ADVERTISEMENT

ಮಠಕ್ಕೆ ಹಣ ಬಿಡುಗಡೆ ಮಾಡಲು ಯಾರೂ ಕಮಿಷನ್‌ ಪಡೆದಿಲ್ಲ: ಪಲಿಮಾರು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 15:45 IST
Last Updated 18 ಏಪ್ರಿಲ್ 2022, 15:45 IST
ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪಲಿಮಾರು ಮಠ
ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪಲಿಮಾರು ಮಠ   

ಉಡುಪಿ: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪಲಿಮಾರು ಮಠಕ್ಕೆ ಧನ ಸಹಾಯ ನೀಡಲಾಗಿತ್ತು. ಹಣ ಬಿಡುಗಡೆಗೆ ಯಾರೂ ಫಲಾಪೇಕ್ಷೆ ಪಡೆದಿಲ್ಲ ಎಂದು ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ಹಣ ಬಿಡುಗಡೆಗೆ ಶಾಸಕರಾಗಲಿ, ಮಂತ್ರಿಗಳಾಗಲಿ ಕಿಂಚಿತ್ತೂ ಸ್ವಾರ್ಥ ತೋರಿಸಿಲ್ಲ. ಸರ್ಕಾರದಿಂದ ಹಣ ಬಿಡುಗಡೆಗೆ ವಿಳಂಬವಾದಾಗ ಶಾಸಕರು ಹಾಗೂ ಮುಜರಾಯಿ ಸಚಿವರು, ಅಧಿಕಾರಿಗಳು ಮಠದ ನೆರವಿಗೆ ಧಾವಿಸಿದ್ದರು ಎಂದು ಶ್ರೀಗಳು ತಿಳಿಸಿದ್ದಾರೆ.

ಅನುದಾನ ಪಡೆಯಲು ಮಠಗಳೂ ಕಮಿಷನ್ ಕೊಡಬೇಕು ಎಂಬ ಸ್ವಾಮೀಜಿಯ ಹೇಳಿಕೆಯ ಹಿಂದೆ ಕಾರಣಗಳು ಇರಬಹುದು. ಸರ್ಕಾರದ ಪ್ರಾಮಾಣಿಕ ಸೇವೆಯಲ್ಲಿ ಹುಳಿ ಹಿಂಡಬಾರದು, ಪ್ರೋತ್ಸಾಹ ನೀಡಬೇಕು ಎಂದು ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.

ADVERTISEMENT

ಹಿಂದಿನ ಸರ್ಕಾರದ ಅವಧಿಯಲ್ಲಿ ಒಬ್ಬರಿಗೆ ಹೆಚ್ಚು, ಒಬ್ಬರಿಗೆ ಕಡಿಮೆ ಎಂದು ಓಲೈಕೆ ಮಾಡಲಾಗುತ್ತಿತ್ತು. ಆದರೆ ಇಂದಿನ ಸರ್ಕಾರ ಒಂದು ನಾಡು, ಒಂದು ಬೆಳಕು, ಒಂದು ನೀರು ಎಂಬ ನಿಲುವು ಹೊಂದಿರುವುದು ಅಭಿನಂದನೀಯ ಎಂದರು.

ದೇವಾಲಯದ ಸಂಪತ್ತು ದೇವಾಲಯಗಳಿಗೆ ವಿನಿಯೋಗ: ಮುಜರಾಯಿ ಇಲಾಖೆ ವ್ಯಾಪ್ತಿಯ ‘ಎ’ ದರ್ಜೆಯ ದೇವಸ್ಥಾನಗಳ ಸಂಪತ್ತನ್ನು ಬಡ ದೇವಾಲಯಗಳಿಗೆ, ಮಠ ಮಂದಿರಗಳಿಗೆ ಮುಟ್ಟಿಸುವ ಕಾರ್ಯ ಹಿಂದಿನ ಸರ್ಕಾರದಲ್ಲಿ ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಆದರೆ, ಬಿಜೆಪಿ ಸರ್ಕಾರ ದೇವಾಲಯಗಳ ಸಂಪತ್ತನ್ನು ದೇವಾಲಯಗಳಿಗೆ, ಮಠ ಮಂದಿರಗಳಿಗೆ ಮುಟ್ಟಿಸುವ ಕಾಳಜಿ ತೋರುತ್ತಿದೆ. ಕಾಶಿಯಾತ್ರೆಗೆ ಧನ ಸಹಾಯವನ್ನೂ ಮಾಡುತ್ತಿದೆ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.