ADVERTISEMENT

ಕಟಪಾಡಿ-ಮಟ್ಟು ಸಂಪರ್ಕ ರಸ್ತೆ ; ದುರಸ್ತಿಗೆ ಜನಾಗ್ರಹ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 11:09 IST
Last Updated 7 ಸೆಪ್ಟೆಂಬರ್ 2019, 11:09 IST
ಹೊಂಡ ಗುಂಡಿಮಯ ಕಟಪಾಡಿ ಮಟ್ಟು ಸಂಪರ್ಕ ರಸ್ತೆ
ಹೊಂಡ ಗುಂಡಿಮಯ ಕಟಪಾಡಿ ಮಟ್ಟು ಸಂಪರ್ಕ ರಸ್ತೆ   

ಶಿರ್ವ: ಕಟಪಾಡಿಯ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖವಾದ ಕಟಪಾಡಿ ಮಟ್ಟು ಸಂಪರ್ಕ ರಸ್ತೆ ಡಾಂಬರ್‌ ಅಲ್ಲಲ್ಲಿ ಕಿತ್ತು ಹೋಗಿ ಸಂಚಾರಕ್ಕೆ ದುಸ್ತರವೆನಿಸಿದೆ. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ವಾಹನ ಚಾಲಕರು ಹರಸಾಹಸಪಟ್ಟು ರಸ್ತೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆಗೆ ಸಮಪರ್ಕವಾದ ಚರಂಡಿ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ಹರಿದು ಹೋಗುತ್ತಿದೆ. ಮಳೆಯ ಕೆಸರು ನೀರು ರಸ್ತೆಯಲ್ಲಿ ಶೇಖರಣೆಗೊಂಡಲ್ಲಿ ಹೊಂಡ ಯಾವುದು, ರಸ್ತೆ ಯಾವುದು ಎಂದು ತೋಚದೆ ದ್ವಿಚಕ್ರವಾಹನಗಳು ಅಪಘಾತಕ್ಕೆ ಒಕ್ಕೊಳಗಾಗುವ ಸಾಧ್ಯತೆ ಇದೆ. ಆಟೊ ರಿಕ್ಷಾ ಚಾಲಕರಂತೂ ಈ ಹದಗೆಟ್ಟಿರುವ ರಸ್ತೆಯಲ್ಲಿ ಬಾಡಿಗೆ ಸಂಚಾರ ಮಾಡಲಾಗದೆ ದಿನನಿತ್ಯತೊಂದರೆಯನ್ನು ಅವಲಂಬಿಸವಂತಾಗಿದೆ.

‘ಕಟಪಾಡಿಯಿಂದ ಮಟ್ಟು ಸೇತುವೆ ಸಮೀಪ ಸುಮಾರು 1.5ಕಿ.ಮೀ. ಉದ್ದದ ಮೀನುಗಾರಿಕಾ ರಸ್ತೆಯಲ್ಲಿ ಅಲ್ಲಲ್ಲಿ ಬೃಹದಾಕಾರದ ಹೊಂಡ ಗುಂಡಿಗಳ ನಿರ್ಮಾಣವಾಗಿದ್ದರೂ ಮಳೆಗಾಲದ ಮೊದಲು ಈ ರಸ್ತೆಯನ್ನು ದುರಸ್ತಿ ಪಡಿಸಿದ್ದರೆ ಇಷ್ಟೊಂದು ಹದಗೆಡುತ್ತಿರಲಿಲ್’ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಕಟಪಾಡಿ ಪೇಟೆಯಿಂದ ಮಟ್ಟು ಕರಾವಳಿ ಪ್ರದೇಶಕ್ಕೆ ತೆರಳುವ ಜನರಿಗೆ ಹಾಗೂ ಕಟಪಾಡಿಯಿಂದ ಅಂಬಾಡಿ ಮಟ್ಟು ಪ್ರದೇಶಕ್ಕೆ ತೆರಳುವ ಸಾರ್ವಜನಿಕರು ಇದೇ ರಸ್ತೆಯನ್ನು ಅವಲಂಬಿಸಿಕೊಂಡಿದ್ದಾರೆ. ಸುಮಾರು ಐದಾರು ವರ್ಷಗಳ ಹಿಂದೆ ಡಾಂಬರೀಕರಣಗೊಂಡಿರುವ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಕಾಣಿಸಿಕೊಂಡು ಇಡೀ ರಸ್ತೆಯೇ ಸಂಚಾರಕ್ಕೆ ಅಯೋಗ್ಯ ಎನಿಸಿದೆ. ಈ ರಸ್ತೆಯಲ್ಲಿ ಮಟ್ಟುವಿನಿಂದ ಉಡುಪಿಗೆ ದಿನಕ್ಕೆ ಏಳೆಂಟು ಬಸ್‌ಗಳು ಸಂಚರಿಸುತ್ತಿವೆ. ಮಲ್ಪೆ ಪಡುಕರೆ, ಕೈಪುಂಜಾಲ್ ಕಡೆಯಿಂದಲೂ ಕಟಪಾಡಿಯತ್ತ ಬರುವ ನೂರಾರು ವಾಹನಗಳು ಈ ರಸ್ತೆಯನ್ನೇ ಅವಲಂಬಿಸಿವೆ.

ಮಟ್ಟು ಕೆನರಾ ಬ್ಯಾಂಕ್‌ ಸಮೀಪ ನೂರಾರು ಮೀಟರ್‌ಗಳಷ್ಟು ಪ್ರದೇಶದಲ್ಲಿ ರಸ್ತೆ ಹೊಂಡಗಳಿಂದ ಕೂಡಿದೆ. ಇದೇ ರಸ್ತೆಯಲ್ಲಿ ಅಂಬಾಡಿ ಜಂಕ್ಷನ್, ಎಸ್.ವಿ.ಎಸ್ ವಿದ್ಯಾಸಂಸ್ಥೆಯ ಬಳಿಯಲ್ಲೂ ರಸ್ತೆ ಹದಗೆಟ್ಟಿದೆ. ಮಟ್ಟು ಕುಂದರದಲ್ಲೂ ರಸ್ತೆ ಹಾಳಾಗಿರುವುದರಿಂದ ಸಾರ್ವಜನಿಕರು ದಿನನಿತ್ಯ ಗೊಣಗುತ್ತಲೇ ಸಂಚರಿಸುತ್ತಿದ್ದಾರೆ.

ರಸ್ತೆಯ ಡಾಂಬರೀಕರಣಕ್ಕೆ ಈ ಮಾಜಿ ಶಾಸಕರು ಚಾಲನೆ ನೀಡಿ ವರ್ಷವೇ ಸಂದಿದ್ದರೂ, ಯಾವುದೇ ರೀತಿಯಲ್ಲಿ ಕಾಮಗಾರಿ ನಡೆಯದಿರುವುದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಸಾಲಿನಲ್ಲಿ ಮೀನುಗಾರಿಕಾ ರಸ್ತೆ ದುರಸ್ತಿ ಯೋಜನೆಯಡಿ ಸುಮಾರು ₹10ಲಕ್ಷ ಅನುದಾನ ಉಪಯೋಗಿಸಿ ರಸ್ತೆ ದುರಸ್ತಿ ಮಾಡಲಾಗಿತ್ತು.ಕೆಲವೆಡೆ ತೇಪೆ ಕಾರ್ಯ ನಡೆದರೂ ಮಳೆಗೆ ಕಳಚಿಹೋಗಿದ್ದು, ಈ ರಸ್ತೆ ಸಂಪುರ್ಣವಾಗಿ ದುರಸ್ತಿಗೊಳ್ಳದ ಕಾರಣ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.