
ಉಡುಪಿ: ಪ್ರಕೃತಿ ಮನುಷ್ಯನಿಗೆ ಯಾವತ್ತಿಗೂ ಒಳ್ಳೆಯದನ್ನೇ ಮಾಡುತ್ತಾ ಬಂದಿದೆ ಆದರೆ ಮನುಷ್ಯ ಅದನ್ನು ಹಿಂಸಿಸುತ್ತಾ ಬಂದಿದ್ದಾನೆ. ಅದೇ ರೀತಿ ಸಮಾಜದಲ್ಲಿ ಕೂಡ ಮಹಿಳೆಯರನ್ನು ಮುಖ್ಯವಾಹಿನಿಯಿಂದ ಬದಿಗೆ ತಳ್ಳುತ್ತಾ ಬರಲಾಗಿದೆ. ಪ್ರಕೃತಿಗೆ ಹಾನಿ ಮಾಡದೆ ಬದುಕುವ ಕಲೆ ಹಾಗೂ ಮಹಿಳೆಯರಿಗೆ ಸ್ಪೂರ್ತಿ, ಪ್ರೇರಣೆ ನೀಡುತ್ತಾ ಬಂದಲ್ಲಿ ಬದುಕು ಮತ್ತು ಸಮಾಜದಲ್ಲಿ ಹೊಸ ಕ್ರಾಂತಿಯನ್ನೇ ಕಾಣಬಹುದಾಗಿದೆ ಎಂದು ಗಾಂಧಿ ಚಿಂತಕ ಕೃಷ್ಣ ಕೊತ್ತಾಯ ಅಭಿಪ್ರಾಯಪಟ್ಟರು.
ಸಾಗರದ ಹೆಗ್ಗೋಡು-ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘವು ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಪವಿತ್ರ ವಸ್ತ್ರ ಯೋಜನೆ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಕೈಮಗ್ಗ ಹಾಗೂ ಕೈಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರಾಂತಿ, ಬದಲಾವಣೆಗಳನ್ನು ದೂರದ ದೇಶ, ರಾಜ್ಯಗಳಲ್ಲಿ ಗುರುತಿಸುವುದಕ್ಕಿಂತ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಣುವ, ಬೆಂಬಲಿಸುವ ಮನಸ್ಥಿತಿ ಬೆಳೆಸಿಕೊಂಡಾಗ ಮಾತ್ರ ನಾವು ಸಹಜ ಮನುಷ್ಯರಾಗಿ ಉಳಿಯಲು ಸಾಧ್ಯ ಎಂದರು.
ಮಾಹೆಯ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ ನಿರ್ದೇಶಕಿ ಡಾ.ಎಚ್.ಎಸ್.ಶುಭಾ ಮಾತನಾಡಿ, ಚರಕದ ಪ್ರತಿ ಬಟ್ಟೆಯ ಒಂದು ನೂಲಿನ ಸಣ್ಣ ಎಳೆಯ ಹಿಂದೆಯೂ ಒಂದೊಂದು ಕಥೆ ಇದೆ. ಇದು ಕೇವಲ ಬಟ್ಟೆ ಅಲ್ಲ. ಗ್ರಾಮೀಣ ಮಹಿಳೆಯ ನೋವು- ನಲಿವಿನ ಬದುಕಿನ ಪವಿತ್ರ ವಸ್ತ್ರ. ಸುಸ್ಥಿರತೆ ಇಲ್ಲಿ ಫ್ಯಾಷನ್ ಅಲ್ಲ. ಇವರ ಬದುಕೇ ಸುಸ್ಥಿರತೆಯಿಂದ ಕೂಡಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ವನಿತಾ ಮಯ್ಯ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರಕ ಸಂಘದ ಅಧ್ಯಕ್ಷೆ ಮಹಾಲಕ್ಷ್ಮಿ ವಹಿಸಿದ್ದರು. ಚರಕ ಸಂಘದ ಸಿಇಒ ಟೆರೆನ್ಸ್ ಪೀಟರ್, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಕೃಷ್ಣ ಉಪಸ್ಥಿತರಿದ್ದರು. ವಿನ್ಯಾಸ ವಿಭಾಗದ ವ್ಯವಸ್ಥಾಪಕಿ ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿದರು.
ಮೇಳದಲ್ಲಿ 10 ಮಳಿಗೆಗಳಿದ್ದು, ಚರಕದ ನೈಸರ್ಗಿಕ ಬಣ್ಣದಿಂದ ಮಾಡಿದ ಬೆಡ್‌ಸ್ಪ್ರೆಡ್‌ಗಳು ಗಮನ ಸೆಳೆದವು. ಅಲ್ಲದೇ, ಜಮ್ದಾನಿ ಕಲೆಯಲ್ಲಿ ಅರಳಿದ ಸೀರೆ, ಖುರ್ತಾ, ಶರ್ಟ್ ಹಾಗೂ ಗೃಹಾಲಂಕಾರದ ಉಡುಪುಗಳು, ಉತ್ತರಕರ್ನಾಟಕ ಭಾಗದ ಕೈಮಗ್ಗದ ಸೀರೆಗಳು, ಸಿರಿಧಾನ್ಯದಿಂದ ತಯಾರಿಸಿದ ವೈವಿಧ್ಯಮಯ ಆಹಾರ ಉತ್ಪನ್ನಗಳು, ಬಾಳೆನಾರಿನ ಉತ್ಪನ್ನಗಳೂ ಇವೆ.