ್ರಮದ ಹಿಂದಿರುವ ಉದ್ದೇಶ.

ADVERTISEMENT

ಮಕ್ಕಳ ಸಾಹಿತ್ಯ ಸಮ್ಮೇಳನ:ಮಕ್ಕಳಲ್ಲಿ, ಕನ್ನಡ ಸಾಹಿತ್ಯದ ಬಗ್ಗೆ ಪ್ರೀತಿ ಮೊಳೆಯಬೇಕು ಎಂದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಮಕ್ಕಳ ಸಮ್ಮೇಳನ ಆಯೋಜಿಸುತ್ತಿದೆ ಕಸಾಪ. ಇಲ್ಲಿ ಮಕ್ಕಳೇ ಸಮ್ಮೇಳನಾಧ್ಯಕ್ಷರು, ಉದ್ಘಾಟಕರು, ಅತಿಥಿಗಳು, ವಿಚಾರ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳು. ಮೂರು ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ‘ನಾನು ಓದಿದ ಪುಸ್ತಕ’ ಎಂಬ ಗೋಷ್ಠಿಯಲ್ಲಿ ಜಿಲ್ಲೆಯ 47 ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದ್ದಾರೆ ಎನ್ನುತ್ತಾರೆ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಂದ್ರ ಅಡಿಗರು.

ಕನ್ನಡ ಮಾಧ್ಯಮದ ಮಕ್ಕಳ ಶಿಕ್ಷಣಕ್ಕೆ ನೆರವು:ನಾಲ್ಕೂವರೆ ದಶಕಗಳಿಂದ ಯಕ್ಷಗಾನ, ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆ ಕನ್ನಡ ಮಾಧ್ಯಮ ಉಳಿವಿಗೆ ವಿಭಿನ್ನ ಕಾರ್ಯಕ್ರಮ ನಡೆಸುತ್ತಿದೆ. ‘ವಿದ್ಯಾಪೋಷಕ್’ ಹೆಸರಿನಲ್ಲಿ ಎಸ್ಸೆಸ್ಸೆಲ್ಸಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ, ಶೇ 80ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುತ್ತಿದೆ. 15 ವರ್ಷಗಳಲ್ಲಿ 1,200 ವಿದ್ಯಾರ್ಥಿಗಳಿಗೆ ಕೋಟ್ಯಂತರ ರೂಪಾಯಿ ಧನ ಸಹಾಯ ನೀಡಲಾಗಿದೆ ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿ ಮುರಳಿ ಕಡೇಕಾರ್.

ಉಡುಪಿ ವಿಧಾನಸಭಾ ಕ್ಷೇತ್ರದ 46 ಪ್ರೌಢಶಾಲೆಗಳಲ್ಲಿ ಯಕ್ಷ ಶಿಕ್ಷಣದ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ. 12 ವರ್ಷಗಳಲ್ಲಿ 1,300 ವಿದ್ಯಾರ್ಥಿಗಳು ಯಕ್ಷಗಾನ ಕಲಿತಿದ್ದು, ಇವರಲ್ಲಿ ಶೇ 60ರಷ್ಟು ವಿದ್ಯಾರ್ಥಿನಿಯರು ಇದ್ದಾರೆ. ಯಕ್ಷಗಾನದ ಗಂಧ–ಗಾಳಿ ಗೊತ್ತಿಲ್ಲದ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಯಕ್ಷಗಾನ ಕಲಿತು ಹೆಜ್ಜೆ ಹಾಕುತ್ತಿರುವುದು ವಿಶೇಷ.

ಸಾಂಸ್ಕೃತಿಕ ನೀತಿ ಗಟ್ಟಿಗೊಳಿಸುವ ಯತ್ನ:ರಂಗಭೂಮಿ ಹಾಗೂ ಸಾಹಿತ್ಯದ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ 35 ವರ್ಷಗಳಿಂದ ಶ್ರಮಿಸುತ್ತಿದೆ ಉಡುಪಿಯ ‘ರಥಬೀದಿ ಗೆಳೆಯರು’ ಸಂಸ್ಥೆ. ಸಾಹಿತ್ಯ ಕ್ಷೇತ್ರದ ದಿಗ್ಗಜರಾದ ಯು.ಆರ್.ಅನಂತ ಮೂರ್ತಿ, ಗಿರೀಶ್ ಕಾರ್ನಾಡ್‌ ಅವರನ್ನು ಕರೆಸಿ ರಾಷ್ಟ್ರಮಟ್ಟದ ವಿಚಾರಗೋಷ್ಠಿಗಳನ್ನು ಆಯೋಜಿಸಿ ಕರಾವಳಿಯಲ್ಲಿ ಕನ್ನಡದ ಪ್ರೀತಿ ಹೆಚ್ಚಾಗುವಂತೆ ಮಾಡಿದೆ.

