ADVERTISEMENT

ಕಾರ್ಕಳ | ಅತ್ಯಾಚಾರ ಪ್ರಕರಣ: ಯುವತಿಯ ರಕ್ತದಲ್ಲಿ ಡ್ರಗ್ಸ್‌ ಅಂಶ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 0:28 IST
Last Updated 26 ಆಗಸ್ಟ್ 2024, 0:28 IST
ಡ್ರಗ್ಸ್‌ (ಸಾಂದರ್ಭಿಕ ಚಿತ್ರ)
ಡ್ರಗ್ಸ್‌ (ಸಾಂದರ್ಭಿಕ ಚಿತ್ರ)   

ಉಡುಪಿ: ಕಾರ್ಕಳದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯ ರಕ್ತ ಪರೀಕ್ಷೆಯ ವರದಿ ಬಂದಿದ್ದು, ಆಕೆಯ ರಕ್ತದ ಮಾದರಿಯಲ್ಲಿ ಡ್ರಗ್ಸ್‌ ಅಂಶ ಪತ್ತೆಯಾಗಿದೆ.

ಮೊದಲ ಆರೋಪಿ ಅಲ್ತಾಫ್‌ನ ರಕ್ತಪರೀಕ್ಷೆಯ ವರದಿ ಹಾಗೂ ಬಿಯರ್ ಬಾಟಲ್ ತಂದುಕೊಟ್ಟ ಎರಡನೇ ಆರೋಪಿ ಕ್ಸೇವಿಯರ್ ರಿಚರ್ಡ್‌ನ ರಕ್ತ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕುಮಾರ್‌ ತಿಳಿಸಿದ್ದಾರೆ.

ಯುವತಿಯ ರಕ್ತದ ಮಾದರಿ ಪರೀಕ್ಷೆಯಲ್ಲಿ ಡ್ರಗ್ಸ್‌ ಅಂಶ ಪತ್ತೆಯಾಗಿರುವ ಕಾರಣ ಆರೋಪಿ ಅಲ್ತಾಫ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಆತ ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿ ‘ಇದನ್ನೇ ಆ ಹುಡುಗಿಗೆ ನೀಡಿದ್ದು’ ಎಂದು ಹೇಳಿದ್ದಾನೆ ಎಂದೂ ವಿವರಿಸಿದ್ದಾರೆ. ‘ಆ ಪುಡಿಯನ್ನು ನಾವು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಅದು ಯಾವ ಮಾದಕ ದ್ರವ್ಯ ಎಂಬುದನ್ನು ದೃಢೀಕರಿಸುತ್ತೇವೆ ಮತ್ತು ಅದನ್ನೇ ಹುಡುಗಿಗೆ ನೀಡಲಾಗಿತ್ತೇ ಎಂಬುದರ ಬಗ್ಗೆ ಕೂಡ ತನಿಖೆ ನಡೆಸುತ್ತೇವೆ’ ಎಂದು ಎಸ್‌ಪಿ ತಿಳಿಸಿದ್ದಾರೆ.

ADVERTISEMENT

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಈ ಮಾದಕದ್ರವ್ಯವನ್ನು ಎಲ್ಲಿಂದ ಪಡೆದಿದ್ದಾರೆ ಮತ್ತು ಇದು ಎಲ್ಲಿಂದ ಬಂದಿದೆ ಎನ್ನುವುದರ ಬಗ್ಗೆ ತನಿಖೆ ನಡೆಯಲಿದೆ ಎಂದಿದ್ದಾರೆ.

‘ಯುವತಿಯ ಆರೋಗ್ಯ ಸ್ಥಿತಿ ಸುಧಾರಿಸಿದ ಬಳಿಕ ಅವರನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಿ, ಆದಷ್ಟು ಬೇಗನೆ ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸುತ್ತೇವೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.