ADVERTISEMENT

ಪುರಸಭೆಯಿಂದ ಅನಧಿಕೃತ ಕಟ್ಟಡ ತೆರವು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:28 IST
Last Updated 1 ನವೆಂಬರ್ 2025, 5:28 IST
ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡವನ್ನು ತೆರವುಗೊಳಿಸಲಾಯಿತು
ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡವನ್ನು ತೆರವುಗೊಳಿಸಲಾಯಿತು   

ಕಾಪು (ಪಡುಬಿದ್ರಿ): ಪುರಸಭೆಗೆ ಸೇರಿದ ಜಾಗದಲ್ಲಿ ನಿರ್ಮಾಣಗೊಂಡಿದ್ದ ಅನಧಿಕೃತ ಕಟ್ಟಡದ ಮುಂಭಾಗವನ್ನು ಮುಖ್ಯಾಧಿಕಾರಿ ನಾಗರಾಜ್ ಅವರ ನೇತೃತ್ವದಲ್ಲಿ ಶುಕ್ರವಾರ ತೆರವುಗೊಳಿಸಲಾಯಿತು.

10 ಸೆಂಟ್ಸ್ ಜಮೀನನ್ನು ಬಸ್ ನಿಲ್ದಾಣ ಕಟ್ಟಡದ ಉದ್ದೇಶಕ್ಕಾಗಿ ಕಾಪು ಪಂಚಾಯಿತಿ ಬೋರ್ಡ್ ಹೆಸರಿಗೆ ಧರ್ಮಸಾಧನ ಹಕ್ಕಿನಂತೆ ನೀಡಲಾಗಿತ್ತು. ಆ ಜಮೀನು ಈಗ ಪುರಸಭೆ ವ್ಯಾಪ್ತಿಗೆ ಒಳಪಟ್ಟಿದ್ದು, ಅದರಲ್ಲಿ ಅತಿಕ್ರಮಣವಾಗಿರುವ ಭಾಗವನ್ನು ತೆರವುಗೊಳಿಸಲು ತಹಶೀಲ್ದಾರ್ ಪುರಸಭೆಗೆ ನಿರ್ದೇಶನ ನೀಡಿದ್ದರು.

ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣವಾದ ಅನಧಿಕೃತ ಕಟ್ಟಡ ತೆರವು ಕುರಿತು ಸದಸ್ಯ ಅಮೀರ್ ಅವರು ಗುರುವಾರ ನಡೆದ ಪುರಸಭೆ ಮಾಸಿಕ ಸಭೆಯಲ್ಲಿ ಆಗ್ರಹಿಸಿದ್ದರು. ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದ್ದರು. ಅನಧಿಕೃತ ಕಟ್ಟಡ ತೆರವಿಗೆ ಸಾರ್ವಜನಿಕರಿಂದಲೂ ಭಾರಿ ವಿರೋಧ ವ್ಯಕ್ತವಾಗಿತ್ತು.

ADVERTISEMENT

ಶುಕ್ರವಾರ ಮಧ್ಯಾಹ್ನ ಜೆಸಿಬಿ ಯಂತ್ರದ ಮೂಲಕ ಕಟ್ಟಡದ ಮುಂಭಾಗ ತೆರವುಗೊಳಿಸಲಾಯಿತು. ಈ ವೇಳೆ ಕಟ್ಟಡ ಮಾಲೀಕರು ವಿರೋಧ ವ್ಯಕ್ತಪಡಿಸಿದರು.  ಅಧಿಕಾರಿಗಳು ಲೆಕ್ಕಿಸದೆ ರಸ್ತೆ ಮೇಲೆ ಅಳವಡಿಸಿದ್ದ ಇಂಟರ್‌ಲಾಕ್, ಮುಂಭಾಗ ತೆರವುಗೊಳಿಸಿದರು. ತೆರವು ಕಾರ್ಯದಲ್ಲಿ ಅಧಿಕಾರಿಗಳಾದ ನಯನ ತಾರಾ, ಕಂದಾಯ ಇಲಾಖೆಯ ಶಶಿಕಲಾ, ದಿನೇಶ್, ಪೌರ ಕಾರ್ಮಿಕರು ಭಾಗವಹಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್, ‘ಏಕಾಏಕಿ ನನ್ನ ವಾರ್ಡ್‌ನಲ್ಲಿರುವ ಕಟ್ಟಡ ಕೆಡವಿರುವುದು ಸರಿಯಲ್ಲ. ಕಾಪು ಪೇಟೆಯಲ್ಲಿ ಇತರ ಅನಧಿಕೃತ ಕಟ್ಟಡಗಳೂ ಇವೆ, ಅವುಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.