ಮುಖ್ಯವಾಗಿ ಸಾಂಸ್ಕೃತಿಕ ನೀತಿಯ ಕುರಿತು ವಿಚಾರಗೋಷ್ಠಿಗಳನ್ನು ಆಯೋಜಿಸಿದೆ. ರಂಗಾಯಣ, ನೀನಾಸಂ, ಹೆಗ್ಗೋಡು ಸೇರಿದಂತೆ ನಾಡಿನ ಹೆಸರಾಂತ ತಂಡಗಳನ್ನು ಉಡುಪಿಗೆ ಕರೆಸಿ ಕನ್ನಡ ನಾಟಕಗಳನ್ನು ಪ್ರದರ್ಶಿಸಿದೆ. ಯುವಕರನ್ನು ಕನ್ನಡ ಸಾಹಿತ್ಯದತ್ತ ಸೆಳೆಯಲು ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ಗಳಲ್ಲಿ ನೂರಾರು ವಿಡಿಯೋಗಳನ್ನು ಅಪ್‌ಲೋಡ್‌ ಮಾಡಲಾಗಿದೆ ಎಂದರು ಸಂಸ್ಥೆಯ ಅಧ್ಯಕ್ಷ ಮುರಳೀಧರ ಉಪಾಧ್ಯ.

ಕನ್ನಡ ಕಥೆಗಳ ಸಪ್ತಾಹ:ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ನಾಡಿನ ಶ್ರೇಷ್ಠ ಕಥೆಗಾರರ ಕಥೆಗಳನ್ನು ಒಳಗೊಂಡ ಕಥಾ ಸಪ್ತಾಹ ಆಯೋಜಿಸಿಕೊಂಡು ಬರುತ್ತಿದೆ. ಜತೆಗೆ ಆನ್‌ಲೈನ್‌ನಲ್ಲಿ ಕನ್ನಡದಲ್ಲಿ ನವರಸಗಳ ಅಭಿನಯ ಕಲಿಕೆಗೆ ವೇದಿಕೆ ಒದಗಿಸಿದೆ. ರಂಗಭೂಮಿ ಉಡುಪಿ ಸಂಸ್ಥೆಯು 41 ವರ್ಷಗಳಿಂದ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಗಳನ್ನು ಆಯೋಜಿಸಿಕೊಂಡು ಬರುತ್ತಿದೆ.

ಬ್ರಹ್ಮಾವರದ ಅಜಕುರ ಕರ್ನಾಟಕ ಸಂಘ ಕೂಡ 64 ವರ್ಷಗಳಿಂದ ಪ್ರತಿ ವಿಜಯದಶಮಿಯಂದು ನಾಡಹಬ್ಬವನ್ನು ಕನ್ನಡ ಹಬ್ಬವಾಗಿ ಆಚರಿಸುತ್ತಿದೆ. ಸಾಹಿತಿಗಳನ್ನು ಕರೆಸಿ ಕನ್ನಡ ಭಾಷೆಯ ಬೆಳವಣಿಗೆಯ ಕುರಿತು ವಿಚಾರಗೋಷ್ಠಿಗಳನ್ನು ಆಯೋಜಿಸುತ್ತಿದೆ. ಇದರ ಜತೆಗೆ, ಕೋಟದ ಶಿವರಾಮ ಕಾರಂತ ಪ್ರತಿಷ್ಠಾನ, ಸುಮನಸಾ ಕೊಡವೂರು ಸೇರಿದಂತೆ ಹಲವು ಸಂಸ್ಥೆಗಳು ಕನ್ನಡದೆಡೆಗಿನ ಪ್ರೀತಿ ಹೆಚ್ಚಿಸುವ ಕಾರ್ಯ ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.