ADVERTISEMENT

‘ಇಂದಿರಾ ಗಾಂಧಿ ದಿಟ್ಟತನ ಸ್ಮರಣೀಯ’

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:28 IST
Last Updated 1 ನವೆಂಬರ್ 2025, 5:28 IST
ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಮಂತ್ರಿ ದಿ.ಇಂದಿರಾ ಗಾಂಧಿ ಪುಣ್ಯಸ್ಮರಣೆ ನಡೆಯಿತು
ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಮಂತ್ರಿ ದಿ.ಇಂದಿರಾ ಗಾಂಧಿ ಪುಣ್ಯಸ್ಮರಣೆ ನಡೆಯಿತು   

ಕಾರ್ಕಳ: ಬ್ಲಾಕ್ ಕಾಂಗ್ರೆಸ್, ನಗರ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

ವಕೀಲ ಶೇಖರ ಮಡಿವಾಳ ಮಾತನಾಡಿ, ಶತ್ರು ರಾಷ್ಟ್ರ ಪಾಕಿಸ್ತಾನದ 90 ಸಾವಿರ ಸೈನಿಕರ ಶರಣಾಗತಿ ಮಾಡಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ದಿಟ್ಟತನ ಸ್ಮರಣೀಯ. ಇಂದಿನ ದಿನಗಳಲ್ಲಿ ಆಡಳಿತಗಾರರು ಯಾವುದೋ ದೇಶದ ಅಧ್ಯಕ್ಷನ ಸೂಚನೆಗೆ ಯುದ್ದ ನಿಲ್ಲಿಸುವುದು ದೇಶದ ದುರಂತ. ತುರ್ತು ಪರಿಸ್ಥಿತಿಯನ್ನು ವಿರೋಧಿಸುವವರು ಬಡವರ ವಿರೋಧಿಗಳು. ತುರ್ತುಪರಿಸ್ಥಿತಿಯ ಬಗ್ಗೆ ದೇಶದ ಜನರಿಗೆ ನಿಜವಾಗಿಯೂ ಆಕ್ರೋಶವಿರುತ್ತಿದ್ದರೆ ತುರ್ತುಪರಿಸ್ಥಿತಿಯ 18 ತಿಂಗಳ ಬಳಿಕ ಇಂದಿರಾ ಗಾಂಧಿ ಅವರನ್ನು ಮತ್ತೆ ಪ್ರಧಾನಿಯಾಗಿ ಆಯ್ಕೆ ಮಾಡುತ್ತಿರಲಿಲ್ಲ ಎಂದರು.

ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್‌ಚಂದ್ರ ಪಾಲ್ ನಕ್ರೆ ಮಾತನಾಡಿ, ದೇಶದ ಭೂ ಸಂಪತ್ತಿನ ಬಹುಪಾಲು ಭಾಗ ದೇಶದ ಶೇ 2‌ ಜನರಲ್ಲಿದ್ದು ಶೇ 98 ಜನರು ಭೂರಹಿತರಾಗಿದ್ದರು. ಭೂ ಸಂಪತ್ತಿನ ಸಮಾನ ಹಂಚಿಕೆಗಾಗಿ ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತಿ ಜಾರಿಗೊಳಿಸಿ ಸಾಮಾನ್ಯ ಜನರು ಸ್ವಾಭಿಮಾನದ ಜೀವನ ಸಾಗಿಸುವಂತೆ ಮಾಡಿದರು. ಇಂದಿರಾ ಅವರು ವಿರೋಧಿಗಳ ಗುಂಡಿಗೆ ಬಲಿಯಾಗಿದ್ದು ದೇಶದ ದುರ್ದೈವ. ಅವರು ಇನ್ನೂ ಸ್ವಲ್ಪ ವರ್ಷ ಬದುಕಿದ್ದರೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತಿತ್ತು ಎಂದರು.

ADVERTISEMENT

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಇಂದಿರಾ ಗಾಂಧಿ ಅವರು ಕಾರ್ಕಳ ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ನಮ್ಮ ಸಂಸದರಾಗಿದ್ದರು ಎನ್ನುವುದೇ ನಮಗೆ ಹೆಮ್ಮೆಯ ವಿಚಾರ. ಅವರ ಸ್ಮರಣಾರ್ಥ ಕಾರ್ಕಳದಲ್ಲಿ ದೊಡ್ಡ ಕಾಂಗ್ರೆಸ್ ಕಚೇರಿ ಇಂದಿರಾ ಭವನ ನಿರ್ಮಾಣವಾಗಲಿದೆ ಎಂದರು.

ಹಿರಿಯಂಗಡಿಯ ಶಂಕರ ದೇವಾಡಿಗ ಉದ್ಘಾಟಿಸಿದರು. ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಡಿಸೋಜ ಸ್ವಾಗತಿಸಿದರು.

ಬ್ಲಾಕ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ತಲಿನೊ, ಜಿಲ್ಲಾ ಕಾಂಗ್ರೆಸ್‌ನ ಸಿರಿಯಣ್ಣ ಶೆಟ್ಟಿ, ಮಾಲಿನಿ ರೈ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಯಶೋದಾ ಶೆಟ್ಟಿ, ಸೇವಾದಳದ ಅಬ್ದುಲ್ ಸಾಣೂರು, ಭೂ ನ್ಯಾಯ ಮಂಡಳಿಯ ಸುನಿಲ್ ಭಂಡಾರಿ, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಸುನಿತಾ ಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ, ರೆಹಮತ್, ಸದಸ್ಯರಾದ ಪ್ರಭಾ, ವಿನ್ನಿ ಬೋಲ್ಡ್, ಶೋಭಾ ಪ್ರಸಾದ್, ಯುವ ಕಾಂಗ್ರೆಸ್‌ನ ಸೂರಜ್ ಶೆಟ್ಟಿ, ಮಂಜುನಾಥ ಜೋಗಿ, ಮಲಿಕ್ ಅತ್ತೂರು, ಯೋಗೀಶ್ ಇನ್ನಾ, ಗ್ಯಾರಂಟಿ ಸಮಿತಿ ‌ಸದಸ್ಯರು, ಜನಪ್ರತಿನಿಧಿಗಳು, ನಾಮ ನಿರ್ದೇಶಿತ ಸದಸ್ಯರು, ವಿವಿಧ ಘಟಕಗಳ ಅಧ್ಯಕ್ಷರು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು, ಕಾರ್ಯಕರ್ತರು ಭಾಗವಹಿಸಿದ್ದರು. ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿದರು. ಪ್ರಭಾಕರ ಬಂಗೇರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.