ಉಡುಪಿ: ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಕೃಷಿಕರಿಗೂ ಹಾಗೂ ಗ್ರಾಹಕರಿಗೂ ಹೆಚ್ಚಿನ ಲಾಭ ಎಂದು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್ ತಿಳಿಸಿದರು.
ಗುರುವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧತೆಗೊಳಿಸುವಿಕೆ ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೃಷಿಕರು ಕಷ್ಟಪಟ್ಟು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ, ಸಂಸ್ಕರಣೆ ಮಾಡಲು ವ್ಯವಸ್ಥೆ ಇಲ್ಲದೆ ಕೈಚೆಲ್ಲುವಂತಹ ಪರಿಸ್ಥಿತಿ ಇದೆ. ನಷ್ದದ ಕಾರಣಕ್ಕೆ ಬೆಳೆಯನ್ನು ಬೀದಿಗೆ ಎಸೆಯುವುದನ್ನು ಕಾಣುತ್ತಿದ್ದೇವೆ. ರೈತರ ಬೆಳೆಗೆ ಸರಿಯಾದ ಬೆಲೆ ಸಿಗಬೇಕಾದರೆ ಉತ್ಪನ್ನಗಳನ್ನು ಸಂಸ್ಕರಿಸಲು ಸಂಸ್ಕರಣಾ ಘಟಕಗಳ ಸ್ಥಾಪನೆ ಅಗತ್ಯ ಎಂದರು.
ಮಾರುಕಟ್ಟೆಗೆ ಹೆಚ್ಚು ಉತ್ಪನ್ನಗಳು ಬಂದರೆ ಸಹಜವಾಗಿ ಬೆಲೆ ಕುಸಿಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಉತ್ಪನ್ನಗಳನ್ನು ಮಾರುವ ಬದಲು ಸಂಸ್ಕರಿಸಿ, ನಿಯಮಿತವಾಗಿ ಕಾಲಕಾಲಕ್ಕೆ ಮಾರುಕಟ್ಟೆಗೆ ಬಿಟ್ಟರೆ ಉತ್ತಮ ಬೆಲೆ ಸಿಗುತ್ತದೆ. ಇದರಿಂದ ಕೃಷಿಕನಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಸಹಕಾರ ಸಂಘಗಳ ಮೂಲಕ ಹಾಲು ಉತ್ಪನ್ನಗಳನ್ನು ಸಂಗ್ರಹಿಸಿ, ಸಂಸ್ಕರಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಮೂಲ್ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಅದೇರೀತಿ ಉತ್ಪನ್ನಗಳನ್ನು ಸಂಸ್ಕರಿಸಿ ಕಾಲಕಾಲಕ್ಕೆ ಮಾರಾಟ ಮಾಡುವುದರಿಂದ ಹೆಚ್ಚು ಲಾಭಗಳಿಸಬಹುದು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಮೀನುಗಾರಿಕೆ ದೊಡ್ಡ ಉದ್ಯಮವಾಗಿದ್ದರೂ ಮೀನು ಉತ್ಪನ್ನವನ್ನು ಸಂಸ್ಕರಿಸಲು ಬೆರಳೆಣಿಕೆ ಸಂಸ್ಕರಣಾ ಘಟಕಗಳಿವೆ. ಮೀನುಗಾರರು ಶ್ರಮ ಹಾಕಿ ಹಿಡಿದು ತರುವ ಮೀನುಗಳನ್ನು ಅಂದೇ ಮಾರಾಟ ಮಾಡಬೇಕಿರುವುದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಬೇಕಾಗುತ್ತದೆ. ಸಂಸ್ಕರಣಾ ಘಟಕಗಳು ನಿರ್ಮಾಣವಾದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.
ಆತ್ಮ ನಿರ್ಭರ ಭಾರತ್ ಅಭಿಯಾನದಡಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ₹ 10,000 ಕೋಟಿ ಅನುದಾನ ನೀಡುತ್ತಿದ್ದು, ರಾಜ್ಯಕ್ಕೆ ₹ 650 ಕೋಟಿ ಹಂಚಿಕೆಯಾಗಿದೆ. ಜಿಲ್ಲೆಯ ಮೀನುಗಾರರು ಇದರ ಲಾಭ ಪಡೆದು ಸಂಸ್ಕರಣಾ ಘಟಕಗಳ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಮಾತನಾಡಿ, ‘ಆತ್ಮ ನಿರ್ಭರ ಭಾರತ್ ಅಭಿಯಾನದ ಭಾಗವಾಗಿ ಪ್ರಧಾನಮಂತ್ರಿ ಕಿರು ಆಹಾರ ಸಂರಕ್ಷಣಾ ಉದ್ದಿಮೆಗಳ ನಿಯಮಬದ್ಧ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಲಾಗಿದೆ. ಉದ್ದಿಮೆದಾರರಿಗೆ ಸಂಸ್ಕರಣೆ ತರಬೇತಿ ಜತೆಗೆ ಸ್ಪರ್ಧಾತ್ಮಕತೆ ಹೆಚ್ಚಿಸುವುದು, ರೈತ ಉತ್ಪಾದನಾ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ಉತ್ಪಾದಕ ಸಹಕಾರಿ ಸಂಘಗಳಿಗೆ ಆಹಾರ ಸಂರಕ್ಷಣೆಯಲ್ಲಿ ಉತ್ತೇಜನ ನೀಡಲಾಗುವುದು’ ಎಂದರು.
ಬೆಂಗಳೂರಿನ ರಾಜ್ಯ ಯೋಜನಾ ನಿರ್ವಹಣಾ ಘಟಕದ ಅಧಿಕಾರಿ ವಿಘ್ನೇಶ್ ‘ಆಹಾರ ಸಂರಕ್ಷಣಾ ಉದ್ದಿಮೆಗಳ ನಿಯಮಬದ್ಧ ಯೋಜನೆ’ ಕುರಿತು, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ.ಚೈತನ್ಯ ತೋಟಗಾರಿಕಾ ಬೆಳೆಗಳಲ್ಲಿ ಮೌಲ್ಯವರ್ಧನೆ ಬಗ್ಗೆ ಹಾಗೂ ಮಂಗಳೂರು ಫಿಶರೀಸ್ ಕಾಲೇಜಿನ ಪ್ರಾಧ್ಯಾಫಕ ಡಾ.ಫಜಲ್ ‘ಮೀನಿನ ಉತ್ಪನ್ನಗಳ ತಯಾರಿ ಮತ್ತು ಮೌಲ್ಯವರ್ಧನೆ’ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕೆಇಪಿಪಿಇಸಿಯ ವ್ಯವಸ್ಥಾಪಕ ನಿರ್ದೇಶಕ ಪರ್ವೆಜ್ ಬಂಟನಾಳ್, ನಬಾರ್ಡ್ ಪ್ರಬಂಧಕಿ ಸಂಗೀತಾ ಕಾರ್ಟ, ರಾಜ್ಯ ಮಟ್ಟದ ಸಾವಯವ ಕೃಷಿಕರ ಉನ್ನತ ಮಟ್ಟದ ಸಮಿತಿಯ ಸದಸ್ಯ ರಾಘವೇಂದ್ರ ಉಪ್ಪಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.