
ಕಾರ್ಕಳ: ‘ವಿದ್ಯಾರ್ಥಿಗಳು ದೇವರು, ಹೆತ್ತವರು, ಗುರುಹಿರಿಯರನ್ನು ಗೌರವಿಸುವುದನ್ನು ಎಳವೆಯಲ್ಲಿಯೇ ರೂಢಿಸಿಕೊಳ್ಳಬೇಕು’ ಎಂದು ಚಾರ್ಟೆಡ್ ಅಕೌಂಟೆಂಟ್ ಕೆ. ಕಮಾಲಾಕ್ಷ ಕಾಮತ್ ಹೇಳಿದರು.
ಇಲ್ಲಿನ ಗಾಂಧಿ ಮೈದಾನ ಸಮೀಪದ ಕ್ರೈಸ್ಟ್ ಕಿಂಗ್ ಇಂಗ್ಲಿಷ್ ಮಾಧ್ಯಮ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ಸಂಸ್ಕಾರಯುತ ಶಿಕ್ಷಣ ಪಡೆದು ಬದುಕಿನಲ್ಲಿ ಯಶಸ್ವಿಯಾಗಬೇಕು ಎಂದರು.
ಬೈಲೂರು ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಪ್ರೇಮಾ ಜತ್ತನ್ನ ಮಾತನಾಡಿ, ಹದಿಹರೆಯದ ವಿದ್ಯಾರ್ಥಿಗಳು ಜೀವನದಲ್ಲಿ ಎಲ್ಲಿಯೂ ಎಡವದೆ ಸಂಸ್ಕಾರವಂತರಾಗಿ ಜೀವನ ನಡೆಸಿ, ಹೆತ್ತವರು, ಗುರುಗಳಿಗೆ ಕೀರ್ತಿ ತರಬೇಕು ಎಂದರು.
ಕೂಡಬೆಟ್ಟು ಮಾಳ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪ್ರಭಾವತಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆಯಿರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವುದು ಶಿಕ್ಷಕರ ಕರ್ತವ್ಯ. ಈ ವಿದ್ಯಾಸಂಸ್ಥೆಯ ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಕೊಳಕೆ ಇರ್ವತ್ತೂರಿನ ದೈಹಿಕ ಶಿಕ್ಷಣ ಶಿಕ್ಷಕ ಆನಂದ ಪೂಜಾರಿ ಮಾತನಾಡಿದರು. ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಅವೆಲಿನ್ ಲೂಯಿಸ್ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಜ್ಯೋತ್ಸ್ನಾ ಸ್ನೇಹಲತಾ ಶಾಲಾ ವಾರ್ಷಿಕ ವರದಿ ವಾಚಿಸಿದರು. ಪದವಿಪೂರ್ವ ವಿಭಾಗದ ಉಪಪ್ರಾಂಶುಪಾಲ ಪ್ರಕಾಶ್ ಭಟ್, ಆಪ್ತ ಸಮಾಲೋಚಕಿ ಡಾ.ಸಿ. ಶಾಲೆಟ್ ಸಿಕ್ವೇರ, ಸಂಸ್ಥೆಯ ಆಡಳಿತಾಧಿಕಾರಿ ಕಿರಣ್ ಕ್ರಾಸ್ತ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶರೀಟಾ ನೊರೋನ್ಹ ಭಾಗವಹಿಸಿದ್ದರು.
ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕಿ ಆಶಾಜ್ಯೋತಿ ಸ್ವಾಗತಿಸಿದರು. ಮಂಗಳ ಕುಮಾರಿ ವಂದಿಸಿದರು. ನೀತಿ ಆಚಾರ್ಯ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.