ADVERTISEMENT

ಕಾರ್ಕಳ | ಬೀದಿನಾಯಿ ಕಾಟ: ಜನ ಹೈರಾಣ

ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಅಶ್ವಕ್ ಅಹಮ್ಮದ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 6:11 IST
Last Updated 24 ಸೆಪ್ಟೆಂಬರ್ 2025, 6:11 IST
ಕಾರ್ಕಳ ಪುರಸಭೆಯ ಸಭಾಂಗಣದಲ್ಲಿ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಸದಸ್ಯರು ವಿವಿಧ ವಿಷಯಗಳ ಮೇಲೆ ಚರ್ಚೆಯಲ್ಲಿ ಭಾಗವಹಿಸಿದರು.
ಕಾರ್ಕಳ ಪುರಸಭೆಯ ಸಭಾಂಗಣದಲ್ಲಿ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಸದಸ್ಯರು ವಿವಿಧ ವಿಷಯಗಳ ಮೇಲೆ ಚರ್ಚೆಯಲ್ಲಿ ಭಾಗವಹಿಸಿದರು.   

ಕಾರ್ಕಳ: ಬೀದಿನಾಯಿಗಳ ಕಾಟದಿಂದ ಜನ ಹೈರಾಣಾಗಿದ್ದಾರೆ. ಈ ಕುರಿತು ಪುರಸಭೆ ವತಿಯಿಂದ ಯಾವುದೇ ಕ್ರಮಕೈಗೊಳ್ಳಲಾಗುತ್ತಿಲ್ಲ ಎಂದು ಪುರಸಭಾ ಸದಸ್ಯ ಅಶ್ವಕ್ ಅಹಮ್ಮದ್ ಆರೋಪಿಸಿದರು.

ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ,  ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ ಯಾವುದೇ ಕ್ರಮವಾಗುತ್ತಿಲ್ಲ. ಹೀಗಾಗಿ ಪುರಸಭೆಯ ಆರೋಗ್ಯ ನಿರೀಕ್ಷಕರು ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದರು.

ಈ ಕುರಿತು ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಪ್ರತಿಕ್ರಿಯಿಸಿ, ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಕೂಡಲೇ ಟೆಂಡ‌ರ್ ಕರೆದು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ರಸ್ತೆ ಗುಂಡಿಗಳಿಂದ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ ಎಂದು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.

ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಮೃತ್‌ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಅಲ್ಲಲ್ಲಿ ರಸ್ತೆ ಅಗೆದ ಪರಿಣಾಮವಾಗಿ ರಸ್ತೆಗಳು ಹೊಂಡಮಯವಾಗಿವೆ. ರಸ್ತೆ ದುರಸ್ತಿ ಮಾಡದ ಅಧಿಕಾರಿಗಳ ಹಾಗೂ ಪುರಸಭೆ ಆಡಳಿತದ ವಿರುದ್ಧ ಸದಸ್ಯರು ತಮ್ಮ ಆಕ್ರೋಶ ಹೊರಹಾಕಿದರು.

ಈ ಕುರಿತು ಮಾತನಾಡಿದ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ಅವರು, ಪುರಸಭೆಯ ಎಲ್ಲಾ 23 ವಾರ್ಡುಗಳಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ತಾತ್ಕಾಲಿಕವಾಗಿ ವೆಟ್ ಮಿಕ್ಸ್ ಹಾಕಿ ದುರಸ್ತಿಗೊಳಿಸಲಾಗುವುದು ಎಂದರು. ಅದಕ್ಕೆ ಒಪ್ಪದ ಸದಸ್ಯರು ಪೈಪ್‌ಲೈನ್ ಕಾಮಗಾರಿಗೆ ರಸ್ತೆ ಅಗೆದು ದುರಸ್ತಿ ಮಾಡದೇ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಬೇಕು ಎಂದರು.

ಅಮೃತ್ ಯೋಜನೆಯ ಕಾಮಗಾರಿ ಅವ್ಯವಸ್ಥೆಯ ವಿರುದ್ಧ ಜಿಲ್ಲಾಧಿಕಾರಿ ಬಳಿ ಸದಸ್ಯರು ತೆರಳಿ ಕ್ರಮಕೈಗೊಳ್ಳಲು ವಿನಂತಿಸಲು ಆಗ್ರಹಿಸಿದರು.

ಕಾರ್ಕಳ ಬಸ್ ನಿಲ್ದಾಣದ ಸಾರ್ವಜನಿಕ ಸುಲಭ ಶೌಚಾಲಯಕ್ಕೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ . ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಪುರಸಭೆಯ ಪೈಪ್‌ಲೈನ್‌ನಲ್ಲಿ ಅನಧಿಕೃತ ನೀರಿನ ಸಂಪರ್ಕ ಪಡೆದವರ ನೀರಿನ ಪೈಪ್‌ ಲೈನ್ ತೆಗೆದು ಸರಿಪಡಿಸಬೇಕು ಎಂದು ಸದಸ್ಯೆ ಸುಮಾ ಕೇಶವ ಆಗ್ರಹಿಸಿದರು.

ಸೋಮನಾಥ ನಾಯ್ಕ, ಹರೀಶ್‌ ಕುಮಾರ್, ವಿವೇಕಾನಂದ ಶೆಣೈ, ಪುರಸಭಾ ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ, ಮೀನಾಕ್ಷಿ ಗಂಗಾಧರ ಚರ್ಚೆಯಲ್ಲಿ ಭಾಗವಹಿಸಿದರು. ಪುರಸಭೆಯ ಉಪಾಧ್ಯಕ್ಷ ಪ್ರಶಾಂತ ಕೋಟ್ಯಾನ್‌ ಉಪಸ್ಥಿತರಿದ್ದರು.

ಸಭೆಯಲ್ಲಿ ಪ್ರತಿಧ್ವನಿಸಿದ ರಸ್ತೆ ಗುಂಡಿ ವಿಚಾರ ರಸ್ತೆ ದುರಸ್ತಿಗೆ ಸದಸ್ಯರ ಆಗ್ರಹ

ಬಡವರ ಮನೆಗಳ ದುರಸ್ತಿಗೆ ಅನುದಾನ ಬಿಡುಗಡೆಯಾಗದೇ ಸಮಸ್ಯೆಯಾಗಿದೆ. ಕೂಡಲೇ ಹಣ ಬಿಡುಗಡೆಗೊಳಿಸಬೇಕು ನಳಿನಿ ಆಚಾರ್ಯ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.