ADVERTISEMENT

ಉಡುಪಿಯಲ್ಲಿ ಬಂದ್‌ ನೀರಸ: ವ್ಯಾಪಾರ ವಹಿವಾಟು ಅಬಾಧಿತ

ಬಸ್‌ಗಳನ್ನು ತಡೆಯಲು ಮುಂದಾದ 21 ಪ್ರತಿಭಟನಾಕಾರರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 13:33 IST
Last Updated 28 ಸೆಪ್ಟೆಂಬರ್ 2020, 13:33 IST
ಬಂದ್‌ಗೆ ಬೆಂಬಲ ನೀಡುವಂತೆ ಖಾಸಗಿ ಸರ್ವೀಸ್ ಬಸ್‌ ನಿಲ್ದಾಣದಲ್ಲಿ ಪ್ರತಿಭಟನಾಕಾರರು  ಒತ್ತಾಯಿಸಿದಾಗ ಚಾಲಕರು ಹಾಗೂ ಪ್ರತಿಭಟನಕಾರರ ಮಧ್ಯೆ ವಾಗ್ವಾದ ನಡೆಯಿತು.
ಬಂದ್‌ಗೆ ಬೆಂಬಲ ನೀಡುವಂತೆ ಖಾಸಗಿ ಸರ್ವೀಸ್ ಬಸ್‌ ನಿಲ್ದಾಣದಲ್ಲಿ ಪ್ರತಿಭಟನಾಕಾರರು  ಒತ್ತಾಯಿಸಿದಾಗ ಚಾಲಕರು ಹಾಗೂ ಪ್ರತಿಭಟನಕಾರರ ಮಧ್ಯೆ ವಾಗ್ವಾದ ನಡೆಯಿತು.   

ಉಡುಪಿ: ಭೂಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಸೋಮವಾರ ಕರೆ ನೀಡಲಾಗಿದ್ದ ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾರ್ವಜನಿಕ ಸಾರಿಗೆ, ವ್ಯಾಪಾರ ವಹಿವಾಟು ಎಂದಿನಂತಿತ್ತು. ಜನಜೀವನಕ್ಕೆ ಹೆಚ್ಚು ತೊಂದರೆಯಾಗಲಿಲ್ಲ.

ಬಸ್‌ ಸಂಚಾರಕ್ಕಿಲ್ಲ ಅಡ್ಡಿ: ರಾಜ್ಯ ಬಂದ್‌ಗೆ ಖಾಸಗಿ ಬಸ್‌ಗಳ ಮಾಲೀಕರ ಬೆಂಬಲ ಇರಲಿಲ್ಲ. ಹಾಗಾಗಿ, ಹೊರ ಜಿಲ್ಲೆಗಳಿಗೆ ಸಂಚರಿಸುವ ಸರ್ವೀಸ್‌ ಬಸ್‌ಗಳು ಹಾಗೂ ನಗರದೊಳಗೆ ಸಂಚರಿಸುವ ನಗರ ಸಾರಿಗೆ ಬಸ್‌ಗಳ ಸೇವೆ ಲಭ್ಯವಿತ್ತು. ಆದರೆ, ಪ್ರಯಾಣಿಕರ ಸಂಖ್ಯೆ ವಿರಳವಾಗಿದ್ದರಿಂದ ಶೇ 50ರಷ್ಟು ಬಸ್‌ಗಳು ಮಾತ್ರ ರಸ್ತೆಗಿಳಿದಿದ್ದವು ಎಂದು ಬಸ್‌ ಚಾಲಕರು ತಿಳಿಸಿದರು.‌

ಕೆಎಸ್‌ಆರ್‌ಟಿಸಿ ಸೇವೆ ಅಬಾಧಿತ:ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವೂ ಇತ್ತು. ಆದರೆ, ನೆರೆಯ ಜಿಲ್ಲೆಗಳಲ್ಲಿ ಬಂದ್‌ನ ಬಿಸಿ ಜೋರಾಗಿದ್ದರಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲಿಲ್ಲ. ಕೆಲವು ಮಾರ್ಗಗಳ ಬಸ್‌ಗಳನ್ನು ಕಡಿತಗೊಳಿಸಲಾಗಿತ್ತು.

ADVERTISEMENT

ಹೂ, ಹಣ್ಣು, ತರಕಾರಿ ಮಾರುಕಟ್ಟೆ ಎಂದಿನಂತೆ ತೆರೆದಿದ್ದವು. ಹೋಟೆಲ್‌, ಶಾಪಿಂಗ್ ಮಾಲ್‌, ಅಂಗಡಿ ಮುಂಗಟ್ಟು, ಪೆಟ್ರೋಲ್ ಬಂಕ್‌ ಸೇರಿದಂತೆ ವ್ಯಾಪಾರ ಮಳಿಗೆಗಳು ಕಾರ್ಯಾಚರಿಸಿದವು. ಸಿಟಿ ಬಸ್‌ ನಿಲ್ದಾಣದ ಹಿಂಭಾಗದ ಕೆಲವು ಅಂಗಡಿಗಳು, ಹೋಟೆಲ್‌ಗಳು ಮಾತ್ರ ಬಾಗಿಲು ಮುಚ್ಚಿದ್ದವು. ಪರ್ಯಾಯ ಸಾರ್ವಜನಿಕ ಸಾರಿಗೆಯಾದ ಆಟೊಗಳು ಕೂಡ ರಸ್ತೆಗಳಿದಿದ್ದವು.

ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಬಿಗಿ ಭದ್ರತೆ ಮಾಡಿತ್ತು. ಸೂಕ್ಷ್ಮ ಸ್ಥಳಗಳಲ್ಲಿ ಕೆಎಸ್‌ಆರ್‌ಪಿ ಹಾಗೂ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.