ADVERTISEMENT

ಕೊಲ್ಲೂರು: ಮಹಾನವರಾತ್ರಿ ವಿಜೃಂಭಣೆಯ ರಥೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 13:11 IST
Last Updated 1 ಅಕ್ಟೋಬರ್ 2025, 13:11 IST
   

ಕುಂದಾಪುರ:ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಬುಧವಾರ ಮಧ್ಯಾಹ್ನ 1.50 ಕ್ಕೆ ಸಾವಿರಾರು ಭಕ್ತರು ಉಪಸ್ಥಿತಿಯಲ್ಲಿ ಶ್ರೀ ಮೂಕಾಂಬಿಕಾ ದೇವಿಯ ವೈಭವದ ರಥೋತ್ಸವ ಸಂಪನ್ನಗೊಂಡಿತು.

ನವರಾತ್ರಿ ಪ್ರಾರಂಭವಾದ ದಿನದಿಂದ ಮಹಾನವಮಿಯ ತನಕವೂ ದೇವಸ್ಥಾನದಲ್ಲಿ ವಿವಿಧ ಪೂಜೆ ಹಾಗೂ ಧಾರ್ಮಿಕ ಆಚರಣೆಯನ್ನು ನಡೆಸಲಾಗಿತ್ತು. ಬುಧವಾರ ಮಧ್ಯಾಹ್ನ ತಂತ್ರಿ ನಿತ್ಯಾನಂದ ಅಡಿಗರ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿಗಳ ಬಳಿಕ ದೇಗುಲದಿಂದ ಹೊರಕ್ಕೆ ತರಲಾದ ಶ್ರೀ ದೇವಿಯ ಉತ್ಸವ ಮೂರ್ತಿಯ ಪ್ರದಕ್ಷಿಣೆ ಹಾಗೂ ಬಲಿ ಸೇವೆ ನಡೆಸಿದ ಬಳಿಕ ಶ್ರೀ ದೇವಿಯನ್ನು ಅಲಂಕರಿಸಿದ ಪುಷ್ಪ ರಥದಲ್ಲಿ ಕುಳ್ಳಿರಿಸಲಾಯಿತು.

ರಥ ಪೂಜೆ ನಡೆಸಿದ ತಂತ್ರಿಗಳು ಬಳಿಕ ಶ್ರೀದೇವಿಗೆ ಪೂಜೆ ನೆರವೇರಿಸಿ, ಮಂಗಳಾರತಿ ಎತ್ತಿದ ಬಳಿಕ, ಸೇರಿದ್ದ ಸಾವಿರಾರು ಜನರು ಶ್ರೀ ದೇವಿಯ ಜಯ ಘೋಷದೊಂದಿಗೆ ರಥವನ್ನು ಎಳೆದರು. ದೇವಳದ ಒಳ ಪ್ರಾಂಗಣದಲ್ಲಿ ಒಂದು ಸುತ್ತು ರಥ ಕ್ರಮಿಸಿತು.

ADVERTISEMENT

ಬುಧವಾರ ನಡೆದ ಶರನ್ನವರಾತ್ರಿ ಉತ್ಸವಕ್ಕೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಕೋಟಿ ಹರಿದು ಬಂದಿತ್ತು. ಭಕ್ತಾಭಿಮಾನಿಗಳ ನೂಕುನುಗ್ಗಲು ಆಗದಂತೆ ಡಿವೈಎಸ್ಪಿ ಹೆಚ್.ಡಿ.ಕುಲಕರ್ಣಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಸದಸ್ಯರಾದ ಪಿ.ವಿ.ಅಭಿಲಾಶ್, ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ, ರಾಜೇಶ್ ಕಾರಂತ್, ಸುರೇಂದ್ರ ಶೆಟ್ಟಿ, ಧನಾಕ್ಷೀ ಪೂಜಾರಿ, ಸುಧಾ ಬೈಂದೂರು, ಶಾಸಕರಾದ ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜಾ ಮುಂತಾದವರಿದ್ದರು.

ಗುರುವಾರ ವಿಜಯದಶಮಿ ಆಚರಣೆಯ ಅಂಗವಾಗಿ ಬೆಳಿಗ್ಗೆ 3 ಗಂಟೆಯಿಂದ ಪುಟಾಣಿಗಳಿಗೆ ದೇವಸ್ಥಾನದ ಋತ್ವೀಜರ ಮೂಲಕ ಅಕ್ಷರಾಭ್ಯಾಸ ಕಾರ್ಯಕ್ರಮ, ಕದಿರು ಹಬ್ಬದ ಆಚರಣೆ ಹಾಗೂ ನವನ್ನಾಪ್ರಾಶನ ಹಾಗೂ ಸಂಜೆ ವಿಜಯೋತ್ಸವ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.