ಕುಂದಾಪುರ: ದೇಶದ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಆದಾಯ ಮತ್ತು ಪ್ರತಿ ವರ್ಷ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.
2024-25ನೇ ಸಾಲಿನಲ್ಲಿ ದೇವಸ್ಥಾನದ ಆದಾಯ ₹71.93 ಕೋಟಿ ದಾಟಿದೆ. ಇದು ಹಿಂದಿನ ವರ್ಷಕ್ಕಿಂತಲೂ ₹3.9 ಕೋಟಿಯಷ್ಟು ಹೆಚ್ಚಿದೆ. ಕಳೆದ ಆರ್ಥಿಕ ವರ್ಷದಲ್ಲಿ ₹40.61 ಕೋಟಿ ಖರ್ಚು ಮಾಡಲಾಗಿದೆ. ವಿವಿಧ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ ₹200.83 ಕೋಟಿ ಇರಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನಂತರ ರಾಜ್ಯದಲ್ಲೇ ಅತಿ ಹೆಚ್ಚು ಆದಾಯವಿರುವ ದೇವಸ್ಥಾನ ಕೊಲ್ಲೂರಿನ ಮೂಕಾಂಬಿಕಾ. ಇಲ್ಲಿಗೆ ಬರುವ ಭಕ್ತರು, ಸೇವೆ ಹಾಗೂ ಹರಕೆಯ ರೂಪದಲ್ಲಿ ನೀಡುವ ಹುಂಡಿ ಕಾಣಿಕೆ, ಪೂಜೆ, ಹೋಮ, ಚಿನ್ನಾಭರಣಗಳ ಅರ್ಪಣೆ ಹಾಗೂ ಆನ್‌ಲೈನ್ ಸೇವೆಗಳ ಮೂಲಕ ಬಂದಿರುವ ಒಟ್ಟು ಸಂಗ್ರಹವೇ ದೇಗುಲದ ಆದಾಯದ ಮೂಲವಾಗಿದೆ.
ಕ್ಷೇತ್ರದ ಪ್ರಮುಖ ಸೇವೆಗಳಲ್ಲಿ ಒಂದಾಗಿರುವ ಚಂಡಿಕಾ ಹೋಮವು ದಿನಕ್ಕೆ 12ರಂತೆ ನಡೆಯುತ್ತದೆ. ಚಂಡಿಕಾ ಹೋಮದ ಮೂಲಕ ವಾರ್ಷಿಕ ₹2 ಕೋಟಿಯಷ್ಟು ಆದಾಯ ದೇವಸ್ಥಾನಕ್ಕೆ ಬರುತ್ತದೆ. ವಿಶೇಷ ಸಂದರ್ಭದಲ್ಲಿ ಈ ಹೋಮದ ಸಂಖ್ಯೆ ಜಾಸ್ತಿಯಾಗುತ್ತದೆ. ಚಂಡಿಕಾ ಹೋಮ ಸೇವೆಗಾಗಿ ನಾಲ್ಕೈದು ತಿಂಗಳ ಮುಂಚೆಯೇ ಭಕ್ತರು ಮುಂಗಡ ಕಾಯ್ದಿರಿಸುತ್ತಾರೆ. ಈ ಸೇವೆಗೆ ₹10 ಸಾವಿರ ದರ ಇದೆ. ಭಕ್ತರ ಬೇಡಿಕೆಯಂತೆ ನವಚಂಡಿ, ಶತಚಂಡಿ ಹಾಗೂ ಸಹಸ್ರಚಂಡಿ ಯಾಗಗಳು ನಡೆಯುತ್ತವೆ.
ದೇವಿಗೆ ಭಕ್ತರು ಸೇವೆಯ ರೂಪದಲ್ಲಿ ಅರ್ಪಿಸುವ ಸೀರೆಗಳನ್ನು, ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಭಕ್ತರಿಗೆ ಮಾರಾಟ ಮಾಡಲಾಗುತ್ತದೆ. ಇದರಿಂದಲೂ ದೇವಾಲಯಕ್ಕೆ ಆದಾಯ ಬರುತ್ತದೆ. ವಸತಿಗೃಹ, ಪಾರ್ಕಿಂಗ್, ಪ್ರಸಾದ ಮೂಲಗಳಿಂದಲೂ ಆದಾಯ ಸಂಗ್ರಹವಾಗುತ್ತಿದೆ.
ವಿಶೇಷ ಸೇವೆಗಳು: ತ್ರಿಮಧೂರು, ಕುಂಕುಮಾರ್ಚನೆ, ತುಲಾಭಾರ, ತುಪ್ಪದ ದೀಪ, ಉದಯಾಸ್ತಮಾನ, ಲಾಲಕಿ ಸೇವೆ, ಪುಷ್ಟರಥ, ಚಿನ್ನದ ರಥ, ಮಹಾಪೂಜೆ, ಸುಹಾಸಿನಿ ಪೂಜೆ, ಚಂಡಿಕಾ ಪಾರಾಯಣ, ವಡಾ ನೈವೇದ್ಯ, ಅಪ್ಪಂ ನೈವೇದ್ಯ, ಸೀರೆ ಸಮರ್ಪಣೆ, ಪಾರಂಪರಿಕ ಹಾಗೂ ಕಟ್ಟಕಟ್ಟಳೆ ಸೇವೆ, ವರ್ಷದ ಮಳೆಗಾಲ ಹೊರತು ಪಡಿಸಿ ಉಳಿದ ಋತುಮಾನಗಳಲ್ಲಿ ನಡೆಯುವ ದೀಪಸ್ತಂಭ ದೀಪಾರಾಧನೆ ಹಾಗೂ ಒಳ ಪೌಳಿಯ ಸುತ್ತು ದೀಪಾರಾಧನೆಗಳಿಂದಲೂ ದೇವಾಲಯಕ್ಕೆ ಆದಾಯ ಬರುತ್ತಿದೆ.
ದೇಗುಲದ ವತಿಯಿಂದ ನಡೆಸಲ್ಪಡುವ ಶಾಲಾ-ಕಾಲೇಜುಗಳಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಮಧ್ಯಾಹ್ನ ಹಾಗೂ ರಾತ್ರಿ ಕ್ಷೇತ್ರದಲ್ಲಿ ಅನ್ನಪ್ರಸಾದದ ವ್ಯವಸ್ಥೆ ಇದೆ. ಕೊಲ್ಲೂರಿನ ಅಭಿವೃದ್ಧಿ ಕಾರ್ಯಕ್ರಮಗಳಲ್ಲೂ ದೇವಸ್ಥಾನ ಕೈಜೋಡಿಸುತ್ತಿದೆ. ಜಿಲ್ಲೆಯಾದ್ಯಂತ ನಡೆಯುವ ಸಮಾಜಮುಖಿ ಕಾರ್ಯಕ್ರಮಗಳಿಗೂ ದೇಗುಲದಿಂದ ಸಹಕಾರ ನೀಡಲಾಗುತ್ತಿದೆ.
ವಿಶ್ವಮಾನ್ಯ ಕ್ಷೇತ್ರ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಮಾತ್ರವಲ್ಲದೆ, ಅನೇಕ ವಿದೇಶಿ ಪ್ರಜೆಗಳನ್ನೂ ಭಕ್ತರನ್ನಾಗಿಸಿಕೊಂಡಿರುವ ಕೊಲ್ಲೂರಿನ ಮೂಕಾಂಬಿಕೆಯ ದರ್ಶನಕ್ಕೆ ನಿತ್ಯವೂ ಅಪಾರ ಸಂಖ್ಯೆಯ ಜನರು ಬರುತ್ತಾರೆ. ರಾಜಕಾರಣಿಗಳು, ಉದ್ಯಮಿಗಳು, ಕಲಾರಾಧಕರು, ಕ್ರೀಡಾಪಟುಗಳು, ಹಾಡುಗಾರರು ಹಾಗೂ ಸಾಮಾನ್ಯ ಭಕ್ತರು ದೇವಿಯ ದರ್ಶನಕ್ಕೆ ಬಂದು ಹರಕೆ ಸಲ್ಲಿಸುತ್ತಾರೆ.
ದೇಶದ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ದಕ್ಷಿಣ ಭಾರತದ ಪ್ರಸಿದ್ಧ ಹಾಡುಗಾರ ಕೆ.ಜೆ. ಯೇಸುದಾಸ್, ಸಂಗೀತ ನಿರ್ದೇಶಕ ಇಳಯ್‌ರಾಜ್, ನಟ ನಿರ್ದೇಶಕ ರಿಷಬ್ ಶೆಟ್ಟಿ, ಕೇರಳದ ನಟ ಜಯರಾಂ, ಕ್ರಿಕೆಟಿಗ ರವಿ ಶಾಸ್ತ್ರಿ, ಹಿರಿಯ ಐಪಿಎಸ್ ಅಧಿಕಾರಿ ಶ್ರೀಜಿತ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಿರಿಯ ಕಾಂಗ್ರೆಸ್ ಧುರೀಣ ಕೆ.ಸಿ.ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಬಿಜೆಪಿ ಮುಖಂಡರಾದ ಅಣ್ಣಾಮಲೈ, ಸುರೇಂದ್ರನ್ ಕೇರಳ, ಮಾಜಿ ಮಂತ್ರಿ ಎಚ್.ಡಿ.ರೇವಣ್ಣ ಮುಂತಾದವರು ಕ್ಷೇತ್ರಕ್ಕೆ ನಿರಂತರ ಭೇಟಿ ನೀಡುವ ಭಕ್ತರಾಗಿದ್ದಾರೆ.
ಕ್ಷೇತ್ರದ ಮೇಲೆ ಭಕ್ತರಿಗೆ ಇರುವ ನಂಬಿಕೆಯಿಂದಲೇ ದೇಗುಲದ ಆದಾಯ ಹೆಚ್ಚಾಗುತ್ತಿದೆ. ಭಕ್ತರಿಂದ ಕ್ಷೇತ್ರಕ್ಕೆ ಬರುವ ಪ್ರತಿ ಪೈಸೆಯೂ ಭಕ್ತರಿಗೆ ಸದ್ವಿನಿಯೋಗವಾಗಬೇಕು ಎನ್ನುವ ಬದ್ಧತೆ ವ್ಯವಸ್ಥಾಪನಾ ಸಮಿತಿಗೆ ಇದೆಕೆ.ಬಾಬು ಶೆಟ್ಟಿ ತಗ್ಗರ್ಸೆ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಧಾರ್ಮಿಕ ವಿಧಿಗಳಿಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ದೇಗುಲದ ಆದಾಯವನ್ನು ಎಚ್ಚರಿಕೆಯಿಂದ ಬಳಸಲಾಗುತ್ತಿದೆಪ್ರಶಾಂತ್ಕುಮಾರ ಶೆಟ್ಟಿ ಕಾರ್ಯನಿರ್ಹಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.