ADVERTISEMENT

ಜಿಡಿಪಿ | ಕರಾವಳಿ ಕೂಡುಗೆ ಉಲ್ಲೇಖನೀಯ: ಶಾಸಕ ಶರತ್ ಬಚ್ಚೇಗೌಡ

ಕೋಡಿಯಲ್ಲಿ ಬ್ಯಾರೀಸ್ ಉತ್ಸವ ಉದ್ಘಾಟನೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:20 IST
Last Updated 28 ಡಿಸೆಂಬರ್ 2025, 5:20 IST
ಕೋಡಿಯ ಬ್ಯಾರಿಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿದರು 
ಕೋಡಿಯ ಬ್ಯಾರಿಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿದರು    

ಕುಂದಾಪುರ: ರಾಜ್ಯದ ಜಿಡಿಪಿ ಬೆಳವಣಿಗೆಗೆ ಬೆಂಗಳೂರು ಹೊರತು ಪಡಿಸಿದರೆ ಅತಿ ಹೆಚ್ಚು ಕೊಡುಗೆ ಇರುವುದು ಕರಾವಳಿ ಜಿಲ್ಲೆಗಳಿಂದ ಎಂದು ಕಿಯೊನಿಕ್ಸ್ ಅಧ್ಯಕ್ಷ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಕೋಡಿಯ ಬ್ಯಾರಿಸ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ನಡೆದ ಸಂಸ್ಥಾಪಕರ ದಿನಾಚರಣೆ ಹಾಗೂ 120 ನೇ ವರ್ಷಾಚರಣೆಯ ಬ್ಯಾರಿಸ್ ಉತ್ಸವದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜಿಡಿಪಿಯಲ್ಲಿ ಶೇ.40ರಷ್ಟು ಬೆಂಗಳೂರಿನ ಕೊಡುಗೆಯಾದರೆ, ಬಾಕಿ ಉಳಿದ ಜಿಲ್ಲೆಗಳದ್ದು ಶೇ.1ರಷ್ಟು ಪಾಲಿದೆ. ಶೇ.4-5 ರಷ್ಟು ಆರ್ಥಿಕತೆ ಈ ಭಾಗದ್ದು. ರಾಜ್ಯದಲ್ಲಿ ಅತಿ ಉದ್ದದ ಕರಾವಳಿ ತೀರವಿದೆ. ಸಿಆರ್‌ಝಡ್ ನಂತಹ ಅಡೆತಡೆ ನಿವಾರಣೆ ಸೇರಿದಂತೆ ಕರಾವಳಿಗೆ ಪ್ರತ್ಯೇಕ ನೀತಿ ರೂಪಿಸಲು, ಕರಾವಳಿ ಅಭಿವೃದ್ಧಿಗೆ ಪೂರಕವಾಗಿ ‘ಸಿಂಗಲ್ ವಿಂಡೊ ಸಿಸ್ಟಂ’ ಮಾಡಲು ಸರ್ಕಾರ ಚಿಂತಿಸುತ್ತಿದೆ ಎಂದರು.

ADVERTISEMENT

ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ಮಾತನಾಡಿ, ಬ್ಯಾರಿಸ್ ಶಿಕ್ಷಣ ಸಂಸ್ಥೆಗಳು ಇಂದು ಸದೃಢವಾಗಿ ಬೆಳೆದಿದ್ದು, 5 ಸಾವಿರಕ್ಕೂ ಮಿಕ್ಕಿ ಮಕ್ಕಳಿಗೆ ಗುಣಮಟ್ಟ ಹಾಗೂ ಮೌಲ್ಯಧಾರಿತ ಶಿಕ್ಷಣ ನೀಡುತ್ತಿದೆ ಕೇರಳ, ಗೋವಾದಲ್ಲಿ ಸಿಆರ್‌ಝಡ್ ನಿಯಮ 50 ಮೀ. ಇದ್ದರೆ, ನಮ್ಮಲ್ಲಿ 200 ಮೀ. ಇದೆ. ಇದನ್ನು ಸಡಿಲಿಕೆ ಮಾಡುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಕರಾವಳಿಯಲ್ಲಿಯೇ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಲ್ಲಿ ಎಲ್ಲ ಸಾಧಕ- ಬಾಧಕಗಳ ಕುರಿತು ಚರ್ಚೆ ಹಾಗೂ ಸಮಾಲೋಚನೆ ನಡೆಯಲಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಎಂ.ಎ.ಗಫೂರ್ ಹಾಗೂ ಭಂಡಾರ್‌ಕಾರ್ಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಸೋಮಶೇಖರ್ ಉಡುಪ ಅವರನ್ನು ಸನ್ಮಾನಿಸಲಾಯಿತು.

ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಉಪ ವಿಭಾಗಾಧಿಕಾರಿ ರಶ್ಮೀ ಎಸ್.ಆರ್., ಸರ್ಕಾರದ ವಿಷನ್ ಗ್ರೂಪ್ ಫಾರ್ ಹೈಯರ್ ಎಜುಕೇಶನ್ ಹಾಗೂ ರಿಸರ್ಚ್ ನ ಅರುಣ್ ಸೀತಾರಾಮ್, ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಟ್ರಸ್ಟಿಗಳಾದ ಡಾ.ಆಸೀಫ್ ಬ್ಯಾರಿ, ಅಶ್ರಫ್, ಡಾ.ಸಿದ್ದಿಕ್, ಕೋಡಿ ಚಕ್ರಮ್ಮ ದೇವಸ್ಥಾನದ ಅಧ್ಯಕ್ಷ ಗೋಪಾಲ ಪೂಜಾರಿ, ಕೆಎಂಎಫ್ ನ ಮಂಜುನಾಥ್, ಪ್ರಾಂಶುಪಾಲರಾದ ಡಾ.ಪೂರ್ಣಿಮಾ ಶೆಟ್ಟಿ, ಡಾ.ಫಿರ್ದೋಸ್, ಶಬೀನಾ, ಡಾ.ಜಯಶೀಲ ಶೆಟ್ಟಿ, ಜಟ್ಟಪ್ಪ, ಸುಮಿತ್ರಾ ಇದ್ದರು.

ಟ್ರಸ್ಟ್ ಚೇರ್ಮನ್ ಸಯ್ಯದ್ ಮೊಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕಿ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಸ್ವಾತಿ ಮುತ್ತು ಲಮಿಸ್ ನಿರೂಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.