
ಕುಂದಾಪುರ: ಇಲ್ಲಿಗೆ ಸಮೀಪದ ಕೋಡಿಯ ಅರಬ್ಬಿ ಕಡಲಿನ ಕಿನಾರೆಯಲ್ಲಿ ಭಾನುವಾರ ಕುಂದಾಪುರದ ‘ಟೀಂ ಪಾರಿಜಾತ’ ಆಯೋಜನೆಯಲ್ಲಿ ಗಾಳಿಪಟ ಉತ್ಸವ–2026 ಯಶಸ್ವಿಯಾಗಿ ನಡೆಯಿತು.
ಬೇರೆ ಬೇರೆ ಪ್ರದೇಶಗಳಿಂದ ಪೋಷಕರೊಂದಿಗೆ ಬಂದಿದ್ದ ಮಕ್ಕಳು, ಆಯೋಜಕರಿಂದ ಉಚಿತವಾಗಿ ನೀಡಲಾದ ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸಿದರು. ನೂರಾರು ಗಾಳಿಪಟಗಳು ಆಕಾಶದಲ್ಲಿ ಹಾರಾಡಿ ಬಣ್ಣದ ಚಿತ್ತಾರ ಮೂಡಿಸಿದವು. ಮಕ್ಕಳೊಂದಿಗೆ ಪೋಷಕರು ಮತ್ತು ಯುವಕರು ಕೂಡ ಉತ್ಸವದಲ್ಲಿ ಭಾಗವಹಿಸಿದರು.
ಉತ್ಸವದ ಸಂಭ್ರಮದಲ್ಲಿ ಪಾಲ್ಗೊಂಡವರಿಗಾಗಿ ಆಯೋಜಿಸಿದ್ದ ‘ಸಂಗೀತ ಸುಧೆ’ ಕಾರ್ಯಕ್ರಮ ಕೇಳುಗರನ್ನು ಮುದಗೊಳಿಸಿತು. ಝೀ ಕನ್ನಡ ಸರಿಗಮಪದ ಶ್ರೀಹರ್ಷ, ಪೃಥ್ವಿ ಭಟ್ ಕನ್ನಡ ಚಲನಚಿತ್ರದ ಪ್ರಸಿದ್ಧ ಹಾಡುಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಕಾರ್ಯಕ್ರಮದ ಯಶಸ್ಸಿನ ಕುರಿತು ಮಾತನಾಡಿದ ಟೀಂ ಪಾರಿಜಾತ ತಂಡದ ಪ್ರಮುಖ ಗಣೇಶ್ ಆರ್. ಭಟ್, ‘ಕೆಲ ವರ್ಷಗಳ ಹಿಂದೆ ಪುತ್ರಿಯ ಆಸೆಯಂತೆ ಗಾಳಿಪಟ ಉತ್ಸವ ನಡೆಸಲಾಗಿತ್ತು. ಈ ಬಾರಿ ನಮ್ಮ ತಂದೆ-ತಾಯಿಯವರಾದ ಪಿ.ರಾಮಚಂದ್ರ ಭಟ್ ಹಾಗೂ ಅಹಲ್ಯ ಆರ್. ಭಟ್ ಅವರ ಸ್ಮರಣಾರ್ಥ ಗಾಳಿಪಟ ಉತ್ಸವ ಆಚರಣೆ ಮಾಡಬೇಕು ಎನ್ನುವ ಸಂಕಲ್ಪದಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆ. ಪ್ರೇಮಾನಂದ ಅವರ ಮಾರ್ಗದರ್ಶನದಲ್ಲಿ ‘ಟೀಂ ಪಾರಿಜಾತ’ ತಂಡದ ಮೂಲಕ ಕಾರ್ಯಕ್ರಮ ಸಂಘಟಿಸಲಾಗಿದೆ. ಗಾಳಿಪಟ ರಚನಾ ಸ್ಪರ್ಧೆ ಹಾಗೂ ಗಾಳಿಪಟ ಉತ್ಸವ ಯಶಸ್ವಿಯಾಗಿ ನಡೆದಿರುವ ಸಂತೋಷವಿದೆ’ ಎಂದರು.
ಜಯರತ್ನ ಚಾರಿಟಬಲ್ ಟ್ರಸ್ಟ್ ಪ್ರವರ್ತಕ ದಿನೇಶ್ ಹೆಗ್ಡೆ ಮೊಳಹಳ್ಳಿ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ ರಾಜೇಶ್ ಕೆ.ಸಿ., ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಬಿ. ಕಿಶೋರ ಕುಮಾರ್, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಯು.ರಾಜೇಶ್ ಕಾರಂತ್, ಅರ್ಪಣಾ ಜಿ. ಭಟ್, ಪ್ರೀತಿ ಜಿ. ಭಟ್, ಸವಿತಾ ಭಟ್, ರವಿ ಹೊಳ್ಳ, ಸಂಧ್ಯಾ ಭಟ್, ದಿನೇಶ್ ಕೆದ್ಲಾಯ ಇದ್ದರು. ಮಾಲಿನಿ ಸತೀಶ್ ನಿರೂಪಿಸಿದರು.
ಗಾಳಿಪಟ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಡಲಿಗೆ ಮಕ್ಕಳು ಇಳಿಯದಂತೆ ಹಾಗೂ ಕಾನೂನು ಸುವ್ಯವಸ್ಥೆಗಾಗಿ ಪೊಲೀಸ್ ನಿರೀಕ್ಷಕ ಜಯರಾಂ ಗೌಡ ಅವರ ಮಾರ್ಗದರ್ಶನದಲ್ಲಿ, ಎಸ್‌ಐ ಪುಷ್ಪಾ ಅವರ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.