
ಉಡುಪಿ: ಯಕ್ಷಗಾನ ನಮ್ಮ ಸಂಸ್ಕೃತಿಯನ್ನು, ಪುರಾಣ ಜ್ಞಾನವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಅಪೂರ್ವವಾದ ಕಲಾಪ್ರಕಾರವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಈಚೆಗೆ ನಡೆದ ಕಿಶೋರ ಯಕ್ಷಗಾನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ವರ್ಷಗಳಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಿರಂತರ ಅನ್ನದಾನದಂತೆ ಯಕ್ಷಗಾನ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಿ, ಈ ಕಲೆಯ ಆಸರೆಗೆ ಅನುವು ಮಾಡಿಕೊಡಲಾಗುವುದು. ಎಲ್ಲಾ ಮಠ, ಮಂದಿರಗಳು ಇದನ್ನು ಬದ್ಧತೆಯಿಂದ ಮಾಡಬೇಕಾಗಿದೆ ಎಂದರು.
ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳರು ಮಾತನಾಡಿದರು. ಮಾಜಿ ಶಾಸಕ ಕೆ. ರಘುಪತಿ ಭಟ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಭಾಗವಹಿಸಿದ್ದರು.
ಯಕ್ಷಶಿಕ್ಷಣ ಟ್ರಸ್ಟ್ ವಿಶ್ವಸ್ಥ ಎಸ್. ವಿ. ಭಟ್, ಯು. ಎಸ್. ರಾಜಗೋಪಾಲ ಆಚಾರ್ಯರು ಸ್ವಾಮೀಜಿಯವರಿಗೆ ಫಲವಸ್ತು ಸಮರ್ಪಿಸಿದರು.
ಟ್ರಸ್ಟ್ ಕೋಶಾಧಿಕಾರಿ ಗಣೇಶ ಬ್ರಹ್ಮಾವರ, ಯಕ್ಷಗಾನ ಕಲಾರಂಗದ ಕೆ. ಸದಾಶಿವ ರಾವ್, ಭುವನ ಪ್ರಸಾದ ಹೆಗ್ಡೆ, ಎ. ಅನಂತರಾಜ ಉಪಾಧ್ಯಾಯ, ಕೆ. ಅಜಿತ್ ಕುಮಾರ್, ಮಂಜುನಾಥ ಹೆಬ್ಬಾರ, ನಾಗರಾಜ ಹೆಗಡೆ, ದಿನೇಶ ಪೂಜಾರಿ, ಆನಂದ ಶೆಟ್ಟಿ, ನಟರಾಜ ಉಪಾಧ್ಯಾಯ, ಡಾ. ಪ್ರತಿಮಾ ಜೆ. ಆಚಾರ್ಯ ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ವಿ.ಜಿ. ಶೆಟ್ಟಿ ಸ್ವಾಗತಿಸಿದರು. ವಿದ್ಯಾಪ್ರಸಾದ್ ವಂದಿಸಿದರು. ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ವಿದ್ಯೋದಯ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿಗಳಿಂದ ಚರಿತ್ ಹೇರೂರು ನಿರ್ದೇಶನದಲ್ಲಿ ‘ವೀರ ಅಭಿಮನ್ಯು’ ಹಾಗೂ ಕಡಿಯಾಳಿ ಯು. ಕಮಲಾ ಬಾಯಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಕೃಷ್ಣಮೂರ್ತಿ ಭಟ್ ನಿರ್ದೇಶನದಲ್ಲಿ ‘ಶ್ವೇತಕುಮಾರ’ ಯಕ್ಷಗಾನ ಪ್ರಸ್ತುತಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